ಬೆಂಗಳೂರು: ಆಫ್ರಿಕಾ-ಅಮೇರಿಕನ್ ಮೂಲದ ಹೋರಾಟಗಾರ್ತಿ ತರಾನಾ ಬರ್ಕ್ ರಿಂದ ಪ್ರಾರಂಭವಾದ ಮೀಟೂ ಈ ಅಭಿಯಾನ ಈಗ ಬಾಲಿವುಡ್ ನಲ್ಲಿ ತನುಶ್ರೀ ದತ್ತಾ ನಟ ನಾನಾ ಪಟೇಕರ್ ಮೇಲೆ ಲೈಂಗಿಕ ಕಿರುಕುಳದ ಆರೋಪ ಮಾಡುವುದರ ಮೂಲಕ ಭಾರತದಲ್ಲಿ ಅಧಿಕೃತವಾಗಿ ಈ ಅಭಿಯಾನಕ್ಕೆ ಚಾಲನೆ ಸಿಕ್ಕಿದೆ. ಇದಾದ ನಂತರ ಈ ಅಭಿಯಾನದಿಂದ ಬೀಸಿದ ಬಿರುಗಾಳಿ ಸಣ್ಣದೇನಲ್ಲ, ಈಗ ಅದು ಸ್ಯಾಂಡಲ್ ವುಡ್ ಅಂಗಳಕ್ಕೂ ಕೂಡ ಕಾಲಿಟ್ಟಿದೆ. ಈ ಹಿನ್ನಲೆಯಲ್ಲಿ ಈ ಅಭಿಯಾನದ ಸಾಗಬೇಕಾದ ದಾರಿಯ ಬಗ್ಗೆ ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು ಕೆಲವು ಅಭಿಪ್ರಾಯಗಳನ್ನು ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ.
"ನನಗೆ ಸ್ನೇಹಿತರಾಗಿರುವ ಚೇತನ್ ಮತ್ತು ನನಗೆ ಪರಿಚಯ ಇಲ್ಲದ ಶ್ರುತಿಹರಿಹರನ್ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ನಡೆಸಲಾಗುತ್ತಿರುವ ಕೀಳು ಮಟ್ಟದ ದಾಳಿಯನ್ನು ನಾನು ಖಂಡಿಸುತ್ತೇನೆ ಮತ್ತು ಅದರ ವಿರುದ್ಧದ ಹೋರಾಟದಲ್ಲಿ ನಾನಿರುತ್ತೇನೆ ಎನ್ನುವುದನ್ನು ಸ್ಪಷ್ಟಪಡಿಸುತ್ತಾ ಕೆಲವು ಮಾತುಗಳು:
ನಿಮ್ಮ ಚಾನೆಲ್ ನ ಜನಪ್ರಿಯತೆಯ ಗುಟ್ಟೇನು ಎಂದು ರಾಜ್ಯದ ಜನಪ್ರಿಯ ಚಾನೆಲ್ ಮುಖ್ಯಸ್ಥರನ್ನು ಕೆಲವು ವರ್ಷಗಳ ಹಿಂದೆ ಕೇಳಿದ್ದೆ. ನಮ್ಮ ಟಿಆರ್ ಪಿಯ ಗುಟ್ಟು, ಮೂರು ‘C’ ಗಳು (Cinema,Cricket, Crime)’’ ಎಂದು ತಕ್ಷಣ ಅವರು ಉತ್ತರಿಸಿದ್ದರು. ಮಾಧ್ಯಮ ವೃತ್ತಿಜೀವನದುದ್ದಕ್ಕೂ ಈ ಮೂರು ಕ್ಷೇತ್ರಗಳ ಬಗ್ಗೆ ನಾನು ನಿರಾಸಕ್ತಿ ಹೊಂದಿದ್ದವನು. ಪ್ರಾರಂಭದ ದಿನಗಳಲ್ಲಿ ಮುಂಬೈ ಭೂಗತ ಜಗತ್ತಿನ ಬಗ್ಗೆ ನನಗಿದ್ದ ಕುತೂಹಲ ಮತ್ತು ಮೊದಲಿನಿಂದಲೂ ಸಿನೆಮಾ ಹಾಡುಗಳ ಮೇಲಿನ ಸ್ವಲ್ಪ ಆಸಕ್ತಿಯನ್ನು ಹೊರತುಪಡಿಸಿದರೆ, ಈ ಮೂರು ಕ್ಷೇತ್ರಗಳ ವಿದ್ಯಮಾನಗಳ ಬಗ್ಗೆ ಈಗಲೂ ನಾನು ಅಜ್ಞಾನಿ. (ವಿರಾಟ್ ಕೊಹ್ಲಿ ಬಿಟ್ಟು ಇನ್ನೊಬ್ಬ ಕ್ರಿಕೆಟಿಗನ ಹೆಸರು ಹೇಳಿ ಎಂದರೆ ನಾನು ಥಟ್ಟನೆ ಉತ್ತರಿಸಲಾರೆ)
ನಾನು ಕಿರಿಯರ ಜತೆ ಮಾತನಾಡುತ್ತಾ ಸಾಮಾನ್ಯವಾಗಿ ಹೇಳುತ್ತಿರುತ್ತೇನೆ ‘’ I hate Politician, but I love Politics, ಅದೇ ರೀತಿ I love Films, but I hate Film actors ಎಂದು. ಎಲ್ಲ ನಿಯಮಗಳಿಗೆ ಅಪವಾದಗಳಿರುವಂತೆ ಇಲ್ಲಿಯೂ ಇದೆ ಎನ್ನುವುದನ್ನೂ ಒಪ್ಪಿಕೊಳ್ಳುತ್ತಲೇ ಇದನ್ನು ಹೇಳುತ್ತಿದ್ದೇನೆ. ಇವರಲ್ಲಿಯೂ ರಾಜಕಾರಣಿಗಳು ಮತ್ತು ಸಿನೆಮಾ ನಟ-ನಟಿಯರು ನಡುವೆ ಆಯ್ಕೆಯ ಪ್ರಶ್ನೆ ಬಂದರೆ ನಾನು ರಾಜಕಾರಣಿಗಳ ಸ್ನೇಹವನ್ನೇ ಬಯಸುತ್ತೇನೆ. ನಟನಟಿಯರಂತೆ ದೀರ್ಘಕಾಲ ಮೀಡಿಯಾಗಳ ಡಾರ್ಲಿಂಗ್ ಆಗಿ ಮೆರೆದ ಒಬ್ಬನೇ ಒಬ್ಬ ರಾಜಕಾರಣಿ ಇಡೀ ಜಗತ್ತಿನಲ್ಲಿಲ್ಲ.
ನನ್ನ ಪ್ರಕಾರ ಮಾಧ್ಯಮಗಳನ್ನು ಅತ್ಯಂತ ಹೆಚ್ಚು ದುರುಪಯೋಗ ಪಡಿಸಿಕೊಳ್ಳುತ್ತಿರುವುದು ಚಲನಚಿತ್ರ ಕ್ಷೇತ್ರದ ನಟ-ನಟಿಯರು,ನಿರ್ದೇಶಕರು ಮತ್ತು ನಿರ್ಮಾಪಕರು. ಚಾನೆಲ್ ಗಳನ್ನು ಬಿಟ್ಟುಬಿಡಿ ನಮ್ಮ ಎಷ್ಟು ಪತ್ರಿಕೆಗಳಲ್ಲಿ ಸಾಹಿತ್ಯ,ಕಲೆ,ಸಂಸ್ಕೃತಿಗಷ್ಟೇ ಸೀಮಿತವಾದ ಪುರವಣಿಗಳಿವೆ? ಆದರೆ ಚಲನಚಿತ್ರಗಳ ಬಗ್ಗೆ ಪ್ರತ್ಯೇಕ ಪುರವಣಿಗಳಿಲ್ಲದ ಪತ್ರಿಕೆಗಳೇ ಇಲ್ಲ. ಇದರ ಜತೆಗೆ ನಿತ್ಯದ ಪುರವಣಿಗಳಲ್ಲಿಯೂ ಮತ್ತೆ ಅವರದ್ದೇ ಅವತಾರಗಳು. ಇದೆಲ್ಲ ಯಾಕೆ ಎಂದು ಕೇಳಿ, ‘’ಜನ ಇಷ್ಟಪಡುತ್ತಾರೆ’’ ಎನ್ನುವ ಸಿದ್ದ ಉತ್ತರ ಸಿಗುತ್ತದೆ.
