ಲಕ್ನೌ: ಮೇ 23ರಂದು ಲೋಕಸಭಾ ಚುನಾವಣಾ ಫಲಿತಾಂಶ ಹೊರಬಿದ್ದ ಬಳಿಕ ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್, ಬಿಎಸ್ಪಿ ಮುಖ್ಯಸ್ಥೆ ಮಾಯಾವತಿಗೆ ಮೋಸ ಮಾಡಲಿದ್ದಾರೆ ಎಂದು ಉತ್ತರಪ್ರದೇಶದ ಉಪಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಭವಿಷ್ಯ ನುಡಿದಿದ್ದಾರೆ.
ಎಸ್ಪಿ ಎಂದಿಗೂ ದಲಿತರಿಗೆ ಗೌರವ ನೀಡಿಲ್ಲ:
ಎಸ್ಪಿ ಎಂದಿಗೂ ದಲಿತರಿಗೆ ಗೌರವ ನೀಡಿಲ್ಲ ಎಂದ ಡಿಸಿಎಂ ಕೇಶವ ಪ್ರಸಾದ್ ಮೌರ್ಯ, 1995 ರಲ್ಲಿ ಎಸ್ಪಿ ಮುಖಂಡರು ರಾಜ್ಯ ಅತಿಥಿ ಗೃಹದಲ್ಲಿ ಮಾಯಾವತಿಯವರ ಮೇಲೆ ಆಕ್ರಮಣ ನಡೆಸಿದ ವೇಳೆ, ಬಿಜೆಪಿ ಅವರನ್ನು ರಕ್ಷಿಸಿತ್ತು. ಈಗ ಅಖಿಲೇಶ್ ಯಾದವ್ ಮೇ 23ರ ನಂತರ ಮಾಯಾವತಿಗೆ ದ್ರೋಹ ಮಾಡಲಿದ್ದಾರೆ. ಆಗ ಬಿಜೆಪಿ ಮತ್ತೆ ಬಿಎಸ್ಪಿ ಮುಖಂಡರಿಗೆ ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.
ಮಾಯಾವತಿ ತೊಂದರೆಯಲ್ಲಿರುವಾಗಲೆಲ್ಲಾ ಬಿಜೆಪಿ ಅವರಿಗೆ ಸಹಾಯ ಮಾಡಿದೆ. ಭವಿಷ್ಯದಲ್ಲೂ ಅದು ಮುಂದುವರೆಯಲಿದೆ ಎಂದರು. ಈ ಸಂದರ್ಭದಲ್ಲಿ ಅಖಿಲೇಶ್ ಯಾದವ್ ವಿರುದ್ಧ ವಾಗ್ಧಾಳಿ ನಡೆಸಿದ ಮೌರ್ಯ, ಅಖಿಲೇಶ್ ಸ್ವತಃ ತನ್ನ ತಂದೆ ಮುಲಾಯಂ ಸಿಂಗ್ ಮತ್ತು ಚಿಕ್ಕಪ್ಪ ಶಿವಪಾಲ್ ಸಿಂಗ್ ಅವರ ಜೊತೆಗೆ ಸರಿಯಾದ ಸಂಬಂಧ ಹೊಂದಿಲ್ಲ. ಹೀಗಿರುವಾಗ ಮಾಯಾವತಿಯವರಿಗೆ ಹೇಗೆ ತಾನೇ ಮೋಸ ಮಾಡದೆ ಇರಲು ಸಾಧ್ಯ ಎಂದು ಪ್ರಶ್ನಿಸಿದರು. ಮುಂದುವರೆದು ಮಾತನಾಡಿದ ಅವರು ಎಸ್ಪಿ-ಬಿಎಸ್ಪಿ-ಆರ್ಎಲ್ಡಿ ಪಕ್ಷಗಳು ಅವಕಾಶವಾದಿ ರಾಜಕೀಯ ಮಾಡುತ್ತಿವೆ. ಮುಂಬರುವ ದಿನಗಳಲ್ಲಿ ಪರಸ್ಪರ ಭಿನ್ನಾಭಿಪ್ರಾಯದಿಂದಲೇ ಇವರ ಮೈತ್ರಿ ಮುರಿಯಲಿದೆ ಎಂದರು.
ಮಹಾಘಟಬಂಧನ್ ಉದ್ದೇಶ ಮತದಾರರಿಗೆ ತಿಳಿದಿದೆ:
ಮಾಯಾವತಿ ಭಾನುವಾರ ಮುಸ್ಲಿಂ ಮತದಾರರಿಗೆ ಮಾಡಿದ ಮನವಿಯನ್ನು ಟೀಕಿಸಿದ ಕೇಶವ್ ಪ್ರಸಾದ್ ಮೌರ್ಯ, ಬಿಎಸ್ಪಿ ನಾಯಕರು ದಲಿತರನ್ನು ತಮ್ಮ ಮತ ಬ್ಯಾಂಕ್ ಆಗಿ ಮಾತ್ರ ಬಳಸಿಕೊಳ್ಳುತ್ತಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಮತದಾರರಿಗೆ ಈ ಮಹಾಘಟಬಂಧನ್ ಪಕ್ಷಗಳ ಉದ್ದೇಶ ಏನೆಂಬುದು ಸ್ಪಷ್ಟವಾಗಿ ತಿಳಿದಿದೆ ಎಂದರು.
ಬಿಜೆಪಿ ದಲಿತರ ಹಿತೈಷಿ:
ಬಿಜೆಪಿ ದಲಿತರ ಹಿತೈಷಿ ಎಂದು ತಿಳಿಸುತ್ತಾ, ಕುಂಭದಲ್ಲಿ ಪ್ರಧಾನಿ ಮೋದಿ ಸಫಾಯಿ ಕರ್ಮಚಾರಿಯ ಪಾದ ತೊಳೆಯುವ ಮೂಲಕ ಗೌರವ ನೀಡಿದ್ದಾರೆ ಎಂದು ಯುಪಿ ಡಿಸಿಎಂ ತಿಳಿಸಿದರು. ಲೋಕಸಭೆಯಲ್ಲಿ ಕಾಂಗ್ರೆಸ್ ಗೆಲುವಿನ ಸಾಧ್ಯತೆ ಬಗ್ಗೆ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ, ಕಾಂಗ್ರೆಸ್ ದೊಡ್ಡ ದೊಡ್ಡ ಭರವಸೆಗಳನ್ನು ನೀಡಿ ಇನ್ನೂ ದುರ್ಬಲವಾಗಿದೆ. ಉತ್ತರ ಪ್ರದೇಶದಲ್ಲಿ 80 ರಲ್ಲಿ 74 ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ. ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.