Chattisgad IED Blast: ಛತ್ತೀಸ್ಗಢದ ನಕ್ಸಲ್ ಪೀಡಿತ ದಾಂತೇವಾಡ ಜಿಲ್ಲೆಯಲ್ಲಿ ಬುಧವಾರ (ಏಪ್ರಿಲ್ 26) ನಕ್ಸಲರು ನಡೆಸಿರುವ ದಾಳಿಯಲ್ಲಿ 11 ಡಿಆರ್ಜಿ (ಜಿಲ್ಲಾ ಮೀಸಲು ಗಾರ್ಡ್) ಯೋಧರು ಹುತಾತ್ಮರಾಗಿದ್ದಾರೆ. ಜಿಲ್ಲೆಯ ಅರನ್ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಕ್ಸಲೀಯರು ನೆಲಬಾಂಬ್ (ಐಇಡಿ) ಸ್ಫೋಟಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಅರನ್ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾವೋವಾದಿ ಕೇಡರ್ ಇರುವ ಕುರಿತು ಖಚಿತ ಮಾಹಿತಿ ಪಡೆದ ಪೊಲೀಸರು, ದಾಂತೇವಾಡದಿಂದ ನಕ್ಸಲ್ ವಿರೋಧಿ ಕಾರ್ಯಾಚರಣೆಗೆ ಡಿಆರ್ಜಿ ಪಡೆಯನ್ನು ರವಾನಿಸಲಾಗಿತ್ತು ಎಂದು ಅವರು ಹೇಳಿದ್ದಾರೆ.
ಈ ದಾಳಿಯ ನಂತರ ಛತ್ತೀಸ್ಗಢ ಸಿಎಂ ಭೂಪೇಶ್ ಬಘೇಲ್ ನಕ್ಸಲಿಸಂ ಅಂತ್ಯಗೊಳಿಸುವ ಕುರಿತು ಟ್ವೀಟ್ ಮಾಡಿದ್ದಾರೆ. ಡಿಆರ್ಜಿ ಪಡೆಗಳ ಮೇಲೆ ಐಇಡಿ ಸ್ಫೋಟದಿಂದ ನಮ್ಮ ಯೋಧರು ಹುತಾತ್ಮರಾದ ಸುದ್ದಿ ತುಂಬಾ ನೋವು ತಂದಿದೆ ಎಂದು ಅವರು ಹೇಳಿದ್ದಾರೆ. ರಾಜ್ಯದ ಜನತೆಯ ಪರವಾಗಿ ನಾವು ಅವರೆಲ್ಲರಿಗೂ ನಮನ ಸಲ್ಲಿಸುತ್ತೇವೆ ಎಂದಿದ್ದಾರೆ. ಅಷ್ಟೇ ಅಲ್ಲ ನಕ್ಸಲರನ್ನು ಯಾವುದೇ ಕಾರಣಕ್ಕೂ ಸುಮ್ಮನೆ ಬಿಡಲಾಗುವುದಿಲ್ಲ. ಯೋಜಿತ ರೀತಿಯಲ್ಲಿ ನಕ್ಸಲಿಸಂ ಅಂತ್ಯಗೊಳಿಸುತ್ತೇವೆ ಎಂದು ಅವರು ಹೇಳಿದ್ದಾರೆ. ಈ ಹಿಂದೆಯೂ ನಕ್ಸಲೀಯರು ಹಲವು ಬಾರಿ ದಾಳಿ ನಡೆಸಿದ್ದಾರೆ.
ದೇಶದಲ್ಲಿ ದೇಶದಲ್ಲಿ ನಡೆದ ಪ್ರಮುಖ ನಕ್ಸಲ್ ದಾಳಿಗಳು
>> ಏಪ್ರಿಲ್ 6, 2010 - ಛತ್ತೀಸ್ಗಢದ ದಾಂತೇವಾಡದಲ್ಲಿ ನಕ್ಸಲೀಯರ ದಾಳಿ, 76 ಯೋಧರು ಹುತಾತ್ಮ
>> ಮೇ 25, 2013 - ಜೀರಾಮ್ ಕಣಿವೆಯಲ್ಲಿ ಕಾಂಗ್ರೆಸ್ನ ಪರಿವರ್ತನ್ ಯಾತ್ರೆಯ ಮೇಲೆ ದಾಳಿ, ಉನ್ನತ ಕಾಂಗ್ರೆಸ್ ನಾಯಕರು ಸೇರಿದಂತೆ 30 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು.
