ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಜೂನ್ 15 ರಂದು ನೀತಿ ಆಯೋಗದ ಸಭೆಯಲ್ಲಿ ಭಾಗವಹಿಸುವುದಿಲ್ಲ ಎಂದು ಶುಕ್ರವಾರ ಘೋಷಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಗೆ ಬರೆದಿರುವ ಪತ್ರದಲ್ಲಿ ನೀತಿ ಆಯೋಗಕ್ಕೆ ಯಾವುದೇ ಆರ್ಥಿಕ ಅಧಿಕಾರಗಳಿಲ್ಲ ಮತ್ತು ರಾಜ್ಯ ಯೋಜನೆಗಳಿಗೆ ಬೆಂಬಲ ನೀಡುವ ಅಧಿಕಾರವಿಲ್ಲ, ಆದ್ದರಿಂದ ಯಾವುದೇ ಹಣಕಾಸಿನ ಅಧಿಕಾರವಿಲ್ಲದ ಈ ಸಭೆಯಲ್ಲಿ ಪಾಲ್ಗೊಳ್ಳಲು ನನಗೆ ನಿರರ್ಥಕವೆನಿಸಿದೆ ಎಂದು ಅವರು ತಿಳಿಸಿದ್ದಾರೆ.
ಈ ಹಿಂದೆ ಮಮತಾ ಬ್ಯಾನರ್ಜೀ ಅವರು ಯೋಜನಾ ಆಯೋಗವನ್ನು ವಿಸರ್ಜಿಸಿ ಮತ್ತು ಹೊಸ ರಚನೆಯ ನಿರ್ಮಾಣದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಅಲ್ಲದೆ ಸಹಕಾರ ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸುವುದಕ್ಕೆ ಅಂತರಾಜ್ಯ ಪರಿಷತ್ತನ್ನು ರಚಿಸಬೇಕೆಂದು ಆಗ್ರಹಿಸಿದರು.
"ನೀತಿ ಆಯೋಗದೊಂದಿಗಿನ ಕೊನೆಯ ನಾಲ್ಕುವರೆ ವರ್ಷಗಳ ಅನುಭವವು ನನ್ನ ಹಿಂದಿನ ಸಲಹೆಯನ್ನು ನಿಮಗೆ ನೆನಪಿಸುತ್ತದೆ. ಸಂವಿಧಾನದ ವಿಧಿ 263 ರ ಅಡಿಯಲ್ಲಿ ರಚಿಸಲಾದ ಅಂತರ ರಾಜ್ಯ ಕೌನ್ಸಿಲ್ ಗೆ ನಾವು ಗಮನ ಹರಿಸಬೇಕು. ಆ ಮೂಲಕ ಸಹಕಾರ ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸಬೇಕು ಎಂದು ಹೇಳಿದರು.
ಜೂನ್ 15 ರಂದು ನೀತಿ ಆಯೋಗ ಆಡಳಿತ ಮಂಡಳಿಯ ಐದನೇ ಸಭೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವ ವಹಿಸಲಿದ್ದಾರೆ.