ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬಗ್ಗೆ ಮೆಚ್ಚುಗೆ ಸುರಿಮಳೆ ಸುರಿಸಿರುವ ಲಾಲೂ ಪ್ರಸಾದ್ ಪುತ್ರಿ ಮೀಸಾ ಭಾರ್ತಿ ರಾಹುಲ್ ಭವಿಷ್ಯದ ಪ್ರಧಾನಿಯಾಗುವುದನ್ನು ಎದುರು ನೋಡುತ್ತಿರುವುದಾಗಿ ತಿಳಿಸಿದ್ದಾರೆ.
ಖಾಸಗಿ ಆಂಗ್ಲ ಪತ್ರಿಕೆಗೆ ನೀಡಿರುವ ಸಂದರ್ಭದಲ್ಲಿ ಮಾತನಾಡಿದ ಮೀಸಾ ಭಾರ್ತಿ " ನಾನು ರಾಹುಲ್ ಗಾಂಧಿ ಭವಿಷ್ಯದ ಪ್ರಧಾನಿಯಾಗುವುದನ್ನು ಎದುರು ನೋಡುತ್ತಿದ್ದೇನೆ.ಅವರು ಮಾನವೀಯ ಗುಣ ಮತ್ತು ಭವಿಷ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸುವ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ" ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇನ್ನು ಮುಂದುವರೆದು "ಭಾರತವು ಸಾಂಸ್ಕೃತಿಕ, ಧಾರ್ಮಿಕ ಮತ್ತು ಭೌಗೋಳಿಕ ವೈವಿಧ್ಯತೆ ಮತ್ತು ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆಯನ್ನು ಹೊಂದಿರುವ ದೇಶವಾಗಿದೆ. ಈ ವೈವಿಧ್ಯತೆಯನ್ನು ಗೌರವಿಸುವ ಮತ್ತು ಅಸಮಾನತೆಯನ್ನು ಅರ್ಥೈಸುವ ಒಬ್ಬ ಸಹಾನುಭೂತಿಯುಳ್ಳ ಮತ್ತು ಉದಾರ ವ್ಯಕ್ತಿ ಮಾತ್ರ ಈ ದೇಶಕ್ಕೆ ಸಮೃದ್ದ ಭವಿಷ್ಯವನ್ನು ನೀಡಬಲ್ಲರು" ಎಂದು ಮೀಸಾ ಅಭಿಪ್ರಾಯಪಟ್ಟಿದ್ದಾರೆ.
ಇದೇ ವೇಳೆ ಪ್ರಿಯಾಂಕಾ ಗಾಂಧಿ ರಾಜಕೀಯಕ್ಕೆ ಪ್ರವೇಶಿಸಿರುವ ಕುರಿತಾಗಿ ಮಾತನಾಡಿದ ಅವರು "ಪ್ರಿಯಾಂಕಾ ರಾಜಕೀಯ ಪ್ರವೇಶವನ್ನು ಎಲ್ಲರು ಎದುರು ನೋಡಿದ್ದರು. ಏಕೆಂದರೆ ಅವರು ಜನಪ್ರಿಯ ವ್ಯಕ್ತಿಯಾಗಿದ್ದಾರೆ.ಭೇಟಿ ಮಾಡಿರುವ ಜನರಲ್ಲಿ ಅವರು ಅಚ್ಚಳಿಯದ ಮುದ್ರೆಯನ್ನು ಒತ್ತಿದ್ದಾರೆ " ಎಂದು ಮೀಸಾ ತಿಳಿಸಿದರು.