ನವದೆಹಲಿ: ಸಾಮಾನ್ಯ ವಿಭಾಗದ ಆರ್ಥಿಕ ದುರ್ಬಲ ವರ್ಗಗಳಿಗೆ (ಇಡಬ್ಲ್ಯುಎಸ್)ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇ.10 ರಷ್ಟು ಮೀಸಲಾತಿ ನೀಡುವ 2019 ರ ಸಂವಿಧಾನ(124 ನೇ ತಿದ್ದುಪಡಿ) ಮಸೂದೆಯನ್ನು ಪ್ರಶ್ನಿಸಿ ಈಗ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಾಗಿದೆ.
ಸರ್ಕಾರೇತರ ಸಂಸ್ಥೆ ಮತ್ತು ಕೌಶಲ್ ಕಾಂಟ್ ಮಿಶ್ರಾ ಅವರು ಮಸೂದೆಯನ್ನು ರದ್ದುಪಡಿಸುವಂತೆ ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅವರು ಅರ್ಜಿಯಲ್ಲಿ ಆರ್ಥಿಕಮಾನದಂಡಗಳೊಂದೆ ಮೀಸಲಾತಿಯ ಏಕೈಕ ಆಧಾರವಾಗಿರಬಾರದು ಎಂದು ತಿಳಿಸಿದ್ದಾರೆ.ಆರ್ಥಿಕ ಆಧಾರದ ಮೇಲೆ ಮೀಸಲಾತಿ ಸಾಮಾನ್ಯ ವರ್ಗಗಳಿಗೆ ಸೀಮಿತವಾಗಿರಬಾರದು ಮತ್ತು ಶೇ 50 ರ ಮಿತಿಯನ್ನು ಉಲ್ಲಂಘಿಸಬಾರದು, ಇದು ಸಂವಿಧಾನದ ಸಂವಿಧಾನದ ಮೂಲಭೂತ ಗುಣಲಕ್ಷಣವನ್ನು ಉಲ್ಲಂಘಿಸುತ್ತದೆ ಎಂದು ತಿಳಿಸಿದ್ದಾರೆ.
ಮಂಡಲ್ ಆಯೋಗದ ಶಿಫಾರಸ್ಸುಗಳನ್ನು ಜಾರಿಗೆ ತಂದ ನಂತರ ಮೂರು ದಶಕಗಳ ನಂತರ ಇದೇ ಮೊದಲ ಬಾರಿಗೆ ಮಿಸಲಾತಿಗೆ ಕುರಿತಾದ ಕಾನೂನುಗಳನ್ನು ಜಾರಿಗೆ ತರಲು ಸರ್ಕಾರ ಹೊರಟಿದೆ. ಮೊದಲು ಲೋಕಸಭೆಯಲ್ಲಿ ಮಂಡನೆಯಾಗಿ ಅಲ್ಲಿಂದ ಒಪ್ಪಿಗೆ ಪಡೆದು ನಂತರ ರಾಜ್ಯಸಭೆಯಲ್ಲಿಯೂ ಕೂಡ ಬಹುಮತ ಪಡೆಯುವಲ್ಲಿ ಯಶಸ್ವಿಯಾಯಿತು. ಇನ್ನೊಂದೆಡೆ ಪ್ರತಿಪಕ್ಷಗಳು ಇದನ್ನು ಚುನಾವಣಾ ನಡೆ ಎಂದು ಟೀಕಿಸಿದವು.