ನಮ್ಮ ಹಿರಿಯಸಾಹಿತಿಗಳು ಉದಾಹರಣೆಗೆ, ಶತಾಯುಷಿ ಜಿ.ವೆಂಕಟಸುಬ್ಬಯ್ಯ ಅವರಿಗೆ ಇಡೀ ಜೀವಮಾನದಲ್ಲಿ ಮಾಧ್ಯಮಗಳಲ್ಲಿ ಎಷ್ಟು ಕವರೇಜ್ ಸಿಕ್ಕಿದೆ ಮತ್ತು ಅವರಿಗಿಂತ 60-70 ವರ್ಷ ಕಡಿಮೆ ವಯಸ್ಸಿನ ನಾಲ್ಕಾರು ಚಿತ್ರಗಳ ನಾಯಕ-ನಾಯಕಿಯರಿಗೆ ಎಷ್ಟು ಕವರೇಜ್ ಸಿಕ್ಕಿದೆ ಎನ್ನುವುದನ್ನು ಲೆಕ್ಕಹಾಕಿದರೆ ನಮ್ಮ ಮಾಧ್ಯಮ ಕ್ಷೇತ್ರದ ಸಿನೆಮಾ ಹುಚ್ಚು ಅರಿವಾಗಬಹುದು.
ರಾಜ್ಯದಾದ್ಯಂತ ಪ್ರತಿದಿನ ಅನ್ಯಾಯ,ಅವಮಾನ,ಶೋಷಣೆ ವಿರುದ್ಧ ಬೀದಿ ಹೋರಾಟ-ಚಳುವಳಿಗಳು ನಡೆಯುತ್ತಿರುತ್ತವೆ, ಅವುಗಳ ಬಗ್ಗೆ ಮಾಧ್ಯಮಗಳು ಕಣ್ಣೆತ್ತಿಯೂ ನೋಡುವುದಿಲ್ಲ. ಅಪ್ಪಿತಪ್ಪಿ ದಾರಿಯಲ್ಲಿ ಹೋಗುತ್ತಿರುವ ನಟನಟಿಯರು ಹೋರಾಟಗಾರರ ಜತೆ ಒಂದು ಕ್ಷಣ ನಿಂತು ಕೈಬೀಸಿದರೆ ಮರುದಿನ ಆಲ್ ಎಡಿಷನ್ ಸುದ್ದಿ.
ಒಬ್ಬ ಲೇಖಕ ತನ್ನ ಪುಸ್ತಕದ ಬಗ್ಗೆ ನಾಲ್ಕು ಸಾಲಿನ ಪರಿಚಯದ ಪ್ರಕಟಣೆಗಾಗಿ ಪತ್ರಕರ್ತರ ಕೈಕಾಲುಹಿಡಿದು ಗೋಳಾಡುವುದನ್ನು ನಾನು ಕಂಡಿದ್ದೇನೆ. ಆದರೆ ಸಿನೆಮಾ ಎಷ್ಟೇ ಕಳಪೆಯಾಗಿರಲಿ, ಆ ಸಿನೆಮಾದ ನಾಯಕ ನಾಯಕಿಯರ ಕಟೌಟ್ ಗಳು ಪತ್ರಿಕೆಗಳ ಶುಕ್ರವಾರದ ಪುರವಣಿಯಲ್ಲಿ ರಾರಾಜಿಸುತ್ತವೆ. ‘’ಪುಸ್ತಕ ಚೆನ್ನಾಗಿದ್ದರೆ ಜನ ಕೊಂಡು ಓದುತ್ತಾರೆ, ಅದಕ್ಕೆ ಪ್ರಚಾರ ಯಾಕ್ರಿ ?’’ಎಂದು ಕೇಳುವ ಸಂಪಾದಕ, ಹೊಸ ಸಿನೆಮಾಗಳ ಬಗ್ಗೆ ಮಾತ್ರ ಪುಟಗಟ್ಟಳೆ ಪ್ರಚಾರ ನೀಡಲು ಹಿಂಜರಿಯುವುದಿಲ್ಲ. ಈ ರೀತಿ ಪ್ರಚಾರ ಪಡೆದ ಶೇಕಡಾ 99ರಷ್ಟು ಚಿತ್ರಗಳು ಫ್ಲಾಪ್, ಜನರೇ ತಿರಸ್ಕರಿಸಿದ್ದಾರೆ. ವಿಚಿತ್ರವೆಂದರೆ, ಸಿನೆಮಾ ರಂಗದಿಂದ ಜಾಹೀರಾತಿನ ದೊಡ್ಡ ಲಾಭಕೂಡಾ ಮಾಧ್ಯಮದ ಮಾಲೀಕರಿಗಿಲ್ಲ. ಈ ಹುಚ್ಚಿಗೆ ಬೇರೆ ಕಾರಣಗಳಿವೆ.
