2022ರ ಟಿ 20 ವಿಶ್ವಕಪ್ನ ಪಾಕಿಸ್ತಾನ ಜೊತೆಗಿನ ಪಂದ್ಯವನ್ನು ಯಾರು ತಾನೇ ಮರೆಯೇಕೆ ಸಾಧ್ಯ ಹೇಳಿ... ಇನ್ನೇನು ಈ ಪಂದ್ಯ ಸೋತು ಬಿಟ್ವಿ ಅಂತ ಎಲ್ಲರೂ ಅಂದುಕೊಂಡಿದ್ರು. ಆದ್ರೆ ಕಷ್ಟಸಾಧ್ಯವಾದ ಆ ಪಂದ್ಯದಲ್ಲಿ ಟೀಂ ಇಂಡಿಯಾ ಗೆದ್ದು ಬೀಗಿತ್ತು. ಆ ಪಂದ್ಯ ಗೆಲ್ಲಲ್ಲು ಏಕೈಕ ಕಾರಣ ಆಗಿದ್ದು ಚೇಸಿಂಗ್ ಮಾಸ್ಟರ್, ರನ್ ಮಷಿನ್ ವಿರಾಟ್ ಕೊಹ್ಲಿ....ಎದುರಾಳಿಯ ಎದೆಯಲ್ಲಿ ನಡುಕ ಹುಟ್ಟಿಸಿ ಅಸಾಧ್ಯ ಎನ್ನುವ ಪಂದ್ಯದಲ್ಲಿ 130 ಕೋಟಿ ಜನರ ಮುಖದಲ್ಲಿ ಗೆಲುವಿನ ನಗು ಮೂಡಿಸಿದ್ದು ವಿರಾಟ್ ಕೊಹ್ಲಿ.
ಭಾರತದಲ್ಲಿ ವಿರಾಟ್ ಕೊಹ್ಲಿ ಅನ್ನೋ ಈ ಹೆಸರು ಕೇಳದೆ ಇರೋರು ಇಲ್ಲ ಅನಿಸುತ್ತೆ. ಭಾರತ ಅಷ್ಟೇ ಅಲ್ಲ ಕ್ರಿಕಟ್ ಪರಿಚಯ ಇರುವ ಪ್ರತಿಯೊಂದು ದೇಶದಲ್ಲಿ ವಿರಾಟ್ ಹೆಸರು ಖಂಡಿತ ಗೊತ್ತಿರುತ್ತೆ. ಟೀಂ ಇಂಡಿಯಾ ಕಂಡ ಶ್ರೇಷ್ಠ ಆಟಗಾರರ ಪೈಕಿ ವಿರಾಟ್ ಕೊಹ್ಲಿ ಕೂಡ ಒಬ್ಬರು. ಏಕದಿನ, ಟೆಸ್ಟ್, ಟಿ 20 ಯಲ್ಲಿ ದಾಖಲೆಗಳ ಮೇಲೆ ದಾಖಲೆ ಮಾಡಿರುವ ಈ ರನ್ ಮಿಷನ್ ಇಂದಿಗೂ ತಂಡದ ಪ್ರಮುಖ ಆಟಗಾರ. ಒಬ್ಬ ಆಟಗಾರನಾಗಿ, ತಂಡದ ನಾಯಕನಾಗಿ, ಕ್ರೀಡಾ ಪ್ರೇಮಿಯಾಗಿ ಇವರನ್ನು ಪ್ರತಿಯೊಬ್ಬ ಕ್ರಿಕಟ್ ಪ್ರೇಮಿ ಗೌರವದಿಂದ ನೋಡ್ತಾರೆ. ಅದರಲ್ಲೂ ನಮ್ಮ ರಾಜ್ಯದ ಜನರ ಮನಸ್ಸಿಗೆ ಹತ್ತಿರವಾಗುವಂತೆ RCB ತಂಡದಲ್ಲಿ ಕಾಣಿಸಿಕೊಳ್ಳುವ ಇವರು ಕರುನಾಡಿನ ಮನೆಮಗನಾಗಿ ಗುರುತಿಸಿಕೊಂಡಿದ್ದಾರೆ. ಕ್ರಿಕೆಟ್ ಜೀವನದ ಸಾಕಷ್ಟು ಏಳುಬೀಳುಗಳ ನಡುವೆ ಕಿಂಗ್ ಆಗಿ ಮೆರೆದ ಕೊಹ್ಲಿ ಇಂದುಗೂ ಯಂಗ್ ಜನರೇಷನ್ನ ಹಾಟ್ ಪೇವರೇಟ್ ಆಟಗಾರನಾಗಿದ್ದಾರೆ.
