Scientist Raja Ramanna Birthday: ಭಾರತದ ಅಣುಶಕ್ತಿ ಕಾರ್ಯಕ್ರಮಗಳ ಆರಂಭಿಕ ಹಂತಗಳಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದ ಭೌತಶಾಸ್ತ್ರಜ್ಞರಾದ ರಾಜಾ ರಾಮಣ್ಣ ಅವರು ಜನವರಿ 28, 1925ರಂದು ಕರ್ನಾಟಕದ ತುಮಕೂರಿನಲ್ಲಿ ಜನಿಸಿದರು. ಅವರು ಸೆಪ್ಟೆಂಬರ್ 24, 2004ರಂದು ಮುಂಬೈನಲ್ಲಿ ಅಸುನೀಗಿದರು.
ರಾಜಾ ರಾಮಣ್ಣ ತನ್ನ ಆರಂಭಿಕ ವಿಜ್ಞಾನ ವ್ಯಾಸಂಗವನ್ನು ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿನಲ್ಲಿ ನಡೆಸಿದರು. ಬಳಿಕ ಅವರು ಹೆಚ್ಚಿನ ವ್ಯಾಸಂಗಕ್ಕಾಗಿ ಲಂಡನ್ನಿಗೆ ತೆರಳಿದರು. ಅಲ್ಲಿ ಅವರು ಕಿಂಗ್ಸ್ ಕಾಲೇಜಿನಲ್ಲಿ ಭೌತಶಾಸ್ತ್ರದಲ್ಲಿ ಪಿಎಚ್‌ಡಿ ಪದವಿ ಗಳಿಸಿದರು.
ಇದನ್ನೂ ಓದಿ-ವಿವೇಚನೆಯುಳ್ಳ, ಸೂಕ್ಷ್ಮತೆಯನ್ನೊಳಗೊಂಡ ನವೀನ ಭಾರತ: ಗುರುದೇವ ಶ್ರೀ ರವಿಶಂಕರ್
1949ರಲ್ಲಿ ಭಾರತಕ್ಕೆ ಮರಳಿದ ಬಳಿಕ, ರಾಜಾ ರಾಮಣ್ಣ ಅವರನ್ನು ಹೋಮಿ ಭಾಭಾ ಅವರು ಭಾರತದ ಪರಮಾಣು ಕಾರ್ಯಕ್ರಮದಲ್ಲಿ ಕಾರ್ಯ ನಿರ್ವಹಿಸಲು ಆಯ್ಕೆ ಮಾಡಿಕೊಂಡರು.
ರಾಮಣ್ಣನವರು ಕ್ರಮೇಣ ಬಿಎಆರ್‌ಸಿ ನಿರ್ದೇಶಕ ಹುದ್ದೆಗೆ ಏರಿದರು. ಅಲ್ಲಿ ಅವರು 1974ರಲ್ಲಿ ಪೋಖ್ರಾನ್‌ನಲ್ಲಿ ಅಣ್ವಸ್ತ್ರ ಪರೀಕ್ಷೆ ನಡೆಸಿದ ತಂಡದ ನೇತೃತ್ವ ವಹಿಸಿದರು.
1983ರಲ್ಲಿ ಮಾಧ್ಯಮ ಸಂದರ್ಶನ ಒಂದರಲ್ಲಿ ಮಾತನಾಡಿದ ರಾಜಾ ರಾಮಣ್ಣ, ಪೋಖ್ರಾನ್ ಅಣ್ವಸ್ತ್ರ ಪರೀಕ್ಷೆಯ ಪರಿಣಾಮಗಳು ಭಾರತದ ಅಂತಾರಾಷ್ಟ್ರೀಯ ಸಂಬಂಧಗಳನ್ನು ಬದಲಾಯಿಸುವ ಸಾಧ್ಯತೆಗಳನ್ನು ವಿವರಿಸಿದ್ದರು. "ಅಣ್ವಸ್ತ್ರ ಪರೀಕ್ಷೆ ನಡೆಸಿದ ಬಳಿಕ, ಇತರ ಜಾಗತಿಕ ಶಕ್ತಿಗಳು ನಮ್ಮನ್ನು ಅನುಮಾನದಿಂದ ನೋಡುವ ಸಾಧ್ಯತೆಗಳಿವೆ. ಒಂದು ವೇಳೆ ಇತರ ರಾಷ್ಟ್ರಗಳು ಭಾರತದ ಜೊತೆಗಿನ ತಮ್ಮ ಪೂರೈಕೆ ಒಪ್ಪಂದಗಳನ್ನು ಮರುಪರಿಶೀಲನೆ ನಡೆಸಲು ಯೋಚಿಸಿದರೆ, ಅದು ನನ್ನ ಕೈಗಳಲ್ಲಿ ಇರುವುದಿಲ್ಲ. ನಾವು ಅಣ್ವಸ್ತ್ರ ಪರೀಕ್ಷೆ ನಡೆಸುವ ಮೊದಲೇ, ಅಂತಹ ನಿರ್ಬಂಧಗಳ ಸಾಧ್ಯತೆಗಳ ಕುರಿತು ಮಾತುಕತೆಗಳು ನಡೆದಿದ್ದವು" ಎಂದು ರಾಜಾ ರಾಮಣ್ಣ ವಿವರಿಸಿದ್ದರು.
