Karnataka budget 2023 : ಇದೊಂದು ಬಿಸಿಲ್ಗುದುರೆ ಬಜೆಟ್, ಕಣ್ಣಿಗೆ ಕಾಣುತ್ತದೆ, ಆದರೆ ಕೈಗೆ ಸಿಗಲ್ಲ..!

ಇದೊಂದು ಬಿಸಿಲ್ಗುದುರೆ ಬಜೆಟ್, ಕೈಗೆ ಏನೂ ಸಿಗಲ್ಲ. ಈ ಬಜೆಟ್ ಜಾತ್ರೆಯಲ್ಲಿ ಸಿಗುವ ಬಣ್ಣದ ಕನ್ನಡಕದಂತೆ, ಅದರಲ್ಲಿ ನೋಡಿದರೆ ಏನೂ ಕಾಣುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಛೇಡಿಸಿದ್ದಾರೆ. ಕಳೆದ ನಾಲ್ಕು ವರ್ಷದಿಂದ ಅಧಿಕಾರದಲ್ಲಿದ್ದಾಗ ಸರ್ಕಾರ ಜನರಿಗೆ ಏನೂ ಮಾಡಿಲ್ಲ. ಕಳೆದ ಬಾರಿಯ ಬಜೆಟ್ ನಲ್ಲಿ ಘೋಷಿಸಿದ್ದನ್ನು ಜಾರಿ ಮಾಡಿಲ್ಲ. ಈ ಬಾರಿ ಬಜೆಟ್ ನಲ್ಲಿ ಜಾರಿ ಮಾಡುವಂತಹದ್ದು ಏನೂ ಇಲ್ಲ ಎಂದು ಹೇಳಿದ್ದಾರೆ.

Written by - Prashobh Devanahalli | Edited by - Krishna N K | Last Updated : Feb 17, 2023, 06:53 PM IST
  • ಇದೊಂದು ಬಿಸಿಲ್ಗುದುರೆ ಬಜೆಟ್, ಕೈಗೆ ಏನೂ ಸಿಗಲ್ಲ.
  • ಈ ಬಜೆಟ್ ಜಾತ್ರೆಲಿ ಸಿಗುವ ಕನ್ನಡಕದಂತೆ, ನೋಡಿದರೆ ಏನೂ ಕಾಣುವುದಿಲ್ಲ.
  • ಬಜೆಟ್‌ ಕುರಿತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಟೀಕೆ.
Karnataka budget 2023 : ಇದೊಂದು ಬಿಸಿಲ್ಗುದುರೆ ಬಜೆಟ್, ಕಣ್ಣಿಗೆ ಕಾಣುತ್ತದೆ, ಆದರೆ ಕೈಗೆ ಸಿಗಲ್ಲ..! title=

ಬೆಂಗಳೂರು : ಇದೊಂದು ಬಿಸಿಲ್ಗುದುರೆ ಬಜೆಟ್, ಕೈಗೆ ಏನೂ ಸಿಗಲ್ಲ. ಈ ಬಜೆಟ್ ಜಾತ್ರೆಯಲ್ಲಿ ಸಿಗುವ ಬಣ್ಣದ ಕನ್ನಡಕದಂತೆ, ಅದರಲ್ಲಿ ನೋಡಿದರೆ ಏನೂ ಕಾಣುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಛೇಡಿಸಿದ್ದಾರೆ. ಕಳೆದ ನಾಲ್ಕು ವರ್ಷದಿಂದ ಅಧಿಕಾರದಲ್ಲಿದ್ದಾಗ ಸರ್ಕಾರ ಜನರಿಗೆ ಏನೂ ಮಾಡಿಲ್ಲ. ಕಳೆದ ಬಾರಿಯ ಬಜೆಟ್ ನಲ್ಲಿ ಘೋಷಿಸಿದ್ದನ್ನು ಜಾರಿ ಮಾಡಿಲ್ಲ. ಈ ಬಾರಿ ಬಜೆಟ್ ನಲ್ಲಿ ಜಾರಿ ಮಾಡುವಂತಹದ್ದು ಏನೂ ಇಲ್ಲ ಎಂದು ಹೇಳಿದ್ದಾರೆ.

