ಮೈಸೂರು: ಮೈಸೂರು ವಿಮಾನ ನಿಲ್ದಾಣದಿಂದ 6 ನಗರಗಳಿಗೆ ರಿಯಾಯಿತಿ ದರದಲ್ಲಿ ವಿಮಾನ ಹಾರಾಟ ಆರಂಭಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಕೇಂದ್ರ ಸರ್ಕಾರದ ಉಡಾನ್ ಯೋಜನೆಯಡಿ ಮೈಸೂರು ವಿಮಾನ ನಿಲ್ದಾಣದಿಂದ ಬೆಂಗಳೂರು, ಬೆಳಗಾವಿ, ಗೋವಾ, ಕೊಚ್ಚಿ ಮತ್ತು ಹೈದರಾಬಾದ್(2 ವಿಮಾನಗಳು) ನಗರಗಳಿಗೆ 72 ಆಸನಗಳ ಟ್ರೂ ಜೆಟ್ ವಿಮಾನಯಾನ ಆರಂಭಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ ಎಂದಿದ್ದಾರೆ.
ಈ ವಿಮಾನಗಳ ಶೇ.50 ಸೀಟುಗಳ ಪ್ರಯಾಣ ದರ 2,500 ರೂ. ಇದ್ದು, ಉಳಿದ ಸೀಟುಗಳಿಗೆ ಮಾರುಕಟ್ಟೆ ದರ ಅನ್ವಯವಾಗಲಿದೆ. ಈ ಸೇವೆಯಿಂದ ನಗರಗಳಿಗೆ ಆರ್ಥಿಕವಾಗಿ ಮತ್ತು ಪ್ರವಾಸೋದ್ಯಮದ ದೃಷ್ಟಿಯಿಂದಲೂ ಸಹಾಯವಾಗಲಿದೆ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಚಿವ ಜಯಂತ್ ಸಿನ್ಹಾ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದ ಪ್ರತಾಪ್ ಸಿಂಹ ಅವರು, ಸದ್ಯದಲ್ಲೆ ವಿಮಾನ ಹಾರಾಟ ನಡೆಸುವ ದಿನಾಂಕ ಹಾಗೂ ವೇಳಾಪಟ್ಟಿಯನ್ನು ಪ್ರಕಟಿಸಲಾಗುವುದು. ಈ ವಿಮಾನ ಹಾರಾಟದಿಂದ ಸಾಂಸ್ಕೃತಿಕ ನಗರಿಯಲ್ಲಿ ಪ್ರವಾಸೋದ್ಯಮ, ಕೈಗಾರಿಕೋದ್ಯಮ ಅಭಿವೃದ್ಧಿಗೆ ಅನುಕೂಲವಾಗಲಿದೆ ಎಂದರು.