ಹುಬ್ಬಳ್ಳಿ: ಬಿಜೆಪಿಯ ನವ ಕರ್ನಾಟಕ ಪರಿವರ್ತನಾ ಯಾತ್ರೆಯಲ್ಲಿ ಪಾಲ್ಗೊಳ್ಳಲು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆಗಮಿಸಿದ್ದಾರೆ.
ಹುಬ್ಬಳ್ಳಿಯ ವಿಮಾನ ನಿಲ್ದಾಣದಿಂದ ನೇರವಾಗಿ ಮೂರು ಸಾವಿರ ಮಟ್ಟಕ್ಕೆ ತೆರಳಿ ನಂತರ ಯೋಗಿ ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ನಡೆಯುತ್ತಿರುವ ಬಿಜೆಪಿ ನವಕರ್ನಾಟಕ ಪರಿವರ್ತನಾ ಯಾತ್ರೆಯಲ್ಲಿ ಪಾಲ್ಗೊಂಡರು.
ಕಾರ್ಯಕ್ರಮದಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಕಳಸಾ ಬಂಡೂರಿ, ಮಹದಾಯಿ ವಿವಾದ ಬಗ್ಗೆ ಕಾತುರರಾಗಿ ನೀವು ಕಾಯುತ್ತಿದ್ದೀರಿ. ಬುಧವಾರ ದೆಹಲಿಯಲ್ಲಿ ಅಮಿತ್ ಷಾ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಹದಾಯಿ ವಿವಾದದ ಬಗ್ಗೆ ನಡೆದ ಸಭೆ ನನಗೆ ತೃಪ್ತಿ ತಂದಿದೆ. ಅದರ ಬಗ್ಗೆ ಇಂದು(ಡಿ.21) ರ ಪರಿವರ್ತನಾ ಯಾತ್ರೆಯಲ್ಲಿ ಈ ಬಗ್ಗೆ ಘೋಷಿಸಲಾಗುವುದು ಎಂದು ಹೇಳಿದ್ದೆ. ಆ ಬಗ್ಗೆ ನಾನೀಗ ಮಾತನಾಡುತ್ತೇನೆ ಎಂದು ಹೇಳಿದ ಅವರು ಬುಧವಾರ ಅಮಿತ್ ಷಾ ನೇತೃತ್ವದಲ್ಲಿ ಸಭೆ ನಡೆಯಿತು. ಅದರ ನಂತರ ಸ್ವತಃ ಗೋವಾ ಮುಖ್ಯ ಮಂತ್ರಿ ಮನೋಹರ್ ಪರಿಕ್ಕರ್ ಬರೆದಿರುವ ಪತ್ರವನ್ನು ಓದುತ್ತೇನೆ ಎಂದು ತಿಳಿಸಿ ಪರಿಕ್ಕರ್ ಅವರು ಬರೆದಿರುವ ಪತ್ರವನ್ನು ಓದಿದರು.
ಉತ್ತರ ಕರ್ನಾಟಕದ ಬರಗಾಲ ಪ್ರದೇಶದ ಕುಡಿಯುವ ನೀರಿನ ಸಮಸ್ಯೆ ಕುರಿತು ನೀವು ಬರೆದಿರುವ ಪತ್ರ ತಲುಪಿದೆ. ಕುಡಿಯುವ ನೀರಿನ ಲಭ್ಯತೆ ಮನುಷ್ಯ ಜೀವನದ ಮೂಲಭೂತ ಅವಶ್ಯಕತೆ ಎಂದು ಗೋವಾ ಸರ್ಕಾರಕ್ಕೆ ಅರಿವಿದೆ. ಆದ್ದರಿಂದ ಮಾನವೀಯತೆ ದೃಷ್ಟಿಯಿಂದ ಗೋವಾ ಸರ್ಕಾರವು ಉತ್ತರ ಕರ್ನಾಟಕದ ಜನತೆಗೆ ಕುಡಿಯುವ ನೀರನ್ನು ಒದಗಿಸಲು ಸಿದ್ದವಿದೆ. ಈ ಬಗ್ಗೆ ಟ್ರಿಬ್ಯುನಲ್ ಗೆ ಅರ್ಜಿ ಹಾಕಿಸಿ ಕುಡಿಯುವ ನೀರಿನ ಬಗ್ಗೆ ಸ್ಪಷ್ಟ ಮಾಹಿತಿ ನೀಡುವುದಾಗಿ ಹೇಳಿರುವ ಪರಿಕ್ಕರ್ ಅವರ ಸಂದೇಶವನ್ನು ಬಿಎಸ್ವೈ ತಮ್ಮ ಭಾಷಣದಲ್ಲಿ ತಿಳಿಸಿದರು.