ಬಹಳಷ್ಟು ಪ್ರತಿಭಾವಂತ ಪತ್ರಕರ್ತರನ್ನು ಭ್ರಷ್ಟರನ್ನಾಗಿ, ಕುಡುಕರನ್ನಾಗಿ ಮಾಡಿದ ಕೀರ್ತಿ ಚಲನಚಿತ್ರರಂಗಕ್ಕೆ ಸಲ್ಲಬೇಕು. ಪ್ರಾರಂಭದ ದಿನಗಳಲ್ಲಿ ಪ್ರಜಾವಾಣಿಯಲ್ಲಿದ್ದಾಗ ವಾರದ ರಜೆಯ ದಿನ ಸಿನೆಮಾ ಮುಹೂರ್ತ ಮತ್ತಿತರ ಕಾರ್ಯಕ್ರಮಗಳ ವರದಿಗೆ ನನ್ನನ್ನು ಕಳುಹಿಸುತ್ತಿದ್ದರು. ಆದರೆ ಎಷ್ಟೋ ಸಲ ಶುಕ್ರವಾರದ ಚಿತ್ರಪುರವಣಿಗಳಲ್ಲಿ ನಾನು ಬರೆದ ವರದಿಗಳೇ ಪ್ರಕಟವಾಗುತ್ತಿರಲಿಲ್ಲ. ಪ್ರಕಟವಾಗುತ್ತಿದ್ದದ್ದು ಪಿಆರ್ ಒ ಗಳು ಬಂದು ಪುರವಣಿ ಮುಖ್ಯಸ್ಥರಿಗೆ ಕೊಡುತ್ತಿದ್ದ ಪ್ರೆಸ್ ನೋಟ್ ಸುದ್ದಿಗಳು. ನಾನು ಮೊದಲ ಬಾರಿಗೆ ಪತ್ರಿಕಾ ಕಚೇರಿಯೊಳಗೆ ಬ್ರೀಪ್ ಕೇಸ್ ಗಳನ್ನು ನೋಡಿದ್ದು ಈ ಪಿಆರ್ ಒಗಳ ಕೈಯಲ್ಲಿಯೇ. ಈ ಪಿಆರ್ ಒಗಳು ಒಂದು ರೀತಿ ಫಿಲ್ಮ್ ಬೀಟ್ ಮಾಡುವವರ ಎಟಿಎಂ ಇದ್ದ ಹಾಗೆ. ಗುಂಡುಪಾರ್ಟಿ, ಟೂರ್ ಮತ್ತಿತರ ಮನೆವಾರ್ತೆಅವಶ್ಯಕತೆಗಳನ್ನು ಮನಸ್ಸನರಿತುಕೊಂಡು ಪೂರೈಸುತ್ತಿರುತ್ತಾರಂತೆ.
ನಮ್ಮ ಖ್ಯಾತ ಸಿನೆಮಾ ಪತ್ರಕರ್ತನ ಬಗ್ಗೆ ಹಿರಿಯ ಪತ್ರಕರ್ತರೊಬ್ಬರು ಮಾತನಾಡುತ್ತಾ ‘’ ಅವನ ಮನೆಯಲ್ಲಿ ಕುಟುಂಬದ ಸದಸ್ಯರನ್ನು ಹೊರತುಪಡಿಸಿ ಉಳಿದೆಲ್ಲ ಸಾಮಾನುಗಳು ಸಿನೆಮಾ ಕ್ಷೇತ್ರದ ಕೊಡುಗೆ’’ ಎಂದಿದ್ದರು ತಮಾಷೆಯಾಗಿ. ನಮ್ಮ ಬಹಳಷ್ಟು ಹಿರಿಯ ಸಿನೆಮಾ ಪತ್ರಕರ್ತರು ಹೆಸರಿಗಷ್ಟೇ ಪತ್ರಿಕೆಗಳಲ್ಲಿ ಕೆಲಸ. ಉಳಿದಂತೆ ಅವರ ಗಳಿಕೆಯ ದೊಡ್ಡ ಪಾಲು ಬರುತ್ತಿರುವುದು ಸಿನೆಮಾ, ಸೀರಿಯಲ್ ಗಳ ಕತೆ,ಸಂಭಾಷಣೆಗಳ ಬರವಣಿಗೆಯಿಂದ.