ದಮ್ಮು, ತಾಕತ್ತಿನ ಬಗ್ಗೆ ಮಾತನಾಡುವ ಮುಖ್ಯಮಂತ್ರಿಗಳಿಗೆ ಬಜೆಟ್ ಓದುವಾಗ ಸ್ವರವೇ ಇರಲಿಲ್ಲ. ಈ ಬಜೆಟ್ ನಲ್ಲಿ ರೈತರು, ಕಾರ್ಮಿಕರು, ಯುವಕರು, ವರ್ತಕರು ಯಾರಿಗೂ ಲಾಭವಿಲ್ಲ. ಈ ಬಜೆಟ್ ನಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಬಗ್ಗೆಯೂ ಮಾತನಾಡಿಲ್ಲ. ಸ್ವಯಂ ಉದ್ಯೋಗ ಯೋಜನೆಗಳೂ ಇಲ್ಲ. ಹೀಗಾಗಿ ಈ ಬಜೆಟ್ ನಿಂದ  ಯಾವುದೇ ವರ್ಗಕ್ಕೂ ಪ್ರಯೋಜನ ಆಗುವುದಿಲ್ಲ’ ಎಂದು ಶುಕ್ರವಾರ ವಿಧಾನಸೌಧದ ಆವರಣ ಹಾಗೂ ಕೆಪಿಸಿಸಿ ಕಚೇರಿಯಲ್ಲಿ ಬಜೆಟ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಅವರು ಹೇಳಿದ್ದಿಷ್ಟು:

ಇದನ್ನೂ ಓದಿ:"ಸಿಎಂ ಬೊಮ್ಮಾಯಿ ಅವರು ಮಂಡಿಸಿರುವ ಬಜೆಟ್ ಬಿಜೆಪಿಯ ಚುನಾವಣಾ ಪ್ರಣಾಳಿಕೆಯಂತೆ ಇದೆ"

‘ದಕ್ಷಿಣ ಭಾರತದ ಹೆಬ್ಬಾಗಿಲು ತೆರೆಯುತ್ತಿದ್ದೇವೆ ಎಂದು ಅಧಿಕಾರಕ್ಕೆ ಬಂದ ಸರ್ಕಾರದ ಕೊನೆಯ ಬಜೆಟ್ ಇದಾಗಿದೆ. ಇದು ಕೇವಲ ಘೋಷಣೆ, ಭರವಸೆ ಹಾಗೂ ಭಾಷಣಕ್ಕೆ ಸೀಮಿತವಾಗಿರುವ ಬಜೆಟ್. ಸರ್ಕಾರ ಕಳೆದ ಬಜೆಟ್ ನಲ್ಲಿ ಘೋಷಿಸಿದ ಭರವಸೆಗಳ ಜಾರಿ ಬಗ್ಗೆ ಕಾಂಗ್ರೆಸ್ ಪಕ್ಷ ನಿನ್ನೆ ಪ್ರಶ್ನೆ ಮಾಡಿತ್ತು. ಕಳೆದ ಬಜೆಟ್ ನಲ್ಲಿ ಶೇ.50ರಷ್ಟು ಅನುದಾನ ಖರ್ಚು ಮಾಡಿಲ್ಲ. ಇನ್ನು ಕಳೆದ ಚುನಾವಣೆ ಸಂದರ್ಭದಲ್ಲಿ ಅವರು ಕೊಟ್ಟ 600 ಭರವಸೆಗಳ ಪೈಕಿ 550 ಭರವಸೆ ಈಡೇರಿಸಿಲ್ಲ. ಆಮೂಲಕ 90%ರಷ್ಟು ವಿಫಲವಾಗಿದ್ದಾರೆ. ಆಮೂಲಕ ಬಿಜೆಪಿ ಸರ್ಕಾರ ಜನರ ಕಿವಿಗೆ ಹೂ ಇಡುವ ಪ್ರಯತ್ನ ಮಾಡುತ್ತಿದೆ. ಹೀಗಾಗಿ ಕಾಂಗ್ರೆಸ್ ಪಕ್ಷದ ನಾಯಕರು ಕಿವಿ ಮೇಲೆ ಚೆಂಡುವ್ವ ಇಟ್ಟುಕೊಂಡು ಪ್ರತಿಭಟನೆ ಮಾಡುತ್ತಿದ್ದೇವೆ. ಈ ಬಜೆಟ್ ಗೊತ್ತು ಗುರಿ ಇಲ್ಲದ ಬಜೆಟ್ ಆಗಿದೆ. 