ನಂತರ ಮಾತನಾಡಿದ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಕರ್ನಾಟಕದ ನೆಲ ಶೌರ್ಯದ ನಾಡು, ವಿಜಯನಗರ ಸಾಮ್ರಾಜ್ಯ ಆಳಿದ ನಾಡು. ಆದರೆ ದುರ್ದೈವವೆಂದರೆ ಕಾಂಗ್ರೇಸ್ ನವರು ಹನುಮನನ್ನು ಪೂಜಿಸಲ್ಲ, ಟಿಪ್ಪುವನ್ನು ಪೂಜಿಸುತ್ತಾರೆ. ಟಿಪ್ಪುವನ್ನು ಪೂಜೆಮಾಡುವವರು ಅಧಿಕಾರಕ್ಕೆ ಬರಬಾರದು ಎಂದು ಕಾಂಗ್ರೇಸ್ ವಿರುದ್ಧ ವಾಗ್ದಾಳಿ ನಡೆಸಿದರು. ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ನೋವುಂಟು ಮಾಡಿದೆ. ಕರ್ನಾಟಕದಲ್ಲಿ ಕಾಂಗ್ರೇಸ್ ನೇತೃತ್ವದ ಸರ್ಕಾರದಲ್ಲಿ ಕಾನೂನು ವ್ಯವಸ್ಥೆ ಹದಗೆಟ್ಟಿದೆ. ಹಲವು ಹತ್ಯೆಗಳು ನಡೆದು ಕರ್ನಾಟಕಕ್ಕೇ ಕಳಂಕ ತಂದಿದೆ. ಹಾಗಾಗಿ ಕರ್ನಾಟಕವನ್ನು ಕಾಂಗ್ರೇಸ್ ಮುಕ್ತವಾಗಿ ಮಾಡಬೇಕು ಎಂದು ಕರೆ ನೀಡಿದರು.
ಈ ಬಾರಿ ಚುನಾವಣೆಯಲ್ಲಿ ಕಾಂಗ್ರೇಸ್ಗೆ ಸೋಲುಣಿಸಬೇಕಿದೆ. ರಾಜ್ಯದ ಅಭಿವೃದ್ಧಿಗಾಗಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರಬೇಕು. ಹುಬ್ಬಳ್ಳಿ-ಧಾರವಾಡಗಳಲ್ಲಿ ಅಭಿವೃದ್ಧಿಯಾಗಲು ಪ್ರಧಾನಿ ಮೋದಿ ಕಾರಣ. ಉತ್ತರ ಕರ್ನಾಟಕದ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರದಿಂದ 10 ಸಾವಿರ ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಬಿಎಸ್ವೈ ನೇತೃತ್ವದಲ್ಲಿ ಪರಿವರ್ತನಾ ಯಾತ್ರೆ ಸಫಲವಾಗಲಿ. ಬಿ.ಎಸ್. ಯಡಿಯೂರಪ್ಪ ಮುಂದಿನ ಮುಖ್ಯಮಂತ್ರಿ ಯಾಗಲಿ ಎಂದು ಶುಭ ಹಾರೈಸಿದರು.