ನವದೆಹಲಿ: ಉತ್ತರ ಪ್ರದೇಶದ ಪೂರ್ವ ಭಾಗದ ಕಾಂಗ್ರೆಸ್ ಉಸ್ತುವಾರಿ ವಹಿಸಿದ್ದ ಪ್ರಿಯಾಂಕಾ ಗಾಂಧಿ ವಾದ್ರಾ ಈಗ ಇಡೀ ರಾಜ್ಯದಲ್ಲಿ ಪಕ್ಷವನ್ನು ಮುನ್ನಡೆಸಲಿದ್ದಾರೆ ಎನ್ನಲಾಗಿದೆ.
ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಉತ್ತರ ಪ್ರದೇಶದ ಪೂರ್ವ ಭಾಗದ ಪ್ರಧಾನ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಳ್ಳುವ ಮೂಲಕ ಪ್ರಿಯಾಂಕಾ ರಾಜಕೀಯಕ್ಕೆ ಔಪಚಾರಿಕವಾಗಿ ಪ್ರವೇಶ ಪಡೆದಿದ್ದರು. ಇದೇ ವೇಳೆ ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಉತ್ತರ ಪ್ರದೇಶದ ಪಶ್ಚಿಮ ಭಾಗಕ್ಕೆ ನೇಮಿಸಲಾಯಿತು.
ಆದಾಗ್ಯೂ ಕಾಂಗ್ರೆಸ್ ಸಾರ್ವತ್ರಿಕ ಚುನಾವಣೆಯಲ್ಲಿ ಕೇವಲ ಒಂದು ಸ್ಥಾನವನ್ನು ಗೆಲ್ಲಲು ಮಾತ್ರ ಯಶಸ್ವಿಯಾಗಿತ್ತು. ಪಕ್ಷದ ಮುಖ್ಯಸ್ಥ ರಾಹುಲ್ ಗಾಂಧಿಯವರ ಅಮೇಥಿ ಸ್ಥಾನವನ್ನು ಕಾಂಗ್ರೆಸ್ ಗೆ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಯುಪಿಎ ಮುಖ್ಯಸ್ಥೆ ಸೋನಿಯಾ ಗಾಂಧಿ ಮಾತ್ರ ರಾಯಬರೇಲಿಯಿಂದ ಗೆಲುವನ್ನು ಸಾಧಿಸಿದ್ದರು.
ಉತ್ತರಪ್ರದೇಶದಲ್ಲಿ ತನ್ನ ಕೇಡರ್ ನ್ನು ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ಈಗ ಕಾಂಗ್ರೆಸ್ ತನ್ನ ಎಲ್ಲಾ ಜಿಲ್ಲಾ ಸಮಿತಿಗಳನ್ನು ವಿಸರ್ಜಿಸಿದೆ. ಚುನಾವಣೆಯ ಸಮಯದಲ್ಲಿ ಅಶಿಸ್ತು ವಿಚಾರವಾಗಿ ದೂರುಗಳನ್ನು ಪರಿಶೀಲಿಸಲು ಪಕ್ಷವು ಮೂರು ಸದಸ್ಯರ ಸಮಿತಿಯನ್ನು ರಚಿಸಿತ್ತು.ಈಗ ಮುಂಬರುವ ಉಪಚುನಾವಣೆ ಮತ್ತು ಪಕ್ಷದ ದೀರ್ಘಾವಧಿಯ ಬೆಳವಣಿಗೆ ದೃಷ್ಟಿಯಿಂದ ಪ್ರಿಯಾಂಕಾ ಗಾಂಧಿಯವರಿಗೆ ರಾಜ್ಯ ಕಾಂಗ್ರೆಸ್ ಪಕ್ಷದ ನೇತೃತ್ವವನ್ನು ವಹಿಸಲಾಗುವುದು ಎಂದು ಹೇಳಲಾಗಿದೆ.