ಮುಂಬೈ: ಮನೆಯ ಬಳಿ ಆಟವಾಡುತ್ತಿದ್ದ 3 ವರ್ಷದ ಬಾಲಕನೊಬ್ಬ ತೆರೆದ ಚರಂಡಿಗೆ ಬಿದ್ದು ಕೊಚ್ಚಿಕೊಂಡು ಹೋದ ಘಟನೆ ಇಲ್ಲಿನ ಗೋರೆಗಾಂವ್ನ ಅಂಬೇಡ್ಕರ್ ನಗರ ಪ್ರದೇಶದಲ್ಲಿ ಬುಧವಾರ ರಾತ್ರಿ ಸಂಭವಿಸಿದೆ. ಈ ಮೂಲಕ ಬೃಹತ್ ಮುಂಬೈ ಮಹಾನಗರ ಪಾಲಿಕೆಯ ನಿರ್ಲಕ್ಷ್ಯ ಮತ್ತೊಮ್ಮೆ ಬೆಳಕಿಗೆ ಬಂದಿದೆ.
ರಾತ್ರಿ 10.24ರ ಸಮಯದಲ್ಲಿ ಈ ಘಟನೆ ನಡೆದಿದೆ. ಇಡೀ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಕತ್ತಲೆಯಿದ್ದ ಕಾರಣದಿಂದ ಮಗುವಿಗೆ ರಸ್ತೆ ಬದಿಯ ಚರಂಡಿ ಕಾಣದೆ ಅದರಲ್ಲಿ ಬಿದ್ದಿರುವುದು ಸ್ಪಷ್ಟವಾಗಿ ಕಂಡುಬಂದಿದೆ. ಸದ್ಯ ಆ ಮಗುವಿನ ಶವಕ್ಕಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ.
#WATCH Mumbai: A 3-year-old boy fell in a gutter in Ambedkar Nagar area of Goregaon around 10:24 pm yesterday. Rescue operations underway. #Maharashtra pic.twitter.com/kx2vlJAN5C
— ANI (@ANI) July 11, 2019
ಇದೇ ವೇಳೆ ನಗರದಲ್ಲಿ ಭಾರೀ ಮಳೆಯಾಗುತ್ತಿದ್ದರೂ ಸಹ ಬೃಹತ್ ಮುಂಬೈ ಮಹಾನಗರ ಪಾಲಿಕೆ ನಗರಾದ್ಯಂತ ಯಾವುದೇ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಲವೆಡೆ ತೆರೆದ ಮ್ಯಾನ್ ಹೊಲಗಳು, ಗಟಾರಗಳು ಮಳೆ ನೀರಿನಿಂದಾಗಿ ತುಂಬಿ ಹರಿಯುತ್ತಿದ್ದು ಜನರಿಗೆ ರಸ್ತೆಯಲ್ಲಿ ಗುಂಡಿಗಳೆಲ್ಲಿವೆ ಎಂಬುದೇ ಅರಿಯದೆ ಸಮಸ್ಯೆ ಎದುರಿಸುತ್ತಿದ್ದಾರೆ. ನಗರದಲ್ಲಿ ಗುರುವಾರವೂ ಭಾರಿ ಮಳೆಯಾಗುವ ನಿರೀಕ್ಷೆಯಿದೆ.