ಈ ಋಣ ಸಂದಾಯಕ್ಕಾಗಿ ಫಿಲ್ಮಿ ಪತ್ರಕರ್ತರು ಈ ನಟನಟಿಯರ larger than life ಚಿತ್ರಗಳನ್ನು ಮಾಧ್ಯಮಗಳಲ್ಲಿ ಕಟೆದು ನಿಲ್ಲಿಸುತ್ತಿರುತ್ತಾರೆ. ಅವರ ತ್ಯಾಗ, ದಾನ-ಧರ್ಮ, ಸಮಾಜಸೇವೆ, ಪರಿಸರಪ್ರೀತಿ, ಬಡವರ ಬಗೆಗಿನ ಕರುಣೆ, ಪ್ರಾಣಿ,ಪಕ್ಷಿ,ಕ್ರಿಮಿಕೀಟಗಳ ಬಗ್ಗೆ ಅವರಿಗಿರುವ ಕಾಳಜಿ ಎಲ್ಲವೂ ಅತಿರಂಜಿತವಾಗಿ ವರದಿಗಳಾಗುತ್ತವೆ. ಈ ನಟಶಿರೋಮಣಿಗಳೂ ತಮ್ಮ ಚಿತ್ರಗಳ ಪ್ರಮೋಷನ್ ಗೆ ಬಳಸುವ ಒಂದು ಪಾಲನ್ನು ಇಂತಹ ಸಮಾಜಸೇವಾ ಕಾರ್ಯಗಳಿಗೆ ನೀಡಿ, ಅದು ಪ್ರಚಾರವಾಗುವಂತೆ ನೋಡಿಕೊಂಡು, ಜಾಹೀರಾತಿಗೆ ನೀಡಬೇಕಾದ ದುಡ್ಡಿಗಿಂತ ಕಡಿಮೆ ವೆಚ್ಚದಲ್ಲಿ ಪ್ರಚಾರ ಪಡೆಯುತ್ತಿರುತ್ತಾರೆ. ಉಪೇಂದ್ರ ಅವರ ಹೊಸ ರಾಜಕೀಯ ಪಕ್ಷಕ್ಕೆ ಫಿಲ್ಮಿಪತ್ರಕರ್ತರೇ ಚಾಲನೆ ನೀಡಿದ್ದರು. ಆ ಪಕ್ಷವೇನಾಯಿತು ಎಂದು ಅವರನ್ನೇ ಈಗ ಕೇಳಬೇಕಲ್ಲಾ?
ಸಿನೆಮಾ ಒಂದು ವ್ಯಾಪಾರ, ಆದ್ದರಿಂದ ನಟ-ನಟಿಯರು ಸಮಾಜಸೇವಕರಾಗಿ ಇರಬೇಕೆಂದು ಹೇಳುವುದೇ ತಪ್ಪು. ಆದ್ದರಿಂದ ತಪ್ಪನ್ನು ಪೂರ್ಣವಾಗಿ ಅವರ ತಲೆಮೇಲೆ ಹೊರಿಸಲಾಗದು. ತಪ್ಪು ಅವರನ್ನು ರೋಲ್ ಮಾಡೆಲ್ ಗಳಾಗಿ ಬಿಂಬಿಸಲು ಹೊರಟಿರುವ ಸ್ವಾರ್ಥಿ ಪತ್ರಕರ್ತರದ್ದು.
ಹಾಗೇನಾದರೂ ನಟ-ನಟಿಯರು ಸಮಾಜಸೇವಕರಾದರೆ ಅವನ ವೃತ್ತಿಜೀವನ ಅಲ್ಲಿಗೆ ಮುಕ್ತಾಯ. ಇದಕ