ನವದೆಹಲಿ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉತ್ತರ ಕೊರಿಯಾದ ನಾಯಕ ಕಿಮ್ ಜೊಂಗ್-ಉನ್ ಭಾನುವಾರ ಎರಡು ಕೊರಿಯಾಗಳನ್ನು ಬೇರ್ಪಡಿಸುವ ಡಿ.ಎಂ.ಜೆಡ್ ಗಡಿ ಗ್ರಾಮವಾದ ಪನ್ಮುಂಜೋಮ್ ನಲ್ಲಿ ಭೇಟಿಯಾದರು. ಇಲ್ಲಿಂದ ಟ್ರಂಪ್ ಉತ್ತರ ಕೊರಿಯಾದ ಭೂಪ್ರದೇಶವನ್ನು ಪ್ರವೇಶಿಸಿದರು.
ಫೆಬ್ರವರಿಯಲ್ಲಿ ವಿಯೆಟ್ನಾಂನ ಹನೋಯಿಯಲ್ಲಿ ನಡೆದ ಶೃಂಗಸಭೆಯ ನಂತರ ಉಭಯ ನಾಯಕರು ಭೇಟಿಯಾಗುವುದು ಇದೇ ಮೊದಲು ಎನ್ನಲಾಗಿದೆ. ಕಳೆದ ಜೂನ್‌ನಲ್ಲಿ ಸಿಂಗಾಪುರದಲ್ಲಿ ನಡೆದ ಮೊದಲ ಐತಿಹಾಸಿಕ ಸಭೆಯಲ್ಲಿ ಟ್ರಂಪ್ ಮತ್ತು ಕಿಮ್ ಮುಖಾಮುಖಿಯಾಗಿದ್ದರು.1953 ರಲ್ಲಿ ನಡೆದ ಕದನವಿರಾಮ ಒಪ್ಪಂದದೊಂದಿಗೆ ಕೊರಿಯನ್ ಯುದ್ಧ ಮುಗಿದ ನಂತರ ಉಭಯ ರಾಷ್ಟ್ರಗಳ ನಾಯಕರು ಪನ್‌ಮುನ್‌ಜೋಮ್‌ನಲ್ಲಿ ಸಭೆ ನಡೆಸಿದ ಮೊದಲ ಸಭೆ ಎಂದು ಯೋನ್‌ಹಾಪ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.
ಎರಡು ದಿನಗಳ ದಕ್ಷಿಣ ಕೊರಿಯಾ ಪ್ರವಾಸದಲ್ಲಿರುವ ಈ ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಟ್ರಂಪ್, ಆ ರೇಖೆಯನ್ನು (ಡಿಎಂಜೆಡ್) ದಾಟುವುದು ನಿಜಕ್ಕೂ ದೊಡ್ಡ ಗೌರವ ಎಂದು ಹೇಳಿದರೆ, ಕಿಮ್ ಇದನ್ನು ಐತಿಹಾಸಿಕ ಕ್ಷಣ ಎಂದು ಪರಿಗಣಿಸಿದ್ದಾರೆ. ಇದೇ ವೇಳೆ ಡೊನಾಲ್ಡ್ ಟ್ರಂಪ್ ಅವರು ಕಿಮ್‌ನನ್ನು ವಾಷಿಂಗ್ಟನ್‌ಗೆ ಆಹ್ವಾನಿಸಿದ್ದಾರೆ, ಆದರೆ ಈ ಆಹ್ವಾನವನ್ನು ಸ್ವೀಕರಿಸಿದ್ದಾರೆಯೇ ಎಂಬುದು ಇನ್ನು ಸ್ಪಷ್ಟವಾಗಿಲ್ಲ ಎನ್ನಲಾಗಿದೆ. ಒಂದು ವೇಳೆ ಕಿಮ್ ಈ ಆಹ್ವಾನವನ್ನು ಸ್ವೀಕರಿಸಿದರೆ, ಉತ್ತರ ಕೊರಿಯಾದ ನಾಯಕರೊಬ್ಬರು ಯುಎಸ್ ಗೆ ಭೇಟಿ ನೀಡುವುದು ಇದೇ ಮೊದಲು ಎನ್ನಲಾಗಿದೆ. ಡಿಎಂಜೆಡ್‌ನಲ್ಲಿ ನಡೆದ ಸಭೆಯ ನಂತರ ಉಭಯ ನಾಯಕರು ದಕ್ಷಿಣ ಕೊರಿಯಾಕ್ಕೆ ಪ್ರವೇಶಿಸಿದ್ದಾರೆ ಎಂದು ತಿಳಿದುಬಂದಿದೆ.