ನವದೆಹಲಿ: ಗುಜರಾತ್ನಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ರೈಲು ಮತ್ತು ವಿಮಾನ ಸಂಚಾರಕ್ಕೆ ಭಾರೀ ಅಡ್ಡಿ ಉಂಟಾಗಿದೆ. ಗುಜರಾತ್ನ ಕೆಲವು ಭಾಗಗಳಲ್ಲಿ ರೈಲು ಸಂಚಾರವನ್ನು ರದ್ದುಪದಿಸಲಾಗಿದ್ದು, 12 ರೈಲು ಮಾರ್ಗಗಳನ್ನು ಬದಲಾಯಿಸಲಾಗಿದೆ. ಅಷ್ಟೇ ಅಲ್ಲದೆ, ವಡೋದರಾ ವಿಮಾನ ನಿಲ್ದಾಣದಲ್ಲಿ ಗುರುವಾರ ಬೆಳಿಗ್ಗೆ 9 ಗಂಟೆಯವರೆಗೆ ವಿಮಾನ ಸೇವೆ ಸಹ ಸ್ಥಗಿತಗೊಳಿಸಲಾಗಿದೆ.
ವಡೋದರಾದಲ್ಲಿ ಭಾರಿ ಮಳೆಯಿಂದಾಗಿ ಹಲವು ಪ್ರದೇಶಗಳು ಜಲಾವೃತವಾಗಿದ್ದು, ಜನರನ್ನು ರಕ್ಷಿಸಲು ಎನ್ಡಿಆರ್ಎಫ್ ತಂಡವನ್ನು ನಿಯೋಜಿಸಲಾಗಿಯಲ್ಲದೆ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಕಳೆದ ಹಲವು ದಿನಗಳಿಂದ ಗುಜರಾತ್ ಮತ್ತು ಮಹಾರಾಷ್ಟ್ರದ ಹಲವು ಭಾಗಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಇದುವರೆಗೆ 50 ಕ್ಕೂ ಹೆಚ್ಚು ಜನರು ಮಳೆಯಿಂದ ಸಾವನ್ನಪ್ಪಿದ್ದಾರೆ.
ವಡೋದರಾದಲ್ಲಿ ಭಾರಿ ಮಳೆಯಿಂದಾಗಿ ರದ್ದಾದ ರೈಲುಗಳಲ್ಲಿ ವಡೋದರ-ಮುಂಬೈ 12928, ಮುಂಬೈ ಸೆಂಟ್ರಲ್-ವಡೋದರಾ 12927, ಪೊರ್ಬಂದರ್ - ಮುಂಬೈ ಸೆಂಟ್ರಲ್ 19016, ಅಹಮದಾಬಾದ್-ಬಾಂದ್ರಾ ಟರ್ಮಿನಸ್ 22928, ಅಹಮದಾಬಾದ್-ಮುಂಬೈ ಸೆಂಟ್ರಲ್ 12902, ಅಹಮದಾಬಾದ್-ಮುಂಬೈ ಸೆಂಟ್ರಲ್ 59440 ಮತ್ತು ಭುಜ್-ಬಾಂದ್ರಾ ಟರ್ಮಿನಸ್ 19116 ರೈಲುಗಳೂ ಸೇರಿವೆ.
ವಡೋದರಾದಲ್ಲಿ ಮಳೆಯಿಂದಾಗಿ ಉಂಟಾಗಿರುವ ಪರಿಸ್ಥಿತಿಯನ್ನು ನಿಭಾಯಿಸಲು ಗಾಂಧಿನಗರದ ರಾಜ್ಯ ನಿಯಂತ್ರಣ ಕಚೇರಿಯಲ್ಲಿ ಅಧಿಕಾರಿಗಳ ತುರ್ತು ಸಭೆ ನಡೆಸಿದ ನಂತರ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರು, ತುರ್ತು ಪರಿಸ್ಥಿತಿಯನ್ನು ಎದುರಿಸಲು ಆಡಳಿತವು 24 ಗಂಟೆಗಳ ಸಕ್ರಿಯ ತುರ್ತು ಪರಿಸ್ಥಿತಿ ನಿರ್ವಹಣಾ ಸೇವೆಯನ್ನು ಆರಂಭಿಸಲು ಸೂಚನೆ ನೀಡಿದ್ದಾರೆ.