ಬಾಗಲಕೋಟೆ: ರಾಜ್ಯದಲ್ಲಿ ಮೂಡಿರುವ ದೋಸ್ತಿ ಬಿಕ್ಕಟ್ಟಿನ ಬಗ್ಗೆ ಪ್ರತಿಕ್ರಿಯಿಸಿರುವ ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷ ಪ್ರಮೋದ್ ಮುತಾಲಿಕ್, ರಾಜ್ಯ ರಾಜಕಾರಣ ಅಸಹ್ಯ ಮೂಡಿಸಿದೆ ಎಂದು ಹೇಳಿದ್ದಾರೆ.
ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೆಸಾರ್ಟ್ ರಾಜಕಾರಣ ಮಾಡುವವರು ಮತ್ತು ಅಂಥವರಿಗೆ ಬೆಂಬಲ ನೀಡುವವರು ರಾಜಕೀಯದಲ್ಲಿರಲು ಅಯೋಗ್ಯರು. ವಿಧಾನಸಭೆಯಲ್ಲಿ ಇವರ ನಾಟಕಗಳು ಅಸಹ್ಯ ಮೂಡಿಸುತ್ತಿವೆ, ಇವರೆಲ್ಲ ಮಾನ, ಮರ್ಯಾದೆ ಇಲ್ಲದಂತೆ ವರ್ತಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ವಿಶ್ವಾಸಮತಯಾಚನೆ ಬಗ್ಗೆ ರಾಜ್ಯಪಾಲರು ಮಧ್ಯೆ ಪ್ರವೇಶ ಮಾಡುವ ಹಕ್ಕಿಲ್ಲ ಎಂದು ಆಡಳಿತ ಪಕ್ಷದವರು ಹೇಳಿದ್ದಾರೆ. ವಿರೋಧ ಪಕ್ಷದವರು ಇದೆ ಎಂದು ವಾದಿಸುತ್ತಿದ್ದಾರೆ. ಎಲ್ಲರೂ ಅವರವರ ಅನುಕೂಲಕ್ಕೆ ತಕ್ಕಂತೆ ಕಾನೂನನ್ನು ತಿರುಚಿ ಮಾತನಾಡಿದ್ದಾರೆ. ಹಾಗಾಗಿ ಕೇಂದ್ರ ಸರ್ಕಾರ ಈ ಬಗ್ಗೆ ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಪ್ರಮೋದ್ ಮುತಾಲಿಕ್ ಒತ್ತಾಯಿಸಿದ್ದಾರೆ.
ಇದೇ ವೇಳೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ವಿಚಾರವಾಗಿ ಮಾತನಾಡಿದ ಪ್ರಮೋದ್ ಮುತಾಲಿಕ್, ಸಂಸತ್ತಿನಲ್ಲಾಗಲೀ ಅಥವಾ ಕೋರ್ಟಿನಲ್ಲಾಗಲೀ ವಿಶೇಷ ಆಜ್ಞೆ ತಂದು ರಾಮಮಂದಿರ ನಿರ್ಮಾಣ ಆಗಲೇಬೇಕು. ಪ್ರಧಾನಿಗಳು ರಾಮಮಂದಿರ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಮುತಾಲಿಕ್ ಒತ್ತಾಯಿಸಿದರು.