ಬೆಂಗಳೂರು: ಪತ್ರಕರ್ತನೊಬ್ಬನ ಹತ್ಯೆಗೆ ಸುಪಾರಿ ನೀಡಿದ ಆರೋಪದಲ್ಲಿ ಪತ್ರಕರ್ತ ರವಿ ಬೆಳಗೆರೆಯನ್ನು ಶುಕ್ರವಾರ ಬೆಂಗಳೂರಿನ ಪದ್ಮನಾಭನಗರದ ಕಚೇರಿಯಲ್ಲಿ ಸಿಸಿಬಿ ಪೊಲೀಸರು ಬಂಧಿಸಿದ್ದು, ಎಫ್ಐಆರ್ ದಾಖಲಿಸಿದ್ದಾರೆ.
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ವೇಳೆ ಬಂಧಿತನಾಗಿದ್ದ ತಾಹೀರ್ ಹುಸೇನ್ ಎಂಬಾತ ನೀಡಿದ್ದ ಮಾಹಿತಿ ಮೇರೆಗೆ ಮತ್ತೊಬ್ಬ ಶಾರ್ಪ್ ಶೂಟರ್ ಶಶಿ ಮುಂಡೇವಾಡಗಿಯನ್ನು ವಶಕ್ಕೆ ಪಡೆದು ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದರು. ವಿಚಾರಣೆ ವೇಳೆ ಪತ್ರಕರ್ತ ಸುನಿಲ್ ಹೆಗ್ಗರವಳ್ಳಿಯನ್ನು ಕೊಲ್ಲಲು ವಿಜಯಪುರ ಮೂಲದ ಶಶಿಧರ್, ರವಿ ಬೆಳಗೆರೆ ಅವರು 30 ಲಕ್ಷ ರೂ. ಸುಪಾರಿ ನೀಡಿ ಸೂಚಿಸಿದ್ದರು ಎಂದು ಹೇಳಿದ್ದ. ಈ ಹಿನ್ನೆಲೆಯಲ್ಲಿ ಹೆಚ್ಚಿನ ವಿಚಾರಣೆಗಾಗಿ ರವಿ ಬೆಳಗೆರೆಯನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಆಗಸ್ಟ್ 28 ರಂದು ಸುನೀಲ್ರನ್ನು ಉತ್ತರ ಹಳ್ಳಿಯಲ್ಲಿರುವ ಅಪಾರ್ಟ್ ಮೆಂಟ್ನಲ್ಲಿ ಶೂಟ್ ಮಾಡಲು ನಿರ್ಧರಿಸಿದ್ದೆ. ಆದರೆ ಸಿಸಿಟಿವಿ ಕಣ್ಗಾವಲು ನೋಡಿ ವಾಪಾಸಾಗಿದ್ದೆ ಎನ್ನುವ ವಿಚಾರವನ್ನು ಶಶಿ ಮುಂಡೇವಾಡಗಿ ಬಾಯ್ಬಿಟ್ಟಿರುವುದಾಗಿ ವರದಿಯಾಗಿದೆ.
ಈಗಾಗಲೇ ಶಾಸಕರ ವಿರುದ್ಧ ಅವಹೇಳನಕಾರಿ ಲೇಖನ ಪ್ರಕಟಿಸಿದ ಆರೋಪದ ಹಿನ್ನೆಲೆಯಲ್ಲಿ ರಾಜ್ಯ ವಿಧಾನಸಭೆಯು ಮೇಲೆ ಪತ್ರಕರ್ತ ರವಿ ಬೆಳಗೆರೆಗೆ ಈಗಾಗಲೆ 1 ವರ್ಷ ಜೈಲು ಶಿಕ್ಷೆ ವಿಧಿಸಿದೇ. ಆದರೆ ರವಿಬೆಳಗೆರೆ ಈ ಶಿಕ್ಷೆಯನ್ನು ಮರುಪರಿಶೀಲಿಸುವಂತೆ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಡಿ.6ರಂದು ಹೈಕೋರ್ಟ್ ವಿಧಾನಸಭೆ ಆದೇಶಕ್ಕೆ ಮಧ್ಯಂತರ ತಡೆ ನೀಡಿತ್ತು.