ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಪಕ್ಷಗಳಲ್ಲಿ ಹಿರಿಯ ನಾಯಕರಿಗೆ ಯಾವುದೇ ಬೆಲೆ ಇಲ್ಲ. ಇಂಥಹ ಸರ್ಕಾರ ಖಂಡಿತಾ ಇರಬಾರದು ಎಂದು ಅತೃಪ್ತ ಶಾಸಕ ಹೆಚ್.ವಿಶ್ವನಾಥ್ ಹೇಳಿಕೆ ನೀಡಿದ್ದಾರೆ.
ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ಖಾಸಗಿ ಸುದ್ದಿವಾಹಿನಿಯೊಂದಿಗೆ ಮಾತನಾಡಿರುವ ಹೆಚ್.ವಿಶ್ವನಾಥ್, ಮೈತ್ರಿ ಸರ್ಕಾರ ತನ್ನ ಶಾಸಕರನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ. ಅಲ್ಲದೆ, ಮೈತ್ರಿ ಸರ್ಕಾರ ರಾಜ್ಯದ ಅಭಿವೃದ್ಧಿಯಲ್ಲಿ ವಿಫಲವಾಗಿದೆ ಎಂಬುದು ಜನರ ಅಭಿಪ್ರಾಯವೂ ಆಗಿದೆ. ಬರ ಸೇರಿದಂತೆ ಅನೇಕ ವಿಚಾರಗಳನ್ನು ಸರಿಯಾಗಿ ನಿಭಾಯಿಸಿಲ್ಲ. ಅಲ್ಲದೆ, ಅಸ್ಥಿರವಾದ ಮೈತ್ರಿ ಸರ್ಕಾರದಿಂದ ಇದು ಸಾಧ್ಯವೂ ಇಲ್ಲ ಎಂದು ಹೇಳಿದ್ದಾರೆ.
ಮುಂದುವರೆದು ಮಾತನಾಡಿರುವ ಹೆಚ್.ವಿಶ್ವಾನಾಥ್, ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರಿಗೂ ಉತ್ತಮ ಸರ್ಕಾರ ನೀಡಬೇಕೆಂಬ ಮನಸ್ಸಿತ್ತು. ಆದರೆ ಮೈತ್ರಿ ಸರ್ಕಾರದಲ್ಲಿ ಅದಕ್ಕೆ ಅವಕಾಶ ಸಿಗಲಿಲ್ಲ. ಹೀಗಾಗಿ ಒಂದು ಸುಭದ್ರಾ ಸರ್ಕಾರ ರಚನೆಗಾಗಿ ನಾವೆಲ್ಲಾ ಹೋರಾಡುತ್ತಿದ್ದೇವೆ. ಅಷ್ಟಕ್ಕೂ ರಾಜ್ಯದಲ್ಲಿ ಇಂತಹ ಪರಿಸ್ಥಿತಿ ನಿರ್ಮಾಣವಾಗಲು ಬಂಡಾಯ ಶಾಸಕರು ಕಾರಣರಲ್ಲ, ಮೈತ್ರಿ ನಾಯಕರ ಬೇಜಾವಾಬ್ದಾರಿ ನಡೆಯೇ ಕಾರಣ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.