ನವದೆಹಲಿ: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಗುರುವಾರದಂದು ಕೇಂದ್ರ ಸಭಾಂಗಣದಲ್ಲಿ ಸಂಸತ್ತಿನ ಉಭಯ ಸದನಗಳಾದ ರಾಜ್ಯಸಭೆ (ಮೇಲ್ಮನೆ) ಮತ್ತು ಲೋಕಸಭೆ (ಕೆಳಮನೆ) ಜಂಟಿ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ, ಸಮಗ್ರ ಬೆಳವಣಿಗೆ, ಸಶಸ್ತ್ರ ಪಡೆಗಳ ಆಧುನೀಕರಣ ಮತ್ತು ಲಿಂಗ ಸಮಾನತೆ ಕೇಂದ್ರ ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಹೇಳಿದರು.
ಜಂಟಿ ಸದನದಲ್ಲಿ ರಾಷ್ಟ್ರಪತಿಗಳು ತಮ್ಮ ಭಾಷಣದಲ್ಲಿ, ನೂತನವಾಗಿ ಚುನಾಯಿತರಾದ ಎಲ್ಲ ಸಂಸದರು ಭಾರತದ ಸಂವಿಧಾನಕ್ಕೆ ಅನುಗುಣವಾಗಿ ತಮ್ಮ ಜವಾಬ್ದಾರಿಗಳಲ್ಲಿ ಪ್ರಾಮಾಣಿಕವಾಗಿರಬೇಕು ಎಂದು ಆಗ್ರಹಿಸಿದರು."ಮುಂದಿನ ಐದು ವರ್ಷಗಳವರೆಗೆ ನಿಮ್ಮೆಲ್ಲರ ಹೃತ್ಪೂರ್ವಕ ಶುಭಾಶಯಗಳನ್ನು ನಾನು ಬಯಸುತ್ತೇನೆ ಮತ್ತು ಭಾರತದ ಪರಿವರ್ತನೆಗೆ ನಿಮ್ಮನ್ನು ಅರ್ಪಿಸಿಕೊಳ್ಳಿ ಮತ್ತು ನಿಮ್ಮ ಕರ್ತವ್ಯಗಳನ್ನು ಎಲ್ಲಾ ಪ್ರಾಮಾಣಿಕತೆಯಿಂದ ನಿರ್ವಹಿಸಬೇಕೆಂದು ನಾನು ಕೋರುತ್ತೇನೆ" ಎಂದು ರಾಷ್ಟ್ರಪತಿ ಕೋವಿಂದ್ ಹೇಳಿದರು.
2014 ರಲ್ಲಿ ಪ್ರಾರಂಭವಾದ ದೇಶದ ಅಭಿವೃದ್ಧಿ ಪಯಣವನ್ನು ವೇಗಗೊಳಿಸಲು ಭಾರತದ ಜನರು ಸ್ಪಷ್ಟ ಆದೇಶವನ್ನು ನೀಡಿದ್ದಾರೆ ಎಂದು ರಾಷ್ಟ್ರಪತಿ ಹೇಳಿದರು. "ಈ ಚುನಾವಣೆಯಲ್ಲಿ, ದೇಶದ ಜನರು ಸ್ಪಷ್ಟ ಜನಾದೇಶವನ್ನು ನೀಡಿದ್ದಾರೆ. ಸರ್ಕಾರದ ಮೊದಲ ಅಧಿಕಾರಾವಧಿಯ ಮೌಲ್ಯಮಾಪನದ ನಂತರ, ಜನರು ಈ ಬಾರಿ ದೊಡ್ಡ ಜನಾದೇಶವನ್ನು ನೀಡಿದ್ದಾರೆ" ಎಂದು ಅವರು ಹೇಳಿದರು. ಹಾಗೆ ಮಾಡುವ ಮೂಲಕ ಜನರು 2014 ರಲ್ಲಿ ಪ್ರಾರಂಭಿಸಿದ ಅಭಿವೃದ್ಧಿ ಪ್ರಕ್ರಿಯೆಯನ್ನು ಚುರುಕುಗೊಳಿಸುವ ಆದೇಶವನ್ನು ನೀಡಿದ್ದಾರೆ ಎಂದರು.
ಸೆಂಟ್ರಲ್ ಹಾಲ್ ನಲ್ಲಿ ಮಾಡಿದ ಭಾಷಣದುದ್ದಕ್ಕೂ ರಾಷ್ಟ್ರಪತಿ ಮುಂದಿನ ಐದು ವರ್ಷಗಳಲ್ಲಿ ಸರ್ಕಾರವು 5 ವರ್ಷಗಳ ಕೈಗೊಳ್ಳಬೇಕಾದ ಮಾರ್ಗಸೂಚಿಯನ್ನು ಮಂಡಿಸಿದರು. ಸುಮಾರು 55 ನಿಮಿಷಗಳ ಜಂಟಿ ಭಾಷಣದಲ್ಲಿ, ಸಾರ್ವತ್ರಿಕ ಚುನಾವಣೆಗಳಲ್ಲಿ ಮಹಿಳೆಯರು ತಮ್ಮ ಮತ ಚಲಾಯಿಸಲು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದನ್ನು ರಾಷ್ಟ್ರಪತಿ ಉಲ್ಲೇಖಿಸಿದರು. ಲೋಕಸಭೆಯ ಸದಸ್ಯರಾಗಿ ದಾಖಲೆಯ 78 ಮಹಿಳೆಯರನ್ನು ಆಯ್ಕೆ ಮಾಡಲಾಗಿದೆ - ಇದುವರೆಗೆ ಅತಿ ಹೆಚ್ಚು - ಮತ್ತು ಚುನಾಯಿತ ಸದಸ್ಯರಲ್ಲಿ ಅರ್ಧದಷ್ಟು ಜನರು ಮೊದಲ ಬಾರಿಗೆ ಬಂದವರು ಎಂದು ರಾಷ್ಟ್ರಪತಿ ಕೋವಿಂದ್ ಹೇಳಿದರು.