ಬೆಂಗಳೂರು: ಉಗ್ರ ಕಸಬ್ ನ ವಾರ್ಷಿಕ ಸ್ಮರಣೆ ಮಾಡುವವರನ್ನು ಗುಂಡುಹಾರಿಸಿ ಕೊಲ್ಲಬೇಕು ಮತ್ತು ಅವರ ಶವಗಳನ್ನು ಯಾರಿಗೂ ನೀಡಬಾರದು ಎಂದು ರಾಜ್ಯಪಾಲ ವಾಜುಭಾಯಿ ವಾಲಾ ಆಕ್ರೋಶ ವ್ಯಕ್ತಪಡಿಸಿದರು.
9/11 ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಬದುಕುಳಿದಿದ್ದ ಏಕೈಕ ಪಾಕಿಸ್ತಾನಿ ಭಯೋತ್ಪಾದಕ ಅಜ್ಮಲ್ ಕಸಬ್ ಗೆ ಹಲವು ವಿಚಾರಣೆಗಳ ಬಳಿಕ ನ್ಯಾಯಾಲಯದ ತೀರ್ಪಿನ ಅನ್ವಯ ಗಲ್ಲಿಗೇರಿಸಲಾಗಿತ್ತು.
ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ದಕ್ಷಿಣ ಭಾರತದ ಕೇಂದ್ರ ಸರ್ಕಾರಿ ವಕೀಲರ 2ನೇ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದ್ರೋಹಿ ಚಟುವಟಿಕೆಗಳಲ್ಲಿ ತೊಡಗುವವರಿಗೆ ತ್ವರಿತವಾಗಿ ಶಿಕ್ಷೆ ವಿಧಿಸುವಂತಹ ಕಾನೂನಿನ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.
ಯಾವ ರಾಷ್ಟ್ರದಲ್ಲಿ ಭದ್ರತೆ ಬಲಿಷ್ಠವಾಗಿರುತ್ತದೋ ಆ ರಾಷ್ಟ್ರ ಅಭಿವೃದ್ಧಿಯಾಗುತ್ತದೆ. ಇದಕ್ಕೆ ಉತ್ತಮ ಉದಾಹರಣೆ ಇಸ್ರೇಲ್ ದೇಶ. ಇಸ್ರೇಲ್ ಚಿಕ್ಕ ದೇಶವಾದರೂ ಜಾಗತಿಕ ಮಟ್ಟದಲ್ಲಿ ಬಲಿಷ್ಠವಾಗಿದೆ. ಆ ದೇಶದಲ್ಲಿ ಎಲ್ಲರೂ ಸೈನ್ಯದಲ್ಲಿ ಕೆಲಸ ಮಾಡುತ್ತಾರೆ. ಮಹಿಳೆಯರೂ ಸಹ ಎರಡು ವರ್ಷ ಸೈನ್ಯದಲ್ಲಿ ಕಾರ್ಯನಿರ್ವಹಿಸುತ್ತಾರೆ ಎಂದರು.
ರಾಷ್ಟ್ರ ವಿರೋಧಿಗಳು ಮತ್ತು ಆತಂಕವಾದಿಗಳನ್ನು ಮಟ್ಟ ಹಾಕಲು ಪ್ರತ್ಯೇಕ ಕಾನೂನು ರೂಪಿಸಬೇಕು. ದೇಶದ್ರೋಹಿಗಳಿಗೆ ಕ್ಷಮೆ ನೀಡಬಾರದು ಎಂದು ವಾಲಾ ಅಭಿಪ್ರಾಯಪಟ್ಟರು.