>> ಮಾರ್ಚ್ 11, 2014 - ಸುಕ್ಮಾ ಜಿಲ್ಲೆಯ ತಹಕ್ವಾಡದಲ್ಲಿ ನಕ್ಸಲೈಟ್ ದಾಳಿ, 15 ಯೋಧರು ಹುತಾತ್ಮ
>> ಏಪ್ರಿಲ್ 12, 2014- ಛತ್ತೀಸ್ಗಢದ ಬಸ್ತರ್ ಜಿಲ್ಲೆಯ ದರ್ಭಾದಲ್ಲಿ ನಕ್ಸಲೀಯರ ದಾಳಿ, 5 ಯೋಧರು ಸೇರಿದಂತೆ 14 ಜನರು ಸಾವು
>> ಮಾರ್ಚ್ 11, 2017 - ಸುಕ್ಮಾದ ಹತ್ತಿರವಿರುವ ಭೆಜ್ಜಿ ಪ್ರದೇಶದಲ್ಲಿ ನಕ್ಸಲೀಯರ ದಾಳಿಯಲ್ಲಿ 12 ಸಿಆರ್ಪಿಎಫ್ ಯೋಧರು ಹುತಾತ್ಮರಾಗಿದ್ದರು.
>> ಏಪ್ರಿಲ್ 24, 2017 - ಸುಕ್ಮಾದಲ್ಲಿ ನಕ್ಸಲೀಯರು ನಡೆಸಿದ ದಾಳಿಯಲ್ಲಿ 25 ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ (CRPF) ಸಿಬ್ಬಂದಿ ಹುತಾತ್ಮರಾಗಿದ್ದರು.
>> ಮಾರ್ಚ್ 21, 2020 - ಸುಕ್ಮಾ ಜಿಲ್ಲೆಯ ಮಿನ್ಪಾದಲ್ಲಿ ಸೈನಿಕರ ಮೇಲೆ ನಕ್ಸಲೈಟ್ ದಾಳಿ, 17 ಸೈನಿಕರು ಹುತಾತ್ಮರಾಗಿದ್ದಾರೆ
>> ಮಾರ್ಚ್ 23, 2021 - ಛತ್ತೀಸ್ಗಢದ ನಾರಾಯಣಪುರ ಜಿಲ್ಲೆಯಲ್ಲಿ ಸೈನಿಕರು ತುಂಬಿದ್ದ ಬಸ್ ಮೇಲೆ ದಾಳಿ, 5 ಸೈನಿಕರು ಹುತಾತ್ಮರಾದರು
>> 4 ಏಪ್ರಿಲ್ 2021 - ಛತ್ತೀಸ್ಗಢದ ಬಿಜಾಪುರ ಮತ್ತು ಸುಕ್ಮಾ ಜಿಲ್ಲೆಯ ಗಡಿಯಲ್ಲಿ ನಕ್ಸಲೀಯರ ದಾಳಿ, 22 ಯೋಧರು ಹುತಾತ್ಮ
ಇದನ್ನೂ ಓದಿ-ಛತ್ತೀಸ್ಗಢದ ದಾಂತೇವಾಡದಲ್ಲಿ ನಕ್ಸಲರ ದಾಳಿಗೆ 10 ಪೊಲೀಸರ ಬಲಿ
ಸಿಎಂ ಜೊತೆಗೆ ಮಾತುಕತೆ ನಡೆಸಿದ ಕೇಂದ್ರ ಗೃಹ ಸಚಿವ
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಛತ್ತೀಸ್ಗಢ ಸಿಎಂ ಜೊತೆ ಮಾತನಾಡಿ ದಂತೇವಾಡ ಜಿಲ್ಲೆಯ ಅರನ್ಪುರ ಬಳಿ ನಕ್ಸಲೀಯರ ದಾಳಿಯಲ್ಲಿ ಹುತಾತ್ಮರಾದ ಯೋಧರ ಬಗ್ಗೆ ವಿಚಾರಣೆ ನಡೆಸಿದ್ದಾರೆ. ಛತ್ತೀಸ್ಗಢ ಸಿಎಂಗೆ ಎಲ್ಲ ರೀತಿಯ ನೆರವು ನೀಡುವುದಾಗಿ ಗೃಹ ಸಚಿವರು ಈ ಸಂದರ್ಭದಲ್ಲಿ ಭರವಸೆ ನೀಡಿದ್ದಾರೆ. ಅರನ್ಪುರ ರಸ್ತೆಯಲ್ಲಿ ಮಾವೋವಾದಿಗಳು ನೆಲಬಾಂಬ್ ಸ್ಫೋಟಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ, ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಪಡೆಯನ್ನು ರವಾನಿಸಲಾಗಿದೆ.
ಇದನ್ನೂ ನೋಡಿ -
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.