ಬೆಂಗಳೂರು ಅಂತಾರಾಷ್ಟ್ರೀಯ ನಗರ. ಇದರ ಅಭಿವೃದ್ಧಿಗೆ ಯಾವುದೇ ಕಾರ್ಯಯೋಜನೆ ಇಲ್ಲ. ಬೆಂಗಳೂರಿನ ರಸ್ತೆ ಗುಂಡಿಗೆ 7100 ಕೋಟಿ ವೆಚ್ಚ ಮಾಡಿದ್ದು, ಇದರಲ್ಲಿ ಯಾವ ರಸ್ತೆಗೆ ಎಷ್ಟು ಖರ್ಚು ಮಾಡಿದ್ದಾರೆ, ಎಷ್ಟು ರಸ್ತೆ ಗುಂಡಿ ಮುಕ್ತ ಮಾಡಿದ್ದಾರೆ ಎಂಬ ಯಾವುದೇ ಮಾಹಿತಿ ಇಲ್ಲ. ರಾಜ್ಯಕ್ಕೆ ಭ್ರಷ್ಟಾಚಾರದ ಕಳಂಕ ಅಂಟಿದ್ದು, ಈ ವಿಚಾರವಾಗಿ ಭ್ರಷ್ಟಾಚಾರ ನಿಗ್ರಹದ ಬಗ್ಗೆ ಯಾವುದೇ ಪ್ರಸ್ತಾಪ ಮಾಡಿಲ್ಲ. 

ಇದನ್ನೂ ಓದಿ: ಮುಜರಾಯಿ ಇಲಾಖೆಗೆ ದಾಖಲೆಯ ಅನುದಾನ : ಶಶಿಕಲಾ ಜೊಲ್ಲೆ ಹರ್ಷ

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ 200 ಯುನಿಟ್ ವಿದ್ಯುತ್ ಉಚಿತ, ಮನೆಯೊಡತಿಗೆ 2 ಸಾವಿರ ಹಣ ನೀಡದಿದ್ದರೆ ನಾವು ಮತ್ತೆ ರಾಜ್ಯದ ಜನರ ಬಳಿ ಮತ ಕೇಳಲು ಹೋಗುವುದಿಲ್ಲ. ಇದು ಕಾಂಗ್ರೆಸ್ ಜನರಿಗೆ ನೀಡುತ್ತಿರುವ ವಾಗ್ದಾನ. ರಾಜ್ಯಪಾಲರ ಭಾಷಣದಲ್ಲಿ ವಿದ್ಯುತ್ ಮಾರಿ 3 ಸಾವಿರ ಕೋಟಿ ಆದಾಯ ಮಾಡುತ್ತಿರುವುದಾಗಿ ಹೇಳಿದ್ದಾರೆ. ಇದು ಸಾಧ್ಯವಾಗಿದ್ದು ನಾನು ಇಂಧನ ಸಚಿವನಾಗಿದ್ದಾಗ ಮಾಡಿದ ಕೆಲಸದಿಂದ. ನಾನು ಇಂಧನಸಚಿವನಾದಾಗ ರಾಜ್ಯದಲ್ಲಿ ವಿದ್ಯುತ್ ಕೊರತೆ ಇತ್ತು. ನಂತರ ಅಧಿಕಾರದಿಂದ ಕಳಗಿಳಿಯುವ ಹೊತ್ತಿಗೆ ರಾಜ್ಯದ ಬೇಡಿಕೆಗಿಂತ ಹೆಚ್ಚಿನ ಪ್ರಮಾಣದ ವಿದ್ಯುತ್ ಉತ್ಪಾದನೆ ಮಾಡಲಾಯಿತು. ಇದೆಲ್ಲವೂ ಕಾಂಗ್ರೆಸ್ ಪಕ್ಷದ ಕಾರ್ಯಗಳು. 