ಇದನ್ನೂ ಓದಿ: ನಗ್ನ ವಿಡಿಯೋ ಕಾಲ್ ಬಲೆಗೆ ಬಿದ್ದು 2.69 ಕೋಟಿ ರೂ.ಕಳೆದುಕೊಂಡ ಉದ್ಯಮಿ..!
ಒಂದೊಮ್ಮೆ ಸಚಿನ್ ದಾಖಲೆ ಮುರಿಯಲು ಯಾರಿಗೂ ಸಾಧ್ಯವೇ ಇಲ್ಲ ಅಂತ ಕೆಲವರು ಮಾತನಾಡುತ್ತಿದ್ರು... ಕ್ರಿಕೆಟ್ ದೇವರು ಸೃಷ್ಟಿಸಿದ 100 ಶತಕಗಳ ಗಡಿ ಅಂಚಿಗೂ ಬರಲು ಕ್ರಿಡಾ ದಿಗ್ಗಜರಿಗೆ ಸಾಧ್ಯವಾಗಿಲ್ಲ. ಆದ್ರೆ ಈ ರಿಕಾರ್ಡ್ ಯಾರು ಮುರಿತಾರೆ ಅಂತ ಸ್ವತಹ ಸಚಿನ್ಗೆ ಕೇಳಿದಾಗ ಅವರು ಹೇಳಿದ್ದು ವಿರಾಟ್ ಕೊಹ್ಲಿ, ಹಾಗೂ ರೋಹಿತ್ ಶರ್ಮಾ ಹೆಸರು. ಕ್ರಿಕೆಟ್ ದೇವರ ಆಶೀರ್ವಾದ ಜೊತೆಗೆ ಗುರಿ ಬೆನ್ನತ್ತಿದ್ದ ಕೊಹ್ಲಿ ಈಗಾಗಲೇ 73 ಶತಕಗಳನ್ನು ಸಿಡಿಸಿದ್ದಾರೆ. ಈ ಮೂಲಕ ಸಚಿನ ದಾಖಲೆ ಮುರಿಯುವ ಭರವಸೆ ಮೂಡಿಸಿದ್ದಾರೆ . ವಿರಾಟ್ ಕೊಹ್ಲಿ ಅಂತರಾಷ್ಟ್ರಿಯ ಕ್ರಿಕಟ್ ಅಂಗಳದಲ್ಲಿ ಮಾಡಿದ ಸಾಧನೆ ಏನು ಅನ್ನೋದು ನೋಡುವದಾದ್ರೆ... 2023ರ ಶ್ರೀಲಂಕಾ ಏಕದಿನ ಸರಣಿ ಅಂತ್ಯಕ್ಕೆ ಕೊಹ್ಲಿ 73 ಶತಕಗಳನ್ನು ಸಿಡಿಸಿದ್ದಾರೆ. 267 ಏಕದಿನ ಪಂದ್ಯ ಆಡಿರುವ ಕೊಹ್ಲಿ 12588 ರನ್ ಗಳಿಸಿದ್ದಾರೆ. ಇದರಲ್ಲಿ ಒಟ್ಟು 45 ಶತಕ ಹಾಗೂ 64 ಅರ್ಧಶತಕ ಸಿಡಿಸಿದ್ದಾರೆ. ಇನ್ನೂ 104 ಟೆಸ್ಟ್ ಪಂದ್ಯಗಳನ್ನು ಆಡಿರುವ ಕಿಂಗ್ ಕೊಹ್ಲಿ 8119 ರನ್ ಗಳಿಸಿದ್ದಾರೆ. 254 ಇವರ ವಯಕ್ತಿಕ ಅತಿ ಹೆಚ್ಚು ರನ್ ಆಗಿದ್ದು, 27 ಶತಕ ಹಾಗೂ 28 ಅರ್ಧಶತಕ ಬಾರಿಸಿದ್ದಾರೆ. ಇನ್ನೂ ಟಿ20 ಕ್ಷೇತ್ರಕ್ಕೆ ಬಂದ್ರೆ 115 ಪಂದ್ಯಗಳನ್ನು ಆಡಿರುವ ಕೊಹ್ಲಿ 4008 ರನ್ ಗಳಿಸಿದ್ದಾರೆ. 52.73 ಸರಾಸರಿಯಲ್ಲಿ ಬ್ಯಾಟ್ ಬೀಸಿರುವ ಕೊಹ್ಲಿ, 137.96 ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿದ್ದಾರೆ. ಟಿ20 ಯಲ್ಲಿ 1 ಶತಕ ಹಾಗೂ 37 ಅರ್ಧಶತಕ ಗಳಿಸಿದ ದಾಖಲೆ ಮಾಡಿದ್ದಾರೆ
ವಿರಾಟ್ ಕೊಹ್ಲಿ ನವೆಂಬರ್ 5,1989 ರಂದು ದೆಹಲಿಯಲ್ಲಿ ಪಂಜಾಬಿ ಕುಟುಂಬದಲ್ಲಿ ಜನಿಸಿದರು. ಅವರ ತಂದೆಯ ಹೆಸರು ಪ್ರೇಮ್ ಕೊಹ್ಲಿ, ಕ್ರಿಮಿನಲ್ ವಕೀಲ. ಅವರ ತಾಯಿಯ ಹೆಸರು ಸರೋಜ್ ಕೊಹ್ಲಿ. ಕೊಗ್ಲಿಗೆ ಒರ್ವ ಸಹೋದರ ಹಾಗೂ ಸಹೋದರಿ ಇದ್ದಾರೆ. ಬಾಲ್ಯದಿಂದಲೂ ಕೊಹ್ಲಿ ಬಗ್ಗೆ ಅಪಾರ ನಂಬಿಕೆ ಇಟ್ಟಿದ್ದ ತಂದೆ ಪ್ರೇಮ್ ಕೊಹ್ಲಿ, ಕ್ರಿಕೆಟ್ ಬಗ್ಗೆ ಕೊಹ್ಲಿಗೆ ಆಸಕ್ತಿ ಬೆಳೆಯುವ ಹಾಗೆ ಮಾಡಿದ್ರು. ಅಲ್ಲಿಂದಲೇ ಕ್ರಿಕೆಟ್ ಅಂದ್ರೆ ಕೊಹ್ಲಿಗೆ ಅಚ್ಚುಮೆಚ್ಚು ಕ್ರೀಡೆಯಾಗಿತ್ತು. ಬಾಲ್ಯದಿಂದಲೇ ಕಿಂಗ್ ಕೊಹ್ಲಿ ಕ್ರಿಕಟ್ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿದ್ರು. 3 ವರ್ಷದ ಮಗುವಾಗಿದ್ದಾಗಲೇ ಮಕ್ಕಳ ಆಟಿಕೆಗಳಿಗಿಂತ ಕ್ರಿಕೆಟ್ ಆಟಕ್ಕೆ ಹೆಚ್ಚಿನ ಆಸಕ್ತಿ ವಹಿಸುತ್ತಿದ್ರಂತೆ. ಮುಂದೆ ಶಾಲಾ ದಿನಗಳಲ್ಲಿ ತಂದೆಯ ಮಾರ್ಗದರ್ಶನವೇ ಕೊಹ್ಲಿ ಕ್ರಿಕೆಟ್ ಆಟಗಾರನಾಗಲು ಕಾರಣವಾಗಿತ್ತು. ದೆಹಲಿಯ ವಿಶಾಲ್ ಭಾರತಿ ಪಬ್ಲಿಕ್ ಸ್ಕೂಲ್ನಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣ ಆರಂಬಿಸಿದ ಕೊಹ್ಲಿ ಶಾಲೆಯಲ್ಲಿ ಸಾಧಾರಣ ವಿದ್ಯಾರ್ಥಿಯಾಗಿ ಕಾಣಿಸಿಕೊಂಡಿದ್ರು. ಪ್ರಾಥಮಿಕ ಶಿಕ್ಷಣ ನಡೆಯುತ್ತಿದ್ದ ಈ ಶಾಲೆಯಲ್ಲಿ, ಶಿಕ್ಷಣಕ್ಕೆ ಮಾತ್ರ ಗಮನ ನೀಡಲಾಯಿತು, ಯಾವುದೇ ಕ್ರೀಡಾ ತರಬೇತಿಯನ್ನು ನೀಡಲಾಗಲಿಲ್ಲ. ಆದ್ರೆ ಕೊಹ್ಲಿ ಗಮನ ಮಾತ್ರ ಕ್ರಿಕೆಟ್ ಮೇಲೆ ಇತ್ತು, ಈ ಕಾರಣದಿಂದಾಗಿ ಕೊಹ್ಲಿ ಶಾಲೆಯನ್ನು ಬದಲಾಯಿಸಲು ಪ್ರೇಮ್ ಕೊಹ್ಲಿ ಯೋಚಿಸಿದರು. ಶಿಕ್ಷಣ ಮತ್ತು ಕ್ರೀಡೆಗಳೆರಡನ್ನೂ ಗಮನದಲ್ಲಿಟ್ಟುಕೊಂಡ ಶಾಲೆಗೆ ಸೇರಿಸಿದರು ಮತ್ತು 9 ನೇ ತರಗತಿಯಿಂದ ಅವರು ದೆಹಲಿಯ ಪಶ್ಚಿಮ ವಿಹಾರದ ಸಂರಕ್ಷಕ ಕಾನ್ವೆಂಟ್ ಹಿರಿಯ ಮಾಧ್ಯಮಿಕ ಶಾಲೆಯಲ್ಲಿ ಪ್ರವೇಶ ಪಡೆದರು. ಜೊತೆಗೆ ಎಂಟು-ಒಂಬತ್ತನೆಯ ವಯಸ್ಸಿನಲ್ಲಿ ಕ್ರಿಕೆಟ್ ಕ್ಲಬ್ಗೆ ತರಬೇತಿಗಾಗಿ ದಾಖಲಿಸಿದರು, ಇದರಿಂದ ಅವರು ಸರಿಯಾಗಿ ಕ್ರಿಕೆಟ್ ಕಲಿಯಲು ಸಾಧ್ಯವಾಯಿತು. ಕ್ರೀಡೆಯಲ್ಲಿನ ಆಸಕ್ತಿಯಿಂದಾಗಿ, ಅವರು 12 ನೇ ತರಗತಿಯವರೆಗೆ ಮಾತ್ರ ಶಿಕ್ಷಣವನ್ನು ಪಡೆದರು. ದೆಹಲಿ ಕ್ರಿಕೆಟ್ ಅಕಾಡೆಮಿಯಲ್ಲಿ ರಾಜ್ ಕುಮಾರ್ ಶರ್ಮಾ ಅವರಿಂದ ಕ್ರಿಕೆಟ್ ತರಬೇತಿ ಪಡೆದುಕೊಂಡರು.
ಇದನ್ನೂ ಓದಿ: ಪ್ರಧಾನಿ ರೋಡ್ ಶೋ ವೇಳೆ ಭದ್ರತಾ ಲೋಪ : ಗೇಟ್ ಹಾರಿ ಮೋದಿ ಕಡೆ ಬಂದ ವ್ಯಕ್ತಿ - ವಿಡಿಯೋ ನೋಡಿ
ಮೊದಲಿಗೆ ಅಂಡರ್ 15 ಪಂದ್ಯದಲ್ಲಿ ಕಣಕ್ಕಿಳಿದ ಕೊಹ್ಲಿ ದೆಹಲಿ ಪರವಾಗಿ ಪಾಲಿ ಉರ್ಮಗಲ್ ಟ್ರೋಪಿಯಲ್ಲಿ ಭಾಗಿಯಾಗಿದ್ದರು. ನಂತರ ಅಂಡರ್ 17ನಲ್ಲೂ ದೆಹಲಿ ಪರವಾಗಿ ಆಡಿ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಹಳಿಸಿದ ಆಟಗಾರ ಎನಿಸಿಕೊಳ್ಳುತ್ತಾರೆ. 2006ರಲ್ಲಿ ತಮಿಳುನಾಡು ವಿರುದ್ಧ ಪಸ್ಟ್ ಕ್ಲಾಸ್ ಪಂದ್ಯದಲ್ಲಿ ಕಾಣಿಸಿಕೊಂಡರು. ಅದೇ ಟೂರ್ನಿಯ ಕರ್ನಾಟಕದ ಜೊತೆಗಿನ ಪಂದ್ಯ ನಡೆಯುವ ವೇಳೆ ಇವರ ತಂದೆ ಹೃದಯಾಘಾತದಿಂದ ಸಾವನ್ನಪ್ಪುತ್ತಾರೆ. ಆದ್ರೂ ಕೂಡ ಆ ಪ್ರಮುಖ ಪಂದ್ಯದಲ್ಲಿ ಬ್ಯಾಟಿಂಗ್ ಮಾಡಿದ ಕೊಹ್ಲಿ 90 ರನ್ ಗಳಿಸಿ ತಂಡಕ್ಕೆ ಆಸರೆಯಾಗಿದ್ರು. ಪಂದ್ಯದ ನಂತರ ತಂದೆಯ ಅಂತ್ಯಸಂಸ್ಕಾರಕ್ಕೆ ಹೋಗಿದ್ದು ಕ್ರಿಕೆಟ್ ಲೋಕದಲ್ಲಿ ದೊಡ್ಡ ಸುದ್ದಿಯಾಗಿತ್ತು. ನಂತರ ಇಂಗ್ಲೆಂಡ್ ವಿರುದ್ಧ ಸರಣಿಗೆ ಅಂಡರ್ 19 ತಂಡದಲ್ಲಿ ಕಾಣಿಸಿಕೊಂಡಿದ್ದ ಕೊಹ್ಲಿ, ಈ ಸರಣಿಯಲ್ಲಿ ಅದ್ಭುತ ಬ್ಯಾಂಟಿಂಗ್ ಪ್ರದರ್ಶಿಸಿ 105ರ ಸರಾಸರಿಯಲ್ಲಿ ರನ್ ಕಲೆಹಾಕ್ತಾರೆ. ಆಡಿರುವ ಮೂರು ಪಂದ್ಯಗಲ್ಲೂ ಭರ್ಜರಿ ಬ್ಯಾಟಿಂಗ್ ಮಾಡಿ ತಂಡ ಗೆಲ್ಲುವಂತೆ ಮಾಡಿದ್ರು. ನಂತರ 2008 ರಲ್ಲಿ ಮಲೆಸಿಯಾದಲ್ಲಿ ನಡೆದ ಅಂಡರ್ 19 ವಿಶ್ವಕಪ್ ಅವರ ಜೀವನಕ್ಕೆ ಹೊಸ ದಿಕ್ಕು ತೋರಸಿತು. ಟೀಂ ಇಂಡಿಯಾ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದಲ್ಲದೆ ತಮ್ಮ ಉತ್ತಮ ಬ್ಯಾಟಿಂಗ್ ನೆರವಿನಿಂದ ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ರು. ಇದರೊಂದಿಗೆ ಭಾರತೀಯ ಕ್ರಿಕೆಟ್ ತಂಡದ ಆಯ್ಕೆಗಾರರರ ಜೊತೆಗೆ ಕ್ರಿಕೆಟ್ ಪ್ರೇಮಿಗಳ ಮನಸ್ಸು ಗೆದ್ದಿದ್ರು ವಿರಾಟ್.