ಒಂದು ವೇಳೆ ಈ ಅಣ್ವಸ್ತ್ರ ಸ್ಫೋಟದಿಂದ ಭಾರತ ಎದುರಿಸಿದ ಟೀಕೆಗಳು, ಆಕ್ಷೇಪಗಳು ಭಾರತದ ಅಣ್ವಸ್ತ್ರ ಕಾರ್ಯಕ್ರಮದ ಮೇಲೆ ಋಣಾತ್ಮಕ ಪರಿಣಾಮ ಬೀರಿವೆಯೇ ಎಂಬ ಪ್ರಶ್ನೆಗೆ, ರಾಜಾ ರಾಮಣ್ಣ ಉತ್ತರಿಸುತ್ತಾ, "ಈ ಟೀಕೆಗಳು ನಮ್ಮನ್ನು ಹತ್ತು ವರ್ಷಗಳಷ್ಟು ಹಿಂದಕ್ಕೆ ಒಯ್ದಿದೆ ಎನ್ನುವುದು ಕೇವಲ ಶಬ್ದಗಳ ಆಟವಷ್ಟೇ. ವಾಸ್ತವವಾಗಿ ಹೇಳುವುದಾದರೆ, ಈ ಪರೀಕ್ಷೆ ನಮ್ಮ ಪರಮಾಣು ಕಾರ್ಯಕ್ರಮವನ್ನು ಕನಿಷ್ಠ ಐವತ್ತು ವರ್ಷಗಳಷ್ಟು ಮುಂದಕ್ಕೆ ಒಯ್ದಿದೆ ಎಂದು ನಾನು ಹೇಳುತ್ತೇನೆ" ಎಂದಿದ್ದರು.
ರಾಜಾ ರಾಮಣ್ಣನವರು ಅಂದಿನ ಪ್ರಧಾನ ಮಂತ್ರಿ ಇಂದಿರಾ ಗಾಂಧಿಯವರೊಡನೆ ಉತ್ತಮ ಬಾಂಧವ್ಯ ಹೊಂದಿದ್ದರು ಎನ್ನಲಾಗಿದ್ದು, ಅವರ ಅವಧಿಯಲ್ಲೇ ಪೋಖ್ರಾನ್ ಅಣ್ವಸ್ತ್ರ ಪರೀಕ್ಷೆ ನೆರವೇರಿತ್ತು.
2004ರಲ್ಲಿ, ರಾಜಾ ರಾಮಣ್ಣನವರ ನಿಧನದ ಬಳಿಕ, ಶ್ರದ್ಧಾಂಜಲಿ ಅರ್ಪಿಸಿದ ಗಾರ್ಡಿಯನ್ ಪತ್ರಿಕೆ, "1980ರಲ್ಲಿ ಇಂದಿರಾ ಗಾಂಧಿಯವರು ಮರಳಿ ಪ್ರಧಾನ ಮಂತ್ರಿಯಾದಾಗ ಅವರು ಪರಮಾಣು ಯೋಜನೆಗಳ ಕುರಿತು ಸ್ಥಿರ ಆಲೋಚನೆಗಳನ್ನು ಹೊಂದಿದ್ದರು. ಆ ಸಂದರ್ಭದಲ್ಲೂ ರಾಜಾ ರಾಮಣ್ಣನವರು ಇಂದಿರಾ ಗಾಂಧಿಯವರೊಡನೆ ಸಂಪರ್ಕದಲ್ಲಿದ್ದರು" ಎಂದು ವರದಿ ಮಾಡಿತ್ತು.