ಈ ಡಬಲ್ ಇಂಜಿನ್ ಸರ್ಕಾರ ಇದುವರೆಗೂ ಕೆಲಸ ಮಾಡಿಲ್ಲ, ಮುಂದೆಯೂ ಕೆಲಸ ಮಾಡಿಲ್ಲ. ಬಿಜೆಪಿ ಸರ್ಕಾರ ಈ ಹಿಂದೆ ಘೋಷಿಸಿದ ಯಾವುದೇ ಕಾರ್ಯಕ್ರಮ ಜಾರಿ ಮಾಡಿಲ್ಲ. ಈಗ ರಾಮನಗರದಲ್ಲಿ ರಾಮಮಂದಿರ ಕಟ್ಟಲು ಮುಂದಾಗಿದ್ದಾರೆ. ಅವರು ರಾಮನ ಮಂದಿರ ಆದರೂ ಕಟ್ಟಲಿ, ಸೀತೆ ಮಂದಿರವಾದರೂ ಕಟ್ಟಲಿ, ಅಶ್ವತ್ಥ್ ನಾರಾಯಣ ಮಂದಿರವಾದರೂ ಕಟ್ಟಲಿ, ಬೊಮ್ಮಾಯಿ ಮಂದಿರವಾದರೂ ಕಟ್ಟಲಿ. ಯಡಿಯೂರಪ್ಪನವರ ಮಂದಿರವಾದರೂ ಕಟ್ಟಲಿ. ನನಗೆ ಪಕ್ಷದ ಕಚೇರಿಯೇ ದೇವಾಲಯ.

ಇದನ್ನೂ ಓದಿ:Karnataka Budget 2023 : ರಾಜ್ಯದ ಜನತೆಗೆ ಭವಿಷ್ಯದ ಭರವಸೆ ನೀಡಿದ ಬಜೆಟ್‌ - ಸಚಿವ ಡಾ.ಕೆ.ಸುಧಾಕರ್‌

ಮಹಿಳೆಯರಿಗೆ ನಾವು 2 ಸಾವಿರ ಪ್ರೋತ್ಸಾಹ ಧನ ನೀಡುವುದಾಗಿ ಹೇಳಿದ್ದೆವು. ಆದರೆ ಸರ್ಕಾರ ಈಗ ಬಿಪಿಎಲ್ ಕುಟುಂಬದ ಮಹಿಳೆಯರಿಗೆ 500 ರೂ ನೀಡುವುದಾಗಿ ಹೇಳಿದ್ದಾರೆ. ಇದರಿಂದ ಏನು ಸಹಾಯವಾಗುತ್ತದೆ? ಬೆಲೆ ಏರಿಕೆ ಹೆಚ್ಚಾಗಿದ್ದು, ಈ ಸರ್ಕಾರ ಯಾರಿಗಾಗರೂ ಪರಿಹಾರ ನೀಡಿದ್ದಾರಾ? ಪೆಟ್ರೋಲ್ ಹಾಗೂ ಡೀಸೆಲ್ ತೆರಿಗೆ ಮೂಲಕ ಲಕ್ಷಾಂತರ ಕೋಟಿ ಹಣ ಸಂಗ್ರಹಿಸಿದ್ದು, ಮತ್ತೆ ಅದು ಜನರಿಗೆ ನೀಡುತ್ತಿಲ್ಲ. ಜಿಎಸ್ಟಿ ಮೂಲಕ ಸಾವಿರಾರು ಕೋಟಿ ಸಂಗ್ರಹಿಸಿದ್ದು ಆ ಹಣವನ್ನು ರಾಜ್ಯಕ್ಕೆ ಸಮರ್ಪಕವಾಗಿ ಅನುದಾನ ನೀಡುತ್ತಿಲ್ಲ. 

ತಮ್ಮ ಶಾಸಕರ ಕ್ಷೇತ್ರಗಳಲ್ಲಿ ಅನುಕೂಲವಾಗುವಂತೆ ಕೆಲವು ಘೋಷಣೆ ಮಾಡಿದ್ದಾರೆ. ನಿರಾವರಿ ಕ್ಷೇತ್ರದಲ್ಲಿ ಏನು ಮಾಡಿದ್ದಾರೆ? ಕಳೆದ ಬಜೆಟ್ ನಲ್ಲಿ ಮೇಕೆದಾಟು, ಮಹದಾಯಿ, ಕೃಷ್ಣ ಯೋಜನೆ ವಿಚಾರವಾಗಿ ಹಣ ಮೀಸಲಿಟ್ಟ ಸರ್ಕಾರ ಒಂದು ನಯಾ ಪೈಸೆ ಖರ್ಚು ಮಾಡಿಲ್ಲ. ಮಾತೆತ್ತಿದರೆ ಡಬಲ್ ಇಂಜಿನ್ ಸರ್ಕಾರ ಎನ್ನುತ್ತಾರೆ. ಆದರೆ ಈ ಸರ್ಕಾರದ ಇಂಜಿನ್ ಆಪ್ ಆಗಿದೆ. ಕೇವಲ ಹೊಗೆ ಮಾತ್ರ ಬರುತ್ತಿದೆ. ಬೊಮ್ಮಾಯಿ ಅವರು ಈ ಬಜೆಟ್ ಪ್ರತಿಯನ್ನು ತಮ್ಮ ಮನೆ ಶೋಕೇಸ್ ನಲ್ಲಿ ಇಟ್ಟುಕೊಳ್ಳಬಹುದಷ್ಟೆ.’

