ಬೆಂಗಳೂರು: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಒಬ್ಬ ಟೈಮ್ ಬಾಂಬ್ ಎಕ್ಸ್ಪರ್ಟ್ ಎಂದು ಸಮ್ಮಿಶ್ರ ಸರ್ಕಾರ ಸಮನ್ವಯ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಮುಖ್ಯಮಂತ್ರಿ ಬದಲಾಗಬೇಕು ಎಂದು ಕಾಂಗ್ರೆಸ್ ನಾಯಕರು ಒತ್ತಡ ಹೇರುತ್ತಿರುವ ಹಿಂದೆ ಸಿದ್ದರಾಮಯ್ಯ ಇದ್ದಾರೆ ಎಂಬ ಜಗದೀಶ್ ಶೆಟ್ಟರ್ ಹೇಳಿಕೆಗೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ ಅವರು, "ಪಕ್ಷದೊಳಗಿನ ತನ್ನ ರಾಜಕೀಯ ವಿರೋಧಿ ಬಿ.ಎಸ್.ಯಡಿಯೂರಪ್ಪರಿಗೆ ಅವರು ಇಡ್ತಾ ಇರುವ ಟೈಬಾಂಬ್ಗಳೆಲ್ಲ ಠುಸ್ ಆಗ್ತಾ ಇರೋದಕ್ಕೆ ಅವರು ಹತಾಶರಾಗಿದ್ದಾರೆ. ಅವರಿಗೆ ಸರಿಯಾಗಿ ಒಂದು ವರ್ಷ ಮುಖ್ಯಮಂತ್ರಿಯಾಗಲು ಯಡಿಯೂರಪ್ಪ ಬಿಟ್ಟಿಲ್ಲ. ಪಾಪ ಅವರ ಬಗ್ಗೆ ನನಗೆ ಅನುಕಂಪ ಇದೆ" ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಮುಂದುವರೆದು, ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಂದಾಗಿ ಜಗದೀಶ್ ಶೆಟ್ಟರ್ ಮೂಲೆಗುಂಪಾಗಿದ್ದಾರೆ. ಆದರೆ ಅವರೊಬ್ಬ 'Timebomb Expert'. ತಮ್ಮ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಏನಾದರೂ ಮಾಡುತ್ತಲೇ ಇರುತ್ತಾರೆ. ಅವರನ್ನು ಪಕ್ಷದೊಳಗೆ-ಹೊರಗೆ ಯಾರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎನ್ನುವ ಕೊರಗು ಅವರನ್ನು ಕಾಡುತ್ತಿದೆ" ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಮಂಗಳವಾರ ಹುಬ್ಬಳ್ಳಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ್ದ ಜಗದೀಶ್ ಶೆಟ್ಟರ್ ಅವರು, ಮುಖ್ಯಮಂತ್ರಿ ಬದಲಾಗಬೇಕು ಎಂದು ಕಾಂಗ್ರೆಸ್ ನಾಯಕರು ಒತ್ತಡ ಹೇರುತ್ತಿರುವ ಹಿಂದೆ ಸಿದ್ದರಾಮಯ್ಯ ಇದ್ದಾರೆ. ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಹೇಗಾದರೂ ಇಳಿಸಿ ಸಮ್ಮಿಶ್ರ ಸರ್ಕಾರದ ಸಿಎಂ ಆಗಬೇಕೆಂದು ಪ್ರಯತ್ನಿಸುತ್ತಿದ್ದಾರೆ. ಅದಕ್ಕಾಗಿ ಗೌಪ್ಯ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದರಲ್ಲದೆ, ಸುಮಲತಾ ಅವರು ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವಂತೆ ಮಾಡಿದ್ದು ಸಹ ಸಿದ್ದರಾಮಯ್ಯ ಅವರೇ ಎಂದು ಹೇಳಿದ್ದರು.