ಅವರ ಸಾಧನೆಗಳನ್ನು ಗುರುತಿಸಿ, ಭಾರತ ಅವರಿಗೆ ಎರಡನೇ ಅತ್ಯುನ್ನತ ನಾಗರಿಕ ಪುರಸ್ಕಾರವಾದ ಪದ್ಮ ವಿಭೂಷಣ ನೀಡಿ ಗೌರವಿಸಿತ್ತು.
ತನ್ನ ವೃತ್ತಿಪರ ಜೀವನದಾದ್ಯಂತವೂ ರಾಜಾ ರಾಮಣ್ಣನವರು ಭಾರತದ ಅಣುಶಕ್ತಿ ಆಯೋಗದ ಅಧ್ಯಕ್ಷ, ಅಣುಶಕ್ತಿ ಇಲಾಖೆಯ ಕಾರ್ಯದರ್ಶಿಯಂತಹ ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದರು. 1978ರಲ್ಲಿ, ಅವರು ಬಾಗ್ದಾದ್ ಪ್ರವಾಸಕ್ಕೆ ತೆರಳಿದ್ದ ಸಂದರ್ಭದಲ್ಲಿ, ಇರಾಕ್ ಸರ್ವಾಧಿಕಾರಿ ಸದ್ದಾಂ ಹುಸೇನ್ ರಾಮಣ್ಣನವರನ್ನು ಇರಾಕಿನ ಅಣ್ವಸ್ತ್ರ ಯೋಜನೆಯ ನೇತೃತ್ವ ವಹಿಸುವಂತೆ ಮನ ಒಲಿಸಲು ಪ್ರಯತ್ನಿಸಿದ್ದರು. "ನೀವು ಈಗಾಗಲೇ ನಿಮ್ಮ ದೇಶಕ್ಕೆ ಸಾಕಷ್ಟು ಕೊಡುಗೆ ನೀಡಿದ್ದೀರಿ. ಆದ್ದರಿಂದ ನೀವು ಇನ್ನು ಭಾರತಕ್ಕೆ ಮರಳುವ ಅವಶ್ಯಕತೆ ಇಲ್ಲ. ನೀವು ಇರಾಕ್‌ನಲ್ಲೇ ಇದ್ದು, ನಮ್ಮ ಅಣ್ವಸ್ತ್ರ ಯೋಜನೆಯ ನೇತೃತ್ವ ವಹಿಸಿಕೊಳ್ಳಿ. ಅದಕ್ಕೆ ನಿಮಗೆ ಬೇಕಾದಷ್ಟು ಮೊತ್ತವನ್ನು ಕೇಳಿ" ಎಂದು ಸದ್ದಾಂ ಹುಸೇನ್ ನೇರವಾಗಿ ಹೇಳಿದ್ದರಂತೆ. ಆದರೆ ರಾಜಾ ರಾಮಣ್ಣ ಹುಸೇನ್ ಮನವಿಯನ್ನು ತಿರಸ್ಕರಿಸಿ, ಶೀಘ್ರವಾಗಿ ಭಾರತಕ್ಕೆ ಮರಳಿದರು.
1990ರಲ್ಲಿ, ರಾಜಾ ರಾಮಣ್ಣನವರು ಪ್ರಧಾನಿ ವಿಪಿ ಸಿಂಗ್ ಅವರ ಸರ್ಕಾರದಲ್ಲಿ ರಕ್ಷಣಾ ಖಾತೆ ರಾಜ್ಯ ಸಚಿವರಾಗಿ ನೇಮಕಗೊಂಡರು. 1997ರಿಂದ 2003ರ ತನಕ ಅವರನ್ನು ರಾಜ್ಯಸಭಾ ಸದಸ್ಯರಾಗಿ ನೇಮಿಸಲಾಯಿತು. ಡಾ. ರಾಜಾ ರಾಮಣ್ಣನವರು ಐಐಟಿ ಬಾಂಬೆ ಜೊತೆ ಉತ್ತಮ ಬಂಧ ಹೊಂದಿದ್ದರು. ಅವರು 1975ರಿಂದ 1984ರ ತನಕ ನಿರಂತರವಾಗಿ ಮೂರು ಅವಧಿಗಳಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಅದರೊಡನೆ, 2000ನೇ ಇಸವಿಯಲ್ಲಿ, ರಾಜಾ ರಾಮಣ್ಣನವರು ಬೆಂಗಳೂರಿನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್‌ನ ಮೊದಲ ನಿರ್ದೇಶಕರಾಗಿ ನೇಮಕಗೊಂಡರು.
