ನವದೆಹಲಿ: ವಾಯುಸೇನೆಯ ಫೈಟರ್ ಜೆಟ್ ಕಾಶ್ಮೀರದ ಬುದ್ಗಾಮ್‌ನಲ್ಲಿ ಪತನಗೊಂಡ ಬಳಿಕ ದೇಶದ ಐದು ವಿಮಾನ ನಿಲ್ದಾಣಗಳಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದ ವಿಮಾನಯಾನ ಸೇವೆಯನ್ನು ಪುನರಾರಂಭ ಮಾಡಲಾಗಿದೆ.
ಈ ಬಗ್ಗೆ ಐಎಎನ್ಎಸ್ ವರದಿ ಮಾಡಿದ್ದು, ಭಾರತೀಯ ವಿಮಾನ ನಿಲ್ದಾಣಗಳಲ್ಲಿ ಬುಧವಾರ ಬೆಳಿಗ್ಗೆ ರದ್ದುಪಡಿಸಲಾಗಿದ್ದ ವಾಣಿಜ್ಯ ವಿಮಾನಯಾನ ಸೇವೆಯನ್ನು ಪುನರಾರಂಭ ಮಾಡಲಾಗಿದೆ ಎಂದು ಸಿವಿಲ್ ಏವಿಯೇಷನ್ (ಡಿಜಿಸಿಎ) ಡೈರೆಕ್ಟರೇಟ್ ಜನರಲ್ ತಿಳಿಸಿದ್ದಾರೆ.
ಭಾರತ ಹಾಗೂ ಪಾಕಿಸ್ತಾನ ನಡುವೆ ಯುದ್ಧ ಸನ್ನದ್ಧ ಎಂಬ ಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಮುಂಜಾಗ್ರತ ಕ್ರಮವಾಗಿ ಚಂಡೀಗಢ, ಅಮೃತ್‌ಸರ, ಜಮ್ಮು, ಲೇಹ್ ಹಾಗೂ ಶ್ರೀನಗರ ವಿಮಾನ ನಿಲ್ದಾಣಗಳಲ್ಲಿ ನಾಗರಿಕ ವಿಮಾನಯಾನ ಸೇವೆಗಳನ್ನು ರದ್ದುಪಡಿಸಿ ಆದೇಶ ಹೊರಡಿಸಲಾಗಿತ್ತು.
ಇದೇ ವೇಳೆ ಜಮ್ಮು-ಕಾಶ್ಮೀರದ ವಿಮಾನ ನಿಲ್ದಾಣಗಳು, ಪಠಾಣ್ ಕೋಟ್ ನ ವಾಯುನೆಲೆಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು, ರಜೆಯಲ್ಲಿರುವ ಯೋಧರಿಗೆ ಕೂಡಲೇ ಮರಳಿ ಬರುವಂತೆ ರಕ್ಷಣಾ ಇಲಾಖೆ ಸೂಚನೆ ನೀಡಿದೆ. ಇನ್ನು ಯಾವುದೇ ಕ್ಷಣದಲ್ಲಿ ಟೇಕ್ ಆಫ್ ಆಗಲು ಸಿದ್ಧವಾಗಿರುವಂತೆ ವಾಯುಪಡೆಗೆ ಸೂಚನೆ ನೀಡಲಾಗಿದ್ದು, ಯಲಹಂಕಾ ವಾಯುನೆಲೆಯಿಂದ ಯುದ್ಧ ವಿಮಾನಗಳನ್ನು ಗಡಿ ಭಾಗಕ್ಕೆ ರವಾನೆ ಮಾಡಲು ಸೂಚನೆ ನೀಡಲಾಗಿದೆ.