ಕೆರೆಬೇಟೆ ಅನ್ನೋದು ಮಲೆನಾಡ ಭಾಗದಲ್ಲಿ ನಡೆಯೋ ಒಂದು ಜಾನಪದ ಕ್ರೀಡೆ. ಈ ಕ್ರೀಡೆಯೆಂದ್ರೆ ಇಲ್ಲಿನ ಜನರಿಗೆ ಅದೇನೋ ಉತ್ಸಾಹ, ಹುಮ್ಮಸ್ಸು. ಕೆರೆಯಲ್ಲಿರೋ ಮೀನನ್ನ ಹಿಡಿದು ಸಂಭ್ರಮ ಪಡೋದೆ ಇಲ್ಲಿನ ಜನರ ಆಸೇ ಕೂಡ.... ಬಿದಿರು ಕಡ್ಡಿಯಿಂದ ಮಾಡಿರೋ ಕೂಣಿಯಿಂದ ಮೀನು ಹಿಡಿಯೋ ಈ ಕ್ರೀಡೇಯಲ್ಲಿ ಸಾವಿರಾರು ಮಂದಿ ಪಾಲ್ಗೊಳ್ತಾರೆ... ಅಂತಾ ಕ್ರೀಡೆಗೆ ಸಾಕ್ಷಿ ಆಗಿದ್ದು ಅವಳಿ ಗ್ರಾಮಗಳು...... ಅದು ಎಲ್ಲಿ ಅಂತಿರಾ???...ಹಾಗಾದ್ರೆ ಈ ಸ್ಟೋರಿ ಓದಿ...
ಸಾವಿರದಷ್ಟು ಮಂದಿ ಒಂದೇ ಬಾರಿಗೆ ಕೆರೆಗೆ ಇಳಿದಿದ್ದರು.... ಹಾಗಂತ ಅವರೆಲ್ಲ ನೀರಿನಲ್ಲಿ ಈಜಲು ತೆರಳಿದ್ದರು ಎಂದೆನಲ್ಲ... ಅವರೆಲ್ಲ ಕೈಯಲ್ಲಿ ಕೂಣಿ ಹಿಡಿದು ಮೀನು ಹಿಡಿಯುವ ಕಸರತ್ತು ನಡೆಸಿದ್ದರು. ಅದನ್ನು ನೋಡಲು, ಹಿಡಿದ ಮೀನು ಹಿಡಿದುಕೊಳ್ಳಲು ಸಾವಿರಾರು ಮಂದಿ ಕೆರೆಯ ಸುತ್ತಲೂ ನೆರೆದಿದ್ದರು. ಹೌದು ಈ ದೃಶ್ಯ ಕಂಡು ಬಂದಿದ್ದು ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿ ಸಮೀಪದ ಮಧುರವಳ್ಳಿ- ಹಾಡಲಗಿ ಗ್ರಾಮದ ದೊಡ್ಡಕೆರೆಯಲ್ಲಿ.
ಇಂತಹದ್ದೊಂದು ಪಾರಂಪರಿಕ ಗ್ರಾಮೀಣ ಜಾನಪದ ಸೊಗಡಿನ ಸಂಪ್ರದಾಯಕ್ಕೆ ಈ ಅವಳಿ ಗ್ರಾಮಗಳ ಕೆರೆ ಸಾಕ್ಷಿಯಾಗಿತ್ತು. ಕೆರೆಯಲ್ಲಿ ಇರುವ ಮೀನುಗಳನ್ನು ಸುತ್ತಮುತ್ತಲಿನ ಹಳ್ಳಿಗರು ಒಂದೇ ಸಮಯಕ್ಕೆ ಸೇರಿ ಹಿಡಿಯುವ ಸಂಪ್ರದಾಯವಿದು. ಒಂದು ಬದಿಗೆ ಬಾಯ್ತೆರೆದಿರುವ ಬೆತ್ತದ ಬುಗುರಿ ಆಕಾರದ ಕೂಣಿಯನ್ನು ಕೈಯಲ್ಲಿ ಹಿಡಿದು ಒಂದೇ ಸಮಯಕ್ಕೆ ಕೆರೆಯ ಒಂದು ಕಡೆಯಿಂದ ಕೂಣಿಯನ್ನು ನೀರಲ್ಲಿ ಒತ್ತುತ್ತಾ, ಕೇ ಕೇ ಹಾಕುತ್ತಾ, ಪೈಪೊಟಿಯಲ್ಲಿ ಸಾಗುತ್ತಾರೆ. ಹೀಗೆ ಸಾಗುತ್ತಾ ಇರುವ ಸಂದರ್ಭದಲ್ಲಿ ಕುಣಿಯಲ್ಲಿ ಮೀನುಗಳು ಸಿಲುಕಿದರೆ ಬೇಟೆಗಾರನಿಗೆ ಗೊತ್ತಾಗುತ್ತದೆ. ಆಗ ಕೂಣಿಯ ಮೇಲ್ಭಾಗದಲ್ಲಿರುವ ರಂಧ್ರದಲ್ಲಿ ಕೈ ಹಾಕಿ ಸಿಲುಕಿರುವ ಮೀನನ್ನು ತೆಗೆದು ತನ್ನ ಹೆಗಲಿಗಿರುವ ಚೀಲದೊಳಗೆ ಮೀನನ್ನು ಹಾಕಿಕೊಂಡು ಮತ್ತೆ ತನ್ನ ಕಾರ್ಯವನ್ನು ಮುಂದುವರಿಸುತ್ತಾರೆ. ಹಿಡಿದವರಿಗೇ ಈ ಮೀನು ಸಲ್ಲುತ್ತವೆ. ಅದೆಷ್ಟೂ ಮೀನುಗಳ ಜಾತಿ ಇರೋದು ಈ ಕ್ರೀಡೇಯಲ್ಲಿ ಭಾಗವಹಿಸಿದ ಹಳ್ಳಿಗರಿಗೆ ಪರಿಚಯವಿರತ್ತೆ.... ಗೌರಿ ಮೀನು, ಮುರುಗೋಡು, ಬಾಂಬೇ ಕಾಟ್ಲಾ ಅಂತಾ ಜಾತಿ ಮೀನುಗಳ ಹಿಡಿದು ಜನರು ಸಂಭ್ರಮ ಪಡುತ್ತಾರೆ.