ಇಂದು ರಾಜಾ ರಾಮಣ್ಣನವರ 99ನೇ ಜನ್ಮ ದಿನದ ಸಂದರ್ಭದಲ್ಲಿ, ಭಾರತ ಜಾಗತಿಕವಾಗಿ ಪ್ರಮುಖ ಅಣುಶಕ್ತಿಯಾಗಿ ಹೊರಹೊಮ್ಮಲು ಸಾಕಷ್ಟು ಕೊಡುಗೆ ನೀಡಿದ್ದ ಅವರ ಕೊಡುಗೆಗಳನ್ನು ಸ್ಮರಿಸೋಣ.
ವಿಜ್ಞಾನ ಪ್ರಸಾರ ಜಾಲತಾಣದಲ್ಲಿರುವ ರಾಜಾ ರಾಮಣ್ಣನವರ ಆತ್ಮಕತೆಯ ಪ್ರಸ್ತಾಪದ ಪ್ರಕಾರ, 1991ರಲ್ಲಿ ರಾಜಾ ರಾಮಣ್ಣ ಬರೆದ 'ಇಯರ್ಸ್ ಆಫ್ ಪಿಲಿಗ್ರಿಮೇಜ್' ಎಂಬ ತನ್ನ ಆತ್ಮಕತೆಯಲ್ಲಿ, ತನ್ನ ತಾಯಿ ರುಕ್ಮಿಣಮ್ಮ ಶ್ರೀಮಂತ ಕುಟುಂಬದಿಂದ ಬಂದಿದ್ದು, ಅತ್ಯುತ್ತಮ ಓದುಗರಾಗಿದ್ದರು ಎಂದಿದ್ದರು. ಗಮನಾರ್ಹ ವಿಚಾರವೆಂದರೆ, ರುಕ್ಮಿಣಮ್ಮ ಮೈಸೂರಿನ ತನ್ನ ಮನೆಯಲ್ಲಿ ವಿದ್ಯುತ್ ಸಂಪರ್ಕ ಹೊಂದಿದ್ದ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಹೊಂದಿದ್ದರು ಎಂದು ರಾಜಾ ರಾಮಣ್ಣ ವಿವರಿಸಿದ್ದರು.
ಇದನ್ನೂ ಓದಿ-Nitish Kumar: ಇದೇ ಕಾರಣಕ್ಕೆ I.N.D.I.A ತೊರೆದ ನಿತೀಶ್ ಕುಮಾರ್! ಶಾಕಿಂಗ್ ಸತ್ಯ ಬಹಿರಂಗ
ರಾಜಾ ರಾಮಣ್ಣ ತನ್ನ ತಂದೆ ಬಿ ರಾಮಣ್ಣನವರು ಮೈಸೂರು ಸಂಸ್ಥಾನದ ನ್ಯಾಯಾಂಗ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದು, ಓರ್ವ ಕರುಣಾಮಯಿ ನ್ಯಾಯಾಧೀಶರೆಂದು ಹೆಸರಾಗಿದ್ದರು ಎಂದಿದ್ದರು.
ರಾಜಾ ರಾಮಣ್ಣನವರ ಆರಂಭಿಕ ಶಾಲಾ ವ್ಯಾಸಂಗ ಮೈಸೂರು ಮತ್ತು ಬೆಂಗಳೂರಿನಲ್ಲಿ ನಡೆದಿತ್ತು. ಅವರು ಬಿಷಪ್ ಕಾಟನ್ ಶಾಲೆ ಮತ್ತು ಸೈಂಟ್ ಜೋಸೆಫ್ ಶಾಲೆಗಳಲ್ಲಿ ವಿದ್ಯಾಭ್ಯಾಸ ನಡೆಸಿದ್ದರು.
ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=xFI-KJNrEP8
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.