ಇದನ್ನೂ ಓದಿ:ಇದು ಬಿಜೆಪಿ ಸರ್ಕಾರದ ನಿರ್ಗಮನದ ಬಜೆಟ್: ಸಿದ್ದರಾಮಯ್ಯ

ಪ್ರಶ್ನೋತ್ತರ : ಈ ಬಜೆಟ್ ನಿಂದ ಕಾಂಗ್ರೆಸ್ ಪ್ರಣಾಳಿಕೆಗೆ ಧಕ್ಕೆಯಾಗುತ್ತದೆಯೇ ಎಂದು ಕೇಳಿದ ಪ್ರಶ್ನೆಗೆ, ‘ಈ ಬಜೆಟ್ ನಿಂದ ಕಾಂಗ್ರೆಸ್ ಪ್ರಣಾಳಿಕೆಗೆ ಶಕ್ತಿ ಬಂದಿದೆ. ನಮ್ಮ ಪ್ರಣಾಳಿಕೆ ಜನರಿಗೆ ಆರ್ಥಿಕ ಶಕ್ತಿ ತುಂಬುತ್ತದೆ. ಇವರು ಮಹಿಳೆಯರಿಗೆ 500 ನೀಡುತ್ತಾರಂತೆ, ಅದರಿಂದ ಅವರಿಗೆ ಏನು ಪ್ರಯೋಜನ ಸಿಗುತ್ತದೆ? ನಾವು ಜಿಎಸ್ ಟಿ, ಅಡುಗೆ ಅನಿಲ, ಅಗತ್ಯ ವಸ್ತುಗಳ ಖರೀದಿಗೆ ನೆರವಾಗುವಂತೆ ಪ್ರತಿ ತಿಂಗಳು 2 ಸಾವಿರ ನೀಡಲು ಮುಂದಾಗಿದ್ದೇವೆ’ ಎಂದರು.

ರಾಮನಗರದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಹಣ ನೀಡಿರುವ ಬಗ್ಗೆ ಕೇಳಿದಾಗ, ‘ರಾಮನಗರದ ಬೆಟ್ಟದಲ್ಲಿ ಸಣ್ಣ ರಾಮಮಂದಿರ ಇದೆ. ಇವರು ಯಾವ ದೇವಸ್ಥಾನ ಕಟ್ಟುತ್ತಾರೋ. ರಾಮನಗರದಲ್ಲಿ ಅವರು ಪಕ್ಷದ ಕಚೇರಿ ಕಟ್ಟಲಿ. ರಾಮನ ಭಂಟ ಆಂಜನೇಯ, ಕೆಂಗಲ್ ನಲ್ಲಿ ಹನುಮಂತಯ್ಯನವರು ಹಿಂದೆಯೇ ಆಂಜನೇಯನ ದೇವಾಲಯ ಕಟ್ಟಿದ್ದಾರೆ. ಈ ಗಂಡು ಕಸ ಗುಡಿಸಿ ಜಿಲ್ಲೆ ಕ್ಲೀನ್ ಮಾಡುತ್ತೇನೆ ಎಂದಿದ್ದ. ಏನು ಕ್ಲೀನ್ ಮಾಡಿದ್ದಾನೆ? ಅರ್ಕಾವತಿ ನದಿಯಲ್ಲಿ ಹೋಗುತ್ತಿರುವ ಕೊಳಚೆ ನೀರು ಸ್ವಚ್ಛ ಮಾಡಿದ್ದಾರಾ? ಯಾವುದಾದರೂ ಒಂದು ಭ್ರಷ್ಟಾಚಾರ ನಿಲ್ಲಿಸಿದ್ದಾರಾ? ನಿನ್ನೆ ನಮ್ಮ ನಾಯಕ ಸಿದ್ದರಾಮಯ್ಯ ಅವರನ್ನು ಹೊಡೆದು ಹಾಕಿ ಎಂದು ಹೇಳಿಕೆ ನೀಡಿದ್ದಾನೆ. ಕೌಶಲಾಭಿವೃದ್ಧಿ ಇಲಾಖೆಯಲ್ಲಿ ಏನೆಲ್ಲಾ ಆಗಿದೆ ಎಂದು ಮುಂದೆ ಮಾತನಾಡುತ್ತಾನೆ. ಇವರ ಇಲಾಖೆಯಲ್ಲಿ ಭ್ರಷ್ಟಾಚಾರದ ಬಗ್ಗೆ ಸಂಸದ ಪ್ರತಾಪ್ ಸಿಂಹ ಮಾತನಾಡಿದ್ದಾರೆ’ ಎಂದು ಹರಿಹಾಯ್ದರು.

ಇದನ್ನೂ ಓದಿ:Karnataka Budget 2023: ರಾಜ್ಯ ಬಜೆಟ್ 2023-24: ಜಮೆ -ವೆಚ್ಚ ಪೈಸೆ ಲೆಕ್ಕದಲ್ಲಿ ಆಯವ್ಯಯ ಅವಲೋಕನ

ಈ ಬಜೆಟ್ ಜಾರಿ ಮೇಲೆ ನಿರೀಕ್ಷೆ ಇಲ್ಲವೇ ಎಂದು ಕೇಳಿದಾಗ, ‘ಇದು ಬಿಜೆಪಿ ಸರ್ಕಾರದ ಬೈ ಬೈ ಬಜೆಟ್, ಶೋಕೇಸ್ ಬಜೆಟ್, ಇದರಿಂದ ಯಾವುದೇ ಪ್ರಯೋಜನವಿಲ್ಲ. ಒಂದು ಕಾರ್ಯಕ್ರಮವೂ ಜಾರಿ ಆಗುವುದಿಲ್ಲ. ಕಳೆದ ವರ್ಷ 2.50 ಲಕ್ಷ ಕೋಟಿ ಬಜೆಟ್ ನಲ್ಲಿ ಎಷ್ಟು ಖರ್ಚಾಗಿದೆ ಎಂದು ಲೆಕ್ಕ ನೀಡಲಿ’. 

ಸಾಲದ ಬಗ್ಗೆ ಕೇಳಿದಾಗ, ‘ಇವರು ಆದಾಯ ಬರುವಂತಹ ಯಾವುದೇ ಕಾರ್ಯಕ್ರಮ ರೂಪಿಸಿಲ್ಲ. ಕೇವಲ ಸಾಲ ಮಾಡುವುದರಲ್ಲೇ ಕಾಲ ಕಳೆಯುತ್ತಿದ್ದಾರೆ. ಈ ಸರ್ಕಾರ ಬಜೆಟ್ ನಲ್ಲಿ ಎರಡನೇ ಹಂತದ ನಗರಗಳಿಗೆ ಯಾವ ಕಾರ್ಯಕ್ರಮ ನೀಡಿದ್ದಾರೆ? ಶಿವಮೊಗ್ಗದಲ್ಲಿ ಯಾರಾದರೂ ಒಬ್ಬ ಬಂಡವಾಳ ಹೂಡಿಕೆ ಮಾಡಿದ್ದಾನಾ? 10 ಲಕ್ಷ ಕೋಟಿ ಬಂಡವಾಳ ಹೂಡಿಕೆ ಇದೆ ಎಂದಿದ್ದಾರೆ. ಎಲ್ಲಿದೆ? ಅಲ್ಲಿ ಆಯನೂರು ಮಂಜುನಾಥ್ ಅವರು ಏನು ಹೇಳುತ್ತಿದ್ದಾರೆ ಎಂಬುದು ಈ ಸರ್ಕಾರದ ದುರಾಡಳಿತಕ್ಕೆ ಹಿಡಿದ ಕೈಗನ್ನಡಿ’.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News