ನವದೆಹಲಿ: ಕೇಂದ್ರ ಸರ್ಕಾರದಿಂದ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಆರ್ಟಿಕಲ್ 35 ಎ ಅನ್ನು ರದ್ದು ಮಾಡಿ ಘೋಷಿಸಿದ ಬಳಿಕ, ಜಮ್ಮು-ಕಾಶ್ಮೀರದಲ್ಲಿ ಭದ್ರತೆಯ ವಿಷಯದಲ್ಲಿ ಸರ್ಕಾರ ಮತ್ತೊಂದು ಪ್ರಮುಖ ಹೆಜ್ಜೆ ಕೈಗೊಂಡಿದೆ.
ಸುದ್ದಿ ಸಂಸ್ಥೆ ಎಎನ್‌ಐ ಪ್ರಕಾರ, ಉತ್ತರ ಪ್ರದೇಶ, ಒಡಿಶಾ, ಅಸ್ಸಾಂ ಮತ್ತು ದೇಶದ ಇತರ ಭಾಗಗಳಿಂದ 8000 ಕ್ಕೂ ಅಧಿಕ ಅರೆಸೈನಿಕ ಪಡೆಗಳನ್ನು ವಿಮಾನದ ಮೂಲಕ ಜಮ್ಮು ಮತ್ತು ಕಾಶ್ಮೀರಕ್ಕೆ ಕಳುಹಿಸಲಾಗುತ್ತಿದೆ. ಭದ್ರತಾ ಪಡೆಗಳ ನಿಯೋಜನೆ ರಾಜ್ಯದಲ್ಲಿ ಮುಂದುವರೆದಿದೆ. ಅಲ್ಲದೆ, ಭಾರತೀಯ ಸೇನೆ ಮತ್ತು ವಾಯುಪಡೆಯನ್ನು ಸಹ ಅಲರ್ಟ್ ಆಗಿ ಇರುವಂತೆ ಸೂಚನೆ ನೀಡಲಾಗಿದೆ.
ಕಣಿವೆ ರಾಜ್ಯ ಜಮ್ಮು-ಕಾಶ್ಮೀರಕ್ಕೆ ಸಂಬಂಧಿಸಿದಂತೆ ಐತಿಹಾಸಿಕ ನಿರ್ಣಯ ಕೈಗೊಂಡಿದ್ದು, ರಾಜ್ಯಸಭೆ ಕಲಾಪ ಆರಂಭವಾಗುತ್ತಿದ್ದಂತೆಯೇ ವಿಪಕ್ಷಗಳ ತೀವ್ರ ಗದ್ದಲದ ನಡುವೆಯೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಅನುಚ್ಛೇದ 370 ಮತ್ತು 35 ಎ ರದ್ದುಗೊಳಿಸುವ ಬಗ್ಗೆ ಪ್ರಸ್ತಾಪ ಮಂಡಿಸಿದರು.
ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ 10 ಸಾವಿರ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಲು ಗೃಹ ಸಚಿವಾಲಯ ಈಗಾಗಲೇ ಘೋಷಿಸಿದೆ. ಸೋಮವಾರ, ಜಮ್ಮುವಿನ 8 ಜಿಲ್ಲೆಗಳಲ್ಲಿ 40 ಸಾವಿರ ಸಿಆರ್‌ಪಿಎಫ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.