ಮಂಗಳೂರು: ಬಿಸಿಲಿನ ಬೇಗೆ ತಾಳಲಾರದೆ ಮಳೆಗಾಗಿ ಪ್ರಾರ್ಥಿಸಿ ಉಡುಪಿ ಜಿಲ್ಲೆಯಲ್ಲಿ ಕಪ್ಪೆಗಳಿಗೆ ಮದುವೆ ಮಾಡಿಸಿದ ಘಟನೆ ಶನಿವಾರ ನಡೆದಿದೆ. ಮಂಡೂಕ ಪರಿಣಯ ಎಂದೇ ಕರೆಯಲಾಗುವ ಈ ಸಂಪ್ರದಾಯವನ್ನು ನಂಬುವ ಅಲ್ಲಿನ ಜನತೆ ಇಂದು ಕಪ್ಪೆಗಳಿಗೆ ಮದುವೆ ಮಾಡಿಸಿದ್ದಾರೆ.
ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ಹಾಗೂ ಪಂಚರತ್ನಾ ಸೇವಾ ಟ್ರಸ್ಟ್ ಸಹಯೋಗದಲ್ಲಿ ಕಿದಿಯೂರು ಹೋಟೆಲ್ ವಾಹನ ನಿಲುಗಡೆ ಪ್ರಾಂಗಣದಲ್ಲಿ ನಡೆದ ಕಪ್ಪೆಗಳ ಮದುವೆಗೆ ಹಲವರು ಸಾಕ್ಷಿಯಾದರು. ಕರಾವಳಿ ಜಿಲ್ಲೆಗಳ ಮೇಲೆ ವರುಣದೇವ ಕೆಲ ತಿಂಗಳುಗಳಿಂದ ಮುನಿಸಿಕೊಂಡಿದ್ದು, ಹನಿ ಹನಿ ನೀರಿಗೂ ಜನತೆ ಪರದಾಡುತ್ತಿದ್ದಾರೆ. ಹಾಗಾಗಿ ಕಪ್ಪೆಗಳಿಗೆ ಮಾಡುವೆ ಮಾಡಿಸಿದ್ದು, ಇದರಿಂದ ಮಳೆ ಬರಲಿದೆ ಎಂದು ಉಡುಪಿ ನಾಗರಿಕ ಸಮಿತಿ ಅಭಿಪ್ರಾಯಪಟ್ಟಿದೆ.
#WATCH Frogs married in Karnataka's Udupi to please the rain gods. The frogs were dressed in custom made outfits for the ceremony. pic.twitter.com/s9I4rLT0Tu
— ANI (@ANI) June 8, 2019
ಎರಡು ಬೇರೆ ಬೇರೆ ಗ್ರಾಮಗಳಲ್ಲಿ ಗಂಡು ಮತ್ತು ಹೆಣ್ಣು ಕಪ್ಪೆಗಳನ್ನು ಹಿಡಿಯುವ ಮೂಲಕ ಆರಂಭವಾದ ಮದುವೆ ಪ್ರಕ್ರಿಯೆ, ವರ್ಷ ಹೆಸರಿನ ಹೆಣ್ಣು ಕಪ್ಪೆಗೂ ವರುಣ ಹೆಸರಿನ ಗಂಡು ಕಪ್ಪೆಗೂ ಶಾಸ್ತ್ರೋಕ್ತವಾಗಿ ಮದುವೆ ಮಾಡುವ ಮೂಲಕ ನೆರವೇರಿತು. ಎರಡೂ ಕಪ್ಪೆಗಳನ್ನೂ ಸಾಂಪ್ರದಾಯಿಕವಾಗಿ ಸಿಂಗರಿಸಿದ್ದು ವಿಶೇಷವಾಗಿತ್ತು. ಸದ್ಯ ಈ ಕಪ್ಪೆಗಳ ಮಾಡುವೆ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.