ಇದನ್ನೂ ಓದಿ- ಮತದಾನ ಬಹಿಷ್ಕಾರಕ್ಕೆ ಮುಂದಾದ ಗೌಡಹಳ್ಳಿ ಗ್ರಾಮಸ್ಥರು
ಈ ಕೆರೆಯಲ್ಲಿ ಅನಾದಿ ಕಾಲದಿಂದ ಈ ಕೆರೆಬೇಟೆ ನಡೆಯುತ್ತಾ ಬಂದಿದೆ. ಕಳೆದ ಹತ್ತು ವರ್ಷಗಳಿಂದ ಕೆರೆ ಬೇಟೆ ನಡೆದಿಲ್ಲ. ಕೆರೆ ಬೇಟೆಯ ಸಲುವಾಗಿ ಸಂಘಟಕರು ಈ ಹಿಂದೆ 2ಲಕ್ಷ ಮೀನಿನ ಮರಿಗಳನ್ನು ಬಿಟ್ಟಿದ್ದರು. ಪ್ರತಿ ಬಾರಿ ಕೆರೆಬೇಟೆ ನಡೆಸುವಾಗ ಅದರಿಂದ ಬರುವ ಆದಾಯವನ್ನು ಗ್ರಾಮೀಣ ಅಭಿವದ್ಧಿಗೆ ಬಳಸುವುದು ಇಲ್ಲಿ ರೂಢಿಯಲ್ಲಿದೆ. ಇಲ್ಲಿನ ಶ್ರೀ ಮಾರಿಕಾಂಬಾ ಹಾಗೂ ಶ್ರೀ ಆಂಜನೇಯ ಧರ್ಮದರ್ಶಿ ಸಮಿತಿ ಮತ್ತು ಗ್ರಾಮಾಭಿವದ್ಧಿ ಸಮಿತಿ ನೇತತ್ವದಲ್ಲಿ ನಡೆದ ಈ ಕೆರೆಬೇಟೆಗೆ ಭಾಗವಹಿಸಲು ಒಂದು ಕುಣಿಗೆ 500 ರೂ. ಶುಲ್ಕ ವಿಧಿಸಲಾಗಿತ್ತು. ಆದಾಯವನ್ನು ಇಲ್ಲಿನ ಶ್ರೀ ಮಾರಿಕಾಂಬಾ ಹಾಗೂ ಶ್ರೀ ಆಂಜನೇಯ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಬಳಸಲಾಗುತ್ತಿದೆ. ಸುಮಾರು 1000ಕ್ಕೂ ಅಧಿಕ ಮಂದಿ ಹೆಸರು ನೋಂದಾಯಿಸಿದ್ದರು. ಇದೀಗ ಮೀನು ಹಿಡಿದು ಖುಷಿಯಿಂದ ಹೋಗ್ತಿದ್ದಾರೆ ಅಂತಾರೆ ಸಂಘಟಕರು....
ಇದನ್ನೂ ಓದಿ- ಮಲ್ಲೇಶ್ವರಂನಲ್ಲಿ ಬದಲಾವಣೆಯ ಪರ್ವ ತರುತ್ತೇನೆ
ಒಟ್ಟಾರೆ ಸುತ್ತಮುತ್ತಲಿನ ಹಲವು ಹಳ್ಳಿಗಳಿಂದ ಸಾವಿರಕ್ಕೂ ಅಧಿಕ ಜನರು ಮೀನು ಬೇಟೆಗೆ ಬಂದಿದ್ದರೆ, ಎರಡು ಸಾವಿರಕ್ಕೂ ಅಧಿಕ ಮಂದಿ ಕೆರೆಯ ದಡದ ಸುತ್ತ ನಿಂತು ಕೆರೆ ಬೇಟೆ ವೀಕ್ಷಿಸಿ ಖುಷಿಪಟ್ಟರು. ಇಂತಹ ಕ್ರೀಡೆಗಳು ಇನ್ನಷ್ಟು ನಡೆಯಬೇಕಿದೆ... ಅದರಿಂದ ಹಳ್ಳಿಗರ ಮೋಜಿನ ಕ್ರೀಡೆಗೆ ಹೆಚ್ಚು ಪ್ರೋತ್ಸಾಹ ಪಡುವಂತಾಗಲಿ ಎಂಬುದೇ ನಮ್ಮ ಆಶಯವಾಗಿದೆ..
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.