ಲಕ್ನೋ: ಲೋಕಸಭಾ ಚುನಾವಣೆಗಾಗಿ ಸಮಾಜವಾದಿ ಪಕ್ಷ(ಎಸ್ಪಿ) ಹತ್ರಾಸ್ ಮತ್ತು ಮಿರ್ಜಾಪುರ ಲೋಕಸಭಾ ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದೆ.
ಸಮಾಜವಾದಿ ಪಕ್ಷ(ಎಸ್ಪಿ) ತನ್ನ ಟ್ವಿಟ್ಟರ್ ಹ್ಯಾಂಡಲ್ ಮೂಲಕ ತನ್ನ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದ್ದು, ಮಿಸಲಾತಿ ಕ್ಷೇತ್ರವಾದ ಹತ್ರಾಸ್ ಲೋಕಸಭಾ ಕ್ಷೇತ್ರದಿಂದ ರಾಮ್ಜಿ ಲಾಲ್ ಸುಮನ್ ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ. ಇದೇ ವೇಳೆ ಮಿರ್ಜಾಪುರ ಲೋಕಸಭಾ ಕ್ಷೇತ್ರದಿಂದ ರಾಜೇಂದ್ರ ಎಸ್.ವಿಂಡ್ ಅವರಿಗೆ ಟಿಕೆಟ್ ನೀಡಿದೆ.
ಎಸ್ಪಿ ಈವರೆಗೂ 11 ಅಭ್ಯರ್ಥಿಗಳ ಹೆಸರನ್ನು ಘೋಷಿಸಿದೆ. ಮೊದಲಿಗೆ ಮೂರು ಲೋಕಸಭಾ ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದ್ ಎಸ್ಪಿ ಆ ಪಟ್ಟಿಯಲ್ಲಿ ಅಖಿಲೇಶ್ ಪತ್ನಿ ಡಿಂಪಲ್ ಯಾದವ್ ಹೆಸರನ್ನು ಕೂಡಾ ಸೇರಿಸಿದೆ. ನಂತರದಲ್ಲಿ 6 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಯಿತು, ಅದರಲ್ಲಿ ಪಕ್ಷದ ಪೋಷಕರಾದ ಮುಲಾಯಂ ಸಿಂಗ್ ಯಾದವ್ ಹೆಸರನ್ನು ಘೋಷಿಸಲಾಗಿದೆ.
ಕನೌಜ್ ಕ್ಷೇತ್ರದಿಂದ ಡಿಂಪಲ್ ಯಾದವ್ ಮತ್ತು ಮೇನ್ಪುರಿ ಕ್ಷೇತ್ರದಿಂದ ಮುಲಾಯಂ ಸಿಂಗ್ ಯಾದವ್ ಹೆಸರನ್ನು ಘೋಷಿಸಲಾಗಿದ್ದು, ಎಸ್ಪಿ ರಾಷ್ಟ್ರೀಯ ಅಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅಜಗಢ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.