ಬೆಂಗಳೂರು: ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಅವರು ರಾಜೀನಾಮೆ ನೀಡಿದ ಬೆನ್ನಲ್ಲೇ ಗೋಕಾಕ್ ಕ್ಷೇತ್ರದ ಶಾಸಕ ರಮೇಶ್ ಜಾರಕಿಹೊಳಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಈ ಬಗ್ಗೆ ಸ್ಪೀಕರ್ ಗೆ ಪತ್ರ ಕಳುಹಿಸಿರುವ ಅವರು, "ರಮೇಶ್ ಜಾರಕಿಹೊಳಿ ಆಗಿರುವ ಗೋಕಾಕ್ ಕ್ಷೇತ್ರದ ಸದಸ್ಯನಾದ ನಾನು ನನ್ನ ಸ್ವಇಚ್ಛೆಯಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ" ಎಂದು ತಮ್ಮ ಲೆಟರ್ ಹೆಡ್'ನಲ್ಲಿ ಬರೆದು ಸಹಿ ಹಾಕಿದ್ದಾರೆ. ಈ ಪತ್ರವನ್ನು ನೇರವಾಗಿ ಸ್ಪೀಕರ್ ಗೆ ಸಲ್ಲಿಸದೆ ಅವರ ಆಪ್ತ ಕಾರ್ಯದರ್ಶಿಗೆ ತಲುಪಿಸಲಾಗಿದೆ. ಅಷ್ಟೇ ಅಲ್ಲದೆ, ಸಂಜೆ ರಾಜ್ಯಪಾಲರನ್ನೂ ಭೇಟಿ ಮಾಡಿ ಈ ಬಗ್ಗೆ ಮಾತುಕತೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸೋಮವಾರ ಬೆಳಿಗ್ಗೆಯಷ್ಟೇ ವಿಜಯಪುರ ಶಾಸಕ ಆನಂದ್ ಸಿಂಗ್ ಅವರು ಸ್ಪೀಕರ್ ಅವರಿಗೆ ರಾಜೀನಾಮೆ ಪತ್ರ ತಲುಪಿಸಿದ್ದರು. ಈ ಬೆನ್ನಲ್ಲೇ ರಮೇಶ್ ಜಾರಕಿಹೊಳಿ ರಾಜೀನಾಮೆ ಸಲ್ಲಿಸಿರುವುದು ಮೈತ್ರಿ ಸರ್ಕಾರಕ್ಕೆ ಮತ್ತೊಂದು ಆಘಾತವಾಗಿದೆ. ಈ ಬೆನ್ನಲ್ಲೇ ಮತ್ತಷ್ಟು ಶಾಸಕರು ರಾಜೀನಾಮೆ ಸಲ್ಲಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.