ಅಕ್ಟೋಬರ್ 27ರೊಳಗೆ ಬೆಂಗಳೂರು ಗುಂಡಿ ಮುಕ್ತ ಎಂದು ಘೋಷಣೆ- ಡಿಸಿಎಂ

ಬಿಬಿಎಂಪಿ ಆಡಳಿತದ ಬಗ್ಗೆ ಹೈಕೋರ್ಟ್‌ ನ್ಯಾಯಾದೀಶರು ಲೋಪದೋಷವನ್ನು ಎತ್ತಿಹಿಡಿದು, ಕಟುವಾಗಿ ಸೂಚನೆ ನೀಡಿದ್ದಾರೆ‌. ಇಂತಿಷ್ಟು ದಿನದಲ್ಲಿ‌ ರಸ್ತೆ ಗುಂಡಿ ಮುಚ್ಚಲು ಗಡುವು ನೀಡಿದ್ದು, ಈ ಸಂಬಂಧ ಶನಿವಾರ ವಿಚಾರಣೆ ಬರಲಿದೆ.

Last Updated : Oct 26, 2018, 07:23 AM IST
ಅಕ್ಟೋಬರ್ 27ರೊಳಗೆ ಬೆಂಗಳೂರು ಗುಂಡಿ ಮುಕ್ತ ಎಂದು ಘೋಷಣೆ- ಡಿಸಿಎಂ title=
File images

ಬೆಂಗಳೂರು: ಅಕ್ಟೋಬರ್ 27(ಶನಿವಾರ)ರೊಳಗಾಗಿ ಸಿಲಿಕಾನ್ ಸಿಟಿ  ಬೆಂಗಳೂರನ್ನು ಗುಂಡಿ ಮುಕ್ತ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ‌ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು. 

ಗುರುವಾರ ವೈಟ್‌ಟಾಪಿಂಗ್, ರಸ್ತೆಗುಂಡಿ, ಕಸ ನಿರ್ವಹಣೆ ಕುರಿತು ವಿಕಾಸಸೌಧದಲ್ಲಿ ಬಿಬಿಎಂಪಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಬಿಎಂಪಿ ಆಡಳಿತದ ಬಗ್ಗೆ ಹೈಕೋರ್ಟ್‌ ನ್ಯಾಯಾದೀಶರು ಲೋಪದೋಷವನ್ನು ಎತ್ತಿಹಿಡಿದು, ಕಟುವಾಗಿ ಸೂಚನೆ ನೀಡಿದ್ದಾರೆ‌. ಇಂತಿಷ್ಟು ದಿನದಲ್ಲಿ‌ ರಸ್ತೆ ಗುಂಡಿ ಮುಚ್ಚಲು ಗಡುವು ನೀಡಿದ್ದು, ಈ ಸಂಬಂಧ ಶನಿವಾರ ವಿಚಾರಣೆ ಬರಲಿದೆ. ಅಷ್ಟರೊಳಗೆ ಎಲ್ಲ ಗುಂಡಿಗಳನ್ನು ಮುಚ್ಚುವಂತೆ ಎಂಟು ವಲಯ ಜಂಟಿ ಆಯುಕ್ತರಿಗೆ ಸೂಚನೆ ನೀಡಿದ್ದು, ಇದರ ದಾಖಲೆಗಳನ್ನು ಬಿಬಿಎಂಪಿ ವೆಬ್‌ಸೈಟ್‌ನಲ್ಲಿಯು ಪ್ರಕಟಿಸುವಂತೆ ಸೂಚಿಸಿರುವುದಾಗಿ ತಿಳಿಸಿದರು.

ನಗರದ ಪ್ರತಿ ಬೀದಿಯ ರಸ್ತೆ ಗುಂಡಿ ಮುಚ್ಚಿರುವ ಮಾಹಿತಿ ಹಾಕಲಾಗುತ್ತದೆ. ಇದೇ ದಾಖಲೆಯನ್ನು ಹೈಕೋರ್ಟ್‌ಗೂ ಸಲ್ಲಿಸಲಾಗುವುದು.‌ ಈ ದಾಖಲೆ ತಪ್ಪಿದ್ದರೆ ಆಯಾ ವಲಯ ಜಂಟಿ ಆಯುಕ್ತರಿಗೆ ನೇರ ಕರೆ ಮಾಡಿ ಸಾರ್ವಜನಿಕರು ದೂರು ಸಲ್ಲಿಸಬಹುದು ಎಂದರು. 

