ಬೆಂಗಳೂರು: ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಬಿಜೆಪಿ ಹಿರಿಯ ನಾಯಕ ಹಾಗೂ ಕೇಂದ್ರ ಸಚಿವ ಅನಂತ್ ಕುಮಾರ್(59) ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಇಹಲೋಕ ತ್ಯಜಿಸಿದ್ದಾರೆ. ಮೃತರು ಪತ್ನಿ ತೇಜಸ್ವಿನಿ ಹಾಗೂ ಇಬ್ಬರು ಹೆಣ್ಣು ಮಕ್ಕಳು ಐಶ್ವರ್ಯ ಮತ್ತು ವಿಜೇತಾ ಅವರನ್ನು ಅಗಲಿದ್ದಾರೆ.
ಭಾರತೀಯ ಜನತಾ ಪಕ್ಷದ ನಾಯಕರಾಗಿದ್ದ ಅನಂತ್ ಕುಮಾರ್ ಒಬ್ಬ ಯಶಸ್ವೀ ರಾಜಕಾರಣಿ. ಕರ್ನಾಟಕದ ಬೆನಳುರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಜಯಗಳಿಸಿ, ಸಂಸದರಾಗಿ ಆಯ್ಕೆಯಾಗಿದ್ದರು. ಪ್ರಸ್ತುತ ಕೇಂದ್ರ ರಸಗೊಬ್ಬರ ಹಾಗೂ ಸಂಸದೀಯ ವ್ಯವಹಾರಗಳ ಖಾತೆಯನ್ನು ನಿರ್ವಹಿಸುತ್ತಿದ್ದ ಅನಂತ್ ಕುಮಾರ್ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಆಪ್ತರಾಗಿದ್ದರು.
1959 ಜುಲೈ 22ರಂದು ಬೆಂಗಳೂರಿನಲ್ಲಿ ಎಚ್. ಎನ್. ನಾರಾಯಣ ಶಾಸ್ತ್ರಿ, ಗಿರಿಜಾ ಶಾಸ್ತ್ರಿ ದಂಪತಿಗಳ ಪುತ್ರರಾಗಿ ಅನಂತ್ ಕುಮಾರ್ ಜನಿಸಿದರು. ಹುಬ್ಬಳ್ಳಿಯ ಕೆಎಸ್ ಕಲಾ ಕಾಲೇಜಿನಲ್ಲಿ ಬಿ.ಎ ಪದವಿ ಪಡೆದಿದ್ದರು. ಜೆಎಸ್ಎಸ್ ವಿವಿಯಲ್ಲಿ ಕಾನೂನು ಪದವಿ ಪಡೆದಿದ್ದ ಅನಂತ್ ಕುಮಾರ್ ಅವರು ಆರು ಬಾರಿ ಸಂಸತ್ ಸದಸ್ಯರಾಗಿ ಆಯ್ಕೆಯಾಗಿದ್ದರು.
ಭಾರತದ 15 ನೇ ಲೋಕಸಭೆಗೆ ಸದಸ್ಯನಾಗಿ ಚುನಾಯಿತರಾದ, ಭಾರತೀಯ ಜನತಾ ಪಕ್ಷದ ಅನಂತ್ ಕುಮಾರ್, ಒಬ್ಬ ಯಶಸ್ವೀ ರಾಜಕಾರಣಿ. ಕರ್ನಾಟಕದ ದಕ್ಷಿಣ ಬೆಂಗಳೂರು ಚುನಾವಣಾ ಕ್ಷೇತ್ರದಿಂದ ಭಾರತೀಯ ಜನತಾ ಪಕ್ಷದ ರಾಜಕೀಯ-ಪಟುವಾಗಿ ಪ್ರಸಿದ್ಧರಾಗಿದ್ದಾರೆ. ಕರ್ನಾಟಕ ರಾಜ್ಯದ ಬೆಂಗಳೂರಿನಲ್ಲಿ, ಅವರು ಇಂದಿಗೂ, ರಾಷ್ಟ್ರೀಯ ಸ್ವಯಂಸೇವಕರಾಗಿದ್ದರು.
ರಾಜ್ಯ ಬಿಜೆಪಿ ಘಟಕದ ಆಧಾರ ಸ್ತಂಭ:
ರಾಷ್ಟ್ರೀಯ ಸ್ವಯಂ-ಸೇವಕಸಂಘ ಅವರಿಗೆ ಮೊದಲಿನಿಂದಲೂ ಪ್ರಿಯ. ಬಾಲ್ಯದಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ, ತತ್ವಗಳಿಂದ ಪ್ರೇರಿತರಾಗಿದ್ದರು. ’ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್’(ಎಬಿವಿಪಿ) ನ ವಿದ್ಯಾರ್ಥಿ ವಿಭಾಗದಲ್ಲಿ ಸೇರಿಕೊಂಡರು. ತುರ್ತು-ಪರಿಸ್ಥಿತಿಯ ಸಂದರ್ಭದಲ್ಲಿ ಅವರು 40 ದಿನ ಸೆರೆಮನೆ ವಾಸ ಅನುಭವಿಸಿದ್ದರು. ರಾಮಜನ್ಮ ಭೂಮಿ ಹೋರಾಟ ಕ್ಕಿಂತಲೂ ತುರ್ತುಪರಿಸ್ಥಿತಿ ಸಮಯದಲ್ಲಿ ಹೋರಾಡಿ ವಾಜಪೇಯಿ, ಅಡ್ವಾಣಿ ಜೊತೆ ಬೆಂಗಳೂರು ಕಾರಾಗೃದಲ್ಲಿದ್ದರು.
ಚಿಕ್ಕವಯಸ್ಸಿನಲ್ಲೇ, ಕರ್ನಾಟಕ ವಲಯದ ಬಿಜೆಪಿಯ ಜನರಲ್ ಸೆಕ್ರೆಟರಿಯಾಗಿ, ಚುನಾಯಿತರಾಗಿದ್ದ ಅವರು ನಂತರ, 1985 ರಲ್ಲಿ ಅದರ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಆಯ್ಕೆಯಾದರು. 'ಅಖಿಲ ಭಾರತೀಯ ವಿದ್ಯಾರ್ಥಿ ಫರಿಷದ್', ನಿಂದ ಮುಂದೆ 'ಜನತಾಪಾರ್ಟಿ'ಯ ದೊಡ್ಡ ಹುದ್ದೆಗಳನ್ನು ಅವರು ಅಲಂಕರಿಸಿದರು.
1987ರಲ್ಲಿ ಬಿಜೆಪಿಗೆ ಸೇರ್ಪಡೆಯಾದ ಅವರು, ಬಿಜೆಪಿಯ ರಾಜ್ಯಮಟ್ಟದ ಅಧ್ಯಕ್ಷರಾಗಿ ನಾಮಿನೇಟ್ ಆದರು. 'ಯುವ-ಮೋರ್ಚ' ದಲ್ಲಿ ಅವರು ನಡೆಸಿದ ಕಾರ್ಯವೈಖರಿಯನ್ನು ಗಮನಿಸಿ ಪಕ್ಷ ಅವರನ್ನು, 1996ರಲ್ಲಿ, ರಾಷ್ಟ್ರಮಟ್ಟದ ರಾಜಕೀಯವಲಯದಲ್ಲಿ ಕಾರ್ಯದರ್ಶಿಯನ್ನಾಗಿ ಆಯ್ಕೆಮಾಡಿತು. 'ರಾಮಜನ್ಮಭೂಮಿಯ ಕಾರಣಕ್ಕೆ ಹೋರಡಿ' ಕರ್ನಾಟಕದಿಂದ ಆಯ್ಕೆಯಾದ ಪ್ರತಿನಿಧಿಗಳಲ್ಲಿ ಅವರು ಪ್ರಮುಖರಾಗಿದ್ದರು.
'ಅಟಲ್ ಬಿಹಾರಿ ವಾಜಪೇಯಿ' ಮಂತ್ರಿಮಂಡಲದಲ್ಲಿ 'ನಾಗರಿಕ ವಿಮಾನ ಖಾತೆ ಮಂತ್ರಿ':
1996 ರಲ್ಲಿ ಮೊದಲ ಬಾರಿಗೆ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಮೊದಲ ಪ್ರಯತ್ನದಲ್ಲೇ ಸಂಸದರಾಗಿ ಆಯ್ಕೆಯಾದ ಅನಂತ್ ಕುಮಾರ್, 1998ರಲ್ಲಿ 'ಅಟಲ್ ಬಿಹಾರಿ ವಾಜಪೇಯಿ' ಮಂತ್ರಿಮಂಡಲದಲ್ಲಿ 'ನಾಗರಿಕ ವಿಮಾನ ಖಾತೆ ಮಂತ್ರಿ'ಯಾಗಿ ಸ್ಥಾನ ಪಡೆದರು. ಅಟಲ್ ಸರ್ಕಾರದ ಮಂತ್ರಿ ಮಂಡಲದಲ್ಲಿ ಕಿರಿಯ ವಯಸ್ಸಿನ ಮಂತ್ರಿ ಎನಿಸಿಕೊಂಡರು.
1999 ರಲ್ಲಿ ಮತ್ತೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಮರು ಆಯ್ಕೆಯಾದ ಅನಂತ್ ಕುಮಾರ್, ವಾಜಪೇಯಿ ಸರ್ಕಾರದಲ್ಲಿ ಮತ್ತೆ ಮಂತ್ರಿ ಸ್ಥಾನ ಪಡೆದಿದ್ದರು. ಪ್ರವಾಸೋದ್ಯಮ, ಕ್ರೀಡೆ, ಯುವಜನ ಮತ್ತು ಸಂಸ್ಕೃತಿ, ನಗರಾಭಿವೃದ್ಧಿ ಸಚಿವರಾಗಿ ಕಾರ್ಯನಿರ್ವಹಿಸಿದ್ದ ಅನಂತ ಕುಮಾರ್, 2004ರಲ್ಲಿ ನಾಲ್ಕನೇ ಬಾರಿಗೆ ಮತ್ತೆ ಆಯ್ಕೆಯಾದರು. 2009 ರಲ್ಲಿ 5ನೇ ಬಾರಿಗೆ ಹಾಗೂ 2014ರಲ್ಲಿ 6ನೇ ಬಾರಿಗೆ ಅದೇ ಕ್ಷೇತ್ರದಿಂದ ಆಯ್ಕೆಯಾದ ಅನಂತ್ ಕುಮಾರ್, ನರೇಂದ್ರ ಮೋದಿ ಸರ್ಕಾರದಲ್ಲೂ ಮಂತ್ರಿಯಾಗಿ ಸಂಸದೀಯ ವ್ಯವಹಾರಗಳ ಸಚಿವರಾಗಿ ಜೊತೆಗೆ ಔಷಧಿ ಮತ್ತು ರಸಗೋಬ್ಬರ ಖಾತೆ ನಿರ್ವಹಿಸುತ್ತಿದ್ದರು.
ಅನಂತನ ಹೆಜ್ಜೆ ಗುರುತು:
- 1982-85- ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಕಾರ್ಯದರ್ಶಿ
- 1985-87- ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ರಾಷ್ಟ್ರೀಯ ಕಾರ್ಯದರ್ಶಿ
- 1987-88- ಭಾರತೀಯ ಜನತಾ ಪಾರ್ಟಿಯ ಕಾರ್ಯದರ್ಶಿ
- 1988-95-ಭಾರತೀಯ ಜನತಾ ಪಕ್ಷದ ಜನರಲ್ ಸೆಕ್ರೆಟರಿ
- 1995-98-ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ
- 1996- ಬಿಜೆಪಿಯಿಂದ ಲೋಕ ಸಭೆಗೆ ಆಯ್ಕೆ
- 1996-97-ಇಂಡಿಯನ್ ಇನ್ಸ್ಟಿಟ್ಯೂಟ್ನ ಸೈನ್ಸ್ನ ಸದಸ್ಯರು
- 1996-97-ಕೆಂದ್ರ ಕೈಗಾರಿಕಾ ಸಚಿವಾಲಯದ ಸಂಸದೀಯ ಸಲಹಾ ಸಮಿತಿಯ ಸದಸ್ಯ
- 1996-97-ಕೇಂದ್ರ ರೈಲ್ವೆ ಸಚಿವಾಲಯದ ಸಂಸದೀಯ ಸ್ಥಾಯಿ ಸಮಿತಿಯ ಸದಸ್ಯ
- 1998-ರಲ್ಲಿ ಮತ್ತೆ ಲೋಕ ಸಭೆಗೆ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಆಯ್ಕೆ
- 1998- ಕೇಂದ್ರ ವಿಮಾನ ಯಾನ ಸಚಿವರಾಗಿ ಆಯ್ಕೆ
- 1999-ಅಕ್ಟೋಬರ್-99-ಪ್ರವಾಸೋದ್ಯಮ ಇಲಾಖೆ ಸಚಿವ (ಹೆಚ್ಚುವರಿ)
- 1999- ಲೋಕ ಸಭೆಗೆ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಆಯ್ಕೆ ಮತ್ತೆ ಆಯ್ಕೆ
- 1999- ಸಂಸ್ಕೃತಿ, ಯುವಜನ ಮತ್ತು ಕ್ರೀಡಾ ಸಚಿವ (ಕ್ಯಾಬಿನೆಟ್)
- 2000- ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ
- 2001-ಕೇಂದ್ರ ಸರ್ಕಾರದ ನಗರಾಭಿವೃದ್ಧಿ ಮತ್ತು ಬಡತನ ನಿರ್ಮೂಲನಾ ಸಚಿವ- (ಗ್ರಾಮೀಣಾಭಿವೃದ್ಧಿ ಸಚಿವ)
- 2003- ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ
- 2004- ಲೋಕ ಸಭೆಗೆ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಆಯ್ಕೆ
- 2004- ಕಲ್ಲಿದ್ದಲು ಮತ್ತು ಉಕ್ಕು ಸಮಿತಿ ಅಧ್ಯಕ್ಷ
- 2004- ಸಂಸದೀಯ ಸಾಮಾನ್ಯ ಸಂಗತಿಗಳ ಸಮಿತಿಯ ಸದಸ್ಯ
- 2005- ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ
- 2007-ಕೇಂದ್ರ ಸಂಸದೀಯ ಹಣಕಾಸ ಸಮಿತಿ ಅಧ್ಯಕ್ಷ
- 2007- ಕೇಂದ್ರ ಸಲಹಾ ಸಮಿತಿ ಸದಸ್ಯ
- 2009 ರಲ್ಲಿ- ಲೋಕ ಸಭೆಗೆ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಆಯ್ಕೆ
- 2014 -ಲೋಕ ಸಭಾ ಸಭೆಗೆ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಆಯ್ಕೆಯಾಗಿ ಸಂಸದೀಯ ವ್ಯವಹಾರಗಳ ಸಚಿವರಾಗಿ, ಔಷಧಿ ಮತ್ತು ರಸಗೋಬ್ಬರ ಖಾತೆ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದರು.