ನವದೆಹಲಿ: ಒಂದು ವೇಳೆ ಮುಂಬರುವ ಲೋಕಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ರಾಮ ಮಂದಿರ ವಿಷಯವನ್ನು ಸೇರಿಸಿದ್ದೆ ಆದಲ್ಲಿ ನಾವು ಬೆಂಬಲಿಸುವ ನಿರ್ಧಾರ ಕೈಗೊಳ್ಳುವ ವಿಚಾರವಾಗಿ ಚಿಂತನೆ ನಡೆಸುತ್ತೇವೆ ಎಂದು ವಿಶ್ವ ಹಿಂದೂ ಪರಿಷತ್ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್ ಹೇಳಿದ್ದಾರೆ. ಆದರೆ ನಂತರ ಈ ಹೇಳಿಕೆಯಿಂದ ಅವರು ನುಣುಚಿಕೊಳ್ಳುವ ಪ್ರಯತ್ನ ಮಾಡಿದ್ದಾರೆ.
"ಕಾಂಗ್ರೆಸ್ ನಮಗೆ ಎಲ್ಲ ಬಾಗಿಲುಗಳನ್ನು ಮುಚ್ಚಿದೆ, ಒಂದು ವೇಳೆ ಆ ಬಾಗಿಲುಗಳನ್ನು ತೆರೆದು ರಾಮಮಂದಿರ ನಿರ್ಮಾಣದ ವಿಚಾರವನ್ನು ತಮ್ಮ ಪ್ರಣಾಳಿಕೆಯಲ್ಲಿ ಸೇರಿಸಿದ್ದೇ ಆದಲ್ಲಿ ನಾವು ಪಕ್ಷಕ್ಕೆ ಬೆಂಬಲ ನೀಡುವ ವಿಚಾರವಾಗಿ ಚಿಂತನೆ ನಡೆಸುತ್ತೇವೆ "ಎಂದು ಅಲೋಕ್ ಕುಮಾರ್ ಹೇಳಿಕೆ ನೀಡಿದ್ದರು.
ಇದಾದ ನಂತರ ತಮ್ಮ ಹೇಳಿಕೆಯಿಂದ ಜಾರಿಕೊಳ್ಳುವ ಪ್ರಯತ್ನ ಮಾಡುತ್ತಾ ಸ್ಪಷ್ಟೀಕರಣ ನೀಡಿದ ಅಲೋಕ್ ಕುಮಾರ್ ಅವರು" ನನ್ನ ಹೇಳಿಕೆಯಲ್ಲಿ ಏನೂ ಇಲ್ಲ ಅದನ್ನು ಎಳೆಯಲಾಗಿದೆ. ನಾವು ಕಾಂಗ್ರೆಸ್ ಬೆಂಬಲ ನೀಡುವ ವಿಚಾರವನ್ನು ಪರಿಗಣಿಸಿಲ್ಲ ಅದನ್ನು ನಾವು ಭವಿಷ್ಯದಲ್ಲೂ ಮಾಡುತ್ತಿಲ್ಲ" ಎಂದು ಹೇಳಿದರು.
ಇನ್ನು ಮುಂದುವರೆದು ಮಾತನಾಡಿದ ಅವರು ರಾಜಕೀಯದ ಎಲ್ಲ ವಿಭಾಗವು ಕೂಡ ಇದಕ್ಕೆ ಬೆಂಬಲ ನೀಡುವ ವಿಚಾರವಾಗಿ ಒಪ್ಪಂದಕ್ಕೆ ಬರುವ ಪ್ರಯತ್ನ ಮಾಡುತ್ತಿರುವುದಾಗಿ ಹೇಳಿದರು." ನಾವು ಎಲ್ಲ ರಾಜಕೀಯ ಪಕ್ಷಗಳು ಈ ವಿಚಾರವಾಗಿ ಬೆಂಬಲ ನೀಡಬೇಕೆಂದು ಬಯಸುತ್ತೇವೆ.ಯಾರೇ ಬೆಂಬಲ ನೀಡಲಿ ನಾವು ಅದನ್ನು ಸ್ವಾಗತಿಸುತ್ತೇವೆ. ಇದರ ಅರ್ಥ ವಿಶ್ವ ಹಿಂದೂ ಪರಿಷತ್ ಒಂದು ರಾಜಕೀಯ ಪಕ್ಷವನ್ನು ಬೆಂಬಲಿಸುತ್ತದೆ ಅಂತ ಅಲ್ಲ ಎಂದರು.