ಇದನ್ನೂ ಓದಿ : VD12 : ವಿಜಯ್ ದೇವರಕೊಂಡ ನ್ಯೂ ಫಿಲ್ಮ್ ಅನೌನ್ಸ್..! ಕ್ಯೂರಿಯಾಸಿಟಿ ಹುಟ್ಟಿಸಿದ ಪೋಸ್ಟರ್
ಕೇವಲ ಹತ್ತೊಂಬತ್ತನೆಯ ವಯಸ್ಸಿನಲ್ಲಿ ಕಿಂಗ್ ಕೊಹ್ಲಿ ಮೊದಲ ಅಂತರಾಷ್ಟ್ರಿಯ ಪಂದ್ಯವನ್ನು ಶ್ರೀಲಂಕಾ ವಿರುದ್ಧ ಆಡಿದರು. ಈ ಸರಣಿಯಲ್ಲಿ ಒಂದು ಅರ್ಧಶತಕ ಕೂಡ ಬಾರಿಸಿದ್ರು. ಆದ್ರೆ ಅದರ ನಂತರದ ಸರಣಿಗಳಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗಿ ತಂಡದಿಂದ ಹೊರೆಗುಳಿಯುವ ಆತಂಕದಲ್ಲಿದ್ದರು. ಈ ವೇಳೆ ಆಸ್ಟ್ರೇಲಿಯಾ ಸರಣಿಯಲ್ಲಿ ಇವರಿಗೆ ಮತ್ತೆ ಅವಕಾಶ ನೀಡಿದ್ದು ಕೂಲ್ ಕ್ಯಾಪ್ಟನ್ ದೋನಿ. ಆ ಸರಣಿಯ ಮೊದಲ ಪಂದ್ಯದಲ್ಲೇ ಅಮೋಘ ಶತಕ ಗಳಿಸಿದ ವಿರಾಟ್ ಕೊಹ್ಲಿ ಅದ್ಭುತ ಆಟ ಪ್ರದರ್ಶಿಸಿದ್ದರು. ಅಲ್ಲಿಂದ ಶುರುವಾಗಿದ್ದು ವಿರಾಟ್ರೂಪ. ಪ್ರತಿ ಸಲವೂ ಕ್ರಿಕೆಟ್ ಅಂಗಳಕ್ಕೆ ಇಳಿದಾಗ ಹೊಸ ದಾಖಲೆ ಮಾಡುತ್ತಿದ್ದ ಕೊಹ್ಲಿ ಹೊಡಿಬಡಿ ಆಟದ ಮೂಲಕ ಎಲ್ಲರ ಮನಸ್ಸು ಗೆದ್ದಿದ್ದಾರೆ. 2008ರಲ್ಲಿ ಏಕದಿನ ಪಂದ್ಯಕ್ಕೆ ಕಾಲಿಟ್ಟಿದ್ದ ಕೊಹ್ಲಿ ಅದಾದ ಮೂರು ವರ್ಷಗಳ ಬಳಿಕ ಅಂದ್ರೆ 2011 ರಲ್ಲಿ ಟೆಸ್ಟ್ ಕ್ರಿಕೆಟ್ಗೆ ಪಾದಾರ್ಪನೆ ಮಾಡಿದ್ರು.
ವಿರಾಟ್ ಎಂದಿಗೂ ಪಿಟ್ನೆಸ್ ಸಮಸ್ಯೆಯಿಂದ ಬಳಲಿದ ಆಟಗಾರ ಅಲ್ಲ. ಕ್ರಿಕೆಟ್ನಲ್ಲಿ ಇಷ್ಟೊಂದು ದಾಖಲೆ ಮಾಡಲು ಅವರ ಪಿಟ್ನೆಸ್ ಕೂಡ ಪ್ರಮುಖ ಕಾರಣ. ಜಿಮ್ನಲ್ಲಿ ಹೆಚ್ಚಿನ ಸಮಯ ಕಳೆಯುವ ಕೊಹ್ಲಿ ಸದೃಡ ದೇಹವನ್ನು ಇಟ್ಟುಕೊಂಡಿದ್ದಾರೆ. ಜೊತೆ ಆಹಾರ ಸೇವನೆಯಲ್ಲೂ ಕೂಡ ಸಾಕಷ್ಟು ಚ್ಯೂಸಿ ಆಗಿರುವ ಅವರು, ಪಿಟ್ನೆಸ್ಗೆ ಅನುಕೂಲವಾಗಬಲ್ಲ ಆಹಾರ ಸೇವನೆ ಮಾತ್ರ ಮಾಡ್ತಾರೆ. ಇದು ಕೊಹ್ಲಿ ಇನ್ನಷ್ಟು ಪಿಟ್ ಆಗಿರಲು ಕಾರಣವಾಗಿದೆ. ಇನ್ನೂ ಮೈಮೇಲೆ ಟ್ಯಾಟು ಹಾಕಿಸಿಕೊಂಡ ಕೆಲವೇ ಭಾರತೀಯ ಆಟಗಾರರಲ್ಲಿ ಕೊಹ್ಲಿ ಕೂಡ ಒಬ್ಬರು. ಚಿಕ್ಕವಯಸ್ಸಿನಲ್ಲಿ ಟ್ಯಾಟೋ ಹಾಕಿಸಿಕೊಂಡು ಆಟದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಕಾರಣ ಅಲ್ಲಿಂದ ಈ ಹವ್ಯಾಸ ಇಲ್ಲಿಯವರೆಗೂ ಬಂದಿದೆ ಅಂತಾರೆ ಕಿಂಗ್ ಕೊಹ್ಲಿ
2008 ರಲ್ಲಿ IPL ಗೆ ಪಾದಾರ್ಪನೆ ಮಾಡಿದ್ದ ಕೊಹ್ಲಿ, ಅಂದಿನಿಂದ ಇಲ್ಲಿಯವರೆಗೂ ಆರ್ಸಿಬಿ ತಂಡದಲ್ಲೆ ಆಡುತ್ತ ಬಂದಿದ್ದಾರೆ. ಕೊಹ್ಲಿ ಮೊದಲ ಸಿಜನ್ನಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡದೇ ಹೋದ್ರೂ ನಂತರ 2009 ರ IPL ಪಂದ್ಯದಲ್ಲಿ ಅದ್ಬುತ್ ಆಟ ಪ್ರದರ್ಶಿಸಿ ತಂಡವನ್ನು ಫೈನಲ್ಗೆ ಕರೆದುಕೊಂಡು ಹೋಗಿದ್ರು. ಈ ಸಿಜನ್ನ ನಾಯಕ ಅನಿಲ್ ಕುಂಬ್ಳೆ ಕೂಡ ಕೊಹ್ಲಿ ಆಟದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ರು. 2011,12, 14 ರಲ್ಲಿ ನಿರಾಶದಾಯಕ ಪ್ರದರ್ಶನ ನೀಡಿದ ಕೊಹ್ಲಿ ಅದರ ಮುಂದಿನ ವರ್ಷಗಳಲ್ಲಿ ತಂಡದ ನಾಯಕತ್ವ ಜೊತೆಗೆ ತಂಡಕ್ಕೆ ಅದ್ಬುತ್ ರನ್ ಕೊಡುಗೆ ನೀಡಿದ್ದಾರೆ. 2016 ರ IPLನಲ್ಲಿ ಒಟ್ಟು 4 ಶತಕಗಳೊಂದಿಗೆ 973 ರನ್ ಗಳಿಸಿರುವ ಕೊಹ್ಲಿ ಒಂದು ಸೀಜನ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ದಾಖಲೆ ಮಾಡಿದ್ದಾರೆ. ಸದ್ಯ 2022 ರ IPL ಪಂದ್ಯದ ಮುನ್ನ ನಾಯಕತ್ವ ಜಾಗಕ್ಕೆ ರಾಜೀನಾಮೆ ನೀಡಿ ಈಗ ಪ್ರಮುಖ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ. IPL ನಲ್ಲಿ ಆಡುವವರೆಗೂ ಹಾಗೂ ಮುಂದಿನ ಹಂತದಲ್ಲೂ ನಾನು RCB ಪರವಾಗಿಯೇ ನಿಲ್ಲಲಿದ್ದೇನೆ ಎನ್ನುವ ಮೂಲಕ ಕೊಹ್ಲಿ ಕರುನಾಡಿನ ಜನರ ಮನಸ್ಸು ಗೆದ್ದಿದ್ದಾರೆ.
ವಿರಾಟ್ ಚಿಕ್ಕ ವಯಸ್ಸಿನಲ್ಲೇ ಉತ್ತಮ ಪ್ರದರ್ಶನ ನೀಡುವ ಮೂಲಕ ಅಪಾರ ಯಶಸ್ಸು ಪಡೆದ ಕೊಹ್ಲಿ ಅನೇಕ ಪ್ರಶಸ್ತಿಗೂ ಪಾತ್ರರಾಗಿದ್ದಾರೆ. ಅದರಲ್ಲೂ ಪ್ರಮುಖ ಎನ್ನುವಂತೆ ನೋಡುವದಾದ್ರೆ 2012 ನೆಚ್ಚಿನ ಕ್ರಿಕೆಟಿಗ ಪ್ರಶಸ್ತಿ, 2012 ಐಸಿಸಿ ಏಕದಿನ ವರ್ಷದ ಆಟಗಾರ ಪ್ರಶಸ್ತಿ, 2013 ಕ್ರಿಕೆಟ್ ಗೆ ಅರ್ಜುನ ಪ್ರಶಸ್ತಿ, 2017 ಸಿಎನ್ಎನ್-ಐಬಿಎನ್ ವರ್ಷದ ಭಾರತೀಯ, 2017 ಪದ್ಮಶ್ರೀ ಪ್ರಶಸ್ತಿ, 2018 ಸರ್ ಗಾರ್ಫೀಲ್ಡ್ ಸೋಬರ್ಸ್ ಟ್ರೋಫಿ ಸೇರಿದಂತೆ ಇನ್ನೂ ಸಾಕಷ್ಟು ಪ್ರಶಸ್ತಿಗಳು ಅರಸಿ ಕೊಹ್ಲಿ ಬಳಿ ಬಂದಿವೆ. ಇದಕ್ಕೆಲ್ಲ ಕಠಿಣ ಶ್ರಮ ಹಾಗೂ ಆತ್ಮವಿಶ್ವಾಸವೇ ಕಾರಣ ಅಂತಾರೆ ವಿರಾಟ್
ತಮ್ಮೆಲ್ಲರಿಗೂ ಗೊತ್ತಿರುವಂತೆ ಬಾಲಿವುಡ್ನ ಖ್ಯಾತ ನಟಿ ಅನುಷ್ಕಾ ಶರ್ಮಾ ಜೊತೆ ವಿರಾಟ್ ಕೊಹ್ಲಿ ದಾಂಪತ್ಯ ಜೀವನ ಹಂಚಿಕೊಂಡಿದ್ದಾರೆ. ವಿರಾಟ್ ಮತ್ತು ಅನುಷ್ಕಾ 2013 ರಲ್ಲಿ ಜಾಹೀರಾತು ಕಂಪನಿಯ ಆಡ್ನಲ್ಲಿ ಕಾಣಿಸಿಕೊಂಡಿದ್ರು ಅದು ಅವರ ಮೋದಲ ಭೇಟಿಯಾಗಿತ್ತು. ಅಲ್ಲಿಂದ ಇಬ್ಬರ ಸ್ನೇಹ ಆರಂಭ ಆಗಿ, ಸ್ನೇಹದಿಂದ ಪ್ರಿತಿಗೆ ತಿರುಗಿತು. ನಂತರ ಅನೇಕ ಸಲ ಡೆಟಿಂಗ್ನಲ್ಲೂ ಕಾಣಿಸಿಕೊಂಡಿದ್ದ ಇವರು ಸಾಮಾಜಿಕ ಜಾಲತಾಣದಲ್ಲಿ ಹಾಟ್ ಜೋಡಿಯಾಗಿ ಮಿಂಚಿದ್ರು. 2017 ರಲ್ಲಿ ವಿದೇಶಕ್ಕೆ ಹಾರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಜೋಡಿ ಇಂದಿಗೂ ಸಾಕಷ್ಟು ಯುವಜನರಿಗೆ ಮಾಧರಿಯಾಗಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.