ನವದೆಹಲಿ: ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ಒಬ್ಬ 'ಹಿಂದೂ' ಆಗಿದ್ದ ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದ ನಟ, ರಾಜಕಾರಣಿ ಕಮಲ್ ಹಾಸನ್ ವಿರುದ್ಧ ಬಿಜೆಪಿ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಬುಧವಾರ ವಜಾಗೊಳಿಸಿದೆ.
ಇತ್ತೀಚೆಗೆ ಚೆನ್ನೈನಲ್ಲಿ ತಮ್ಮ ಮಕ್ಕಳ್ ನೀದಿಮೈಯ್ಯಂ ಪಕ್ಷದ ಪರವಾಗಿ ಉಪಚುನಾವಣೆ ರ್ಯಾಲಿ ಉದ್ದೇಶಿಸಿ ಮಾತನಾಡುತ್ತಾ, "ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ಒಬ್ಬ ಹಿಂದೂ ಆಗಿದ್ದ. ಆತನ ಹೆಸರು ನಾಥೂರಾಮ್ ಗೋಡ್ಸೆ' ಎಂದು ಕಮಲ್ ಹಾಸನ್ ಹೇಳಿದ್ದರು. ಈ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಹಿಂದೂ ಸೇನಾ ಸಂಘದ ಮುಖ್ಯಸ್ಥ ವಿಷ್ಣು ಗುಪ್ತಾ, ದೇಶದಲ್ಲಿ ಕೋಮುದ್ವೇಷವನ್ನು ಹುಟ್ಟು ಹಾಕಲು ಪ್ರಯತ್ನಿಸುತ್ತಿರುವ ರಾಜಕೀಯ ಪಕ್ಷಗಳ ವಿರುದ್ಧ ಕಾನೂನು ಕ್ರಮ ಜರುಗಿಸಲು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿ ದೆಹಲಿಯ ಪಟಿಯಾಲ ಕೋರ್ಟ್ನಲ್ಲಿ ಪ್ರಕರಣ ದಾಖಲಿಸಿದ್ದರು.
ಇಂದು ಆ ಅರ್ಜಿ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ನ್ಯಾಯಮೂರ್ತಿಗಳಾದ ಜಿ.ಎಸ್. ಸಿಸ್ತಾನಿ ಮತ್ತು ಜ್ಯೋತಿ ಸಿಂಗ್ ಅವರ ಪೀಠವು "ದೆಹಲಿಯಲ್ಲಿ ಕರ್ಮ ಕೈಗೊಳ್ಳಲು ಯಾವುದೇ ಕಾರಣಗಳಿಲ್ಲ" ಎಂದು ಹೇಳಿ ಅರ್ಜಿಯನ್ನು ವಜಾಗೊಳಿಸಿದೆ.