ಬಿಬಿಎಂಪಿಗೆ ಡಿಸಿಎಂ ಆದೇಶಗಳು:
* ಎರಡು ವರ್ಷಗಳಿಂದ ಟೆಂಡರ್‌ ಶ್ಯೂರ್ ಹಾಗೂ ವೈಟ್‌ಟಾಪಿಂಗ್ ಯೋಜನೆ ಪ್ರಗತಿಯಲ್ಲಿದ್ದು, ಈ ಎರಡು ಪ್ರಾಜೆಕ್ಟ್‌ಗಳು ಬೇಸಿಗೆ ಒಳಗಾಗಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.‌

*100 ಕಿ.ಮೀ. ವ್ಯಾಪ್ತಿಯ ಈ ಯೋಜನೆ 945 ಕೋಟಿ ರೂ. ಅಂದಾಜಿನಲ್ಲಿ ಕೆಲಸ ಪ್ರಗತಿಯಲ್ಲಿದೆ. ಕೆಲ ರಸ್ತೆಗಳಲ್ಲಿ‌ ಸಂಚಾರದ ಕೊರತೆಯಿಂದ ಕೆಲಸ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. 11 ತಿಂಗಳ ಅವಧಿ ಇದ್ದರೂ ಪೂರ್ಣಗೊಳಿಸಲು ಆಗಿಲ್ಲ. ವೈಟ್‌ಟಾಪಿಂಗ್ ಯೋಜನೆಗೆ ಪೊಲೀಸರು ಅವಕಾಶ ನೀಡುವ ಸಂಬಂಧ ಅವರೊಂದಿಗೆ ಸಭೆ ನಡೆಸಲಾಗುವುದು. ಪ್ರಸ್ತುತ ಪ್ರಾರಂಭಿಸಿರುವ ಈ ಯೋಜನೆ ಬೇಸಿಗೆ ಒಳಗೆ ಪೂರ್ಣಗೊಳಿಸಲು ಗಡುವು ನೀಡಲಾಗಿದೆ.

* ಪ್ರಸ್ತುತ 665 ಕೋಟಿ ರೂ.ವೆಚ್ಚದಲ್ಲಿ 63 ಕಿ.ಮೀ. ರಸ್ತೆಯ ಎಂಟು ಪ್ಯಾಕೇಜ್‌ನ ಟೆಂಡರ್ ಕರೆಯಲಾಗಿದೆ. ಈ ಹಂತದಲ್ಲಿ‌ ಒಟ್ಟು 41 ರಸ್ತೆಗಳನ್ನು ವೈಟ್‌ಟಾಪಿಂಗ್ ಮಾಡಲಾಗುತ್ತದೆ. ಈ ಯಾವುದೇ ಕಾಮಗಾರಿಗೂ ಬಿಬಿಎಂಪಿ ಹಣದ ಕೊರತೆ ಇಲ್ಲ. 

* ತ್ಯಾಜ್ಯ ನಿರ್ವಹಣೆ ಸಂಬಂಧ ಎರಡು ವರ್ಷದಿಂದ ಟೆಂಡರ್ ಕರೆದಿರಲಿಲ್ಲ. ಇನ್ನೊಂದು ತಿಂಗಳೊಳಗಾಗಿ ಹೊಸದಾಗಿ ಟೆಂಡರ್ ಆಹ್ವಾನಿಸಿ, ಕಸ ನಿರ್ವಹಣೆಯ ಮಷಿನರಿಗಳನ್ನು ಗುತ್ತಿಗೆದಾರರು ಹೊಂದಿರಬೇಕು ಎಂದು ಷರತ್ತು ಹಾಕಲಾಗಿದೆ.
ಕಸದಿಂದ ವಿದ್ಯುತ್ ಉತ್ಪಾದನೆ ಯೋಜನೆ ಘಟಕಗಳನ್ನು ಪ್ರತಿ ವಲಯದಲ್ಲೂ 10 ತಿಂಗಳೊಳಗಾಗಿ ತೆರೆಯಲಾಗುವುದು ಎಂದರು. 

* ಪ್ರತಿ ಬೀದಿಯಲ್ಲಿ ಎಲ್‌ಇಡಿ ಬಲ್ಬ್‌ ಅಳವಡಿಸುವ ಸಂಬಂಧ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಸಚಿವ ಸಂಪುಟದಲ್ಲಿ ಒಪ್ಪಿಗೆ ಪಡೆಯಲಾಗುವುದು. 800 ಕೋಟಿ ವೆಚ್ಚದಲ್ಲಿ ಪಿಪಿಪಿ ಮಾದರಿಯಲ್ಲಿ ಈ ಯೋಜನೆಯನ್ನು ಶೀಘ್ರವೇ ಪ್ರಾರಂಭಿಸಲಾಗುವುದು. ಇದರಿಂದ ಶೇ.80ರಷ್ಟು ವಿದ್ಯುತ್ ಉಳಿತಾಯ ಆಗಲಿದೆ. ಇದರ ನಿರ್ವಹಣೆಗೆ ಪ್ರತ್ಯೇಕಕಂಟ್ರೋಲ್‌ ರೂಮ್ ಇರಲಿದ್ದು, ಪ್ರತಿ ಬೀದಿಯನ್ನು ನಿರ್ವಹಣೆ ಮಾಡುತ್ತಾರೆ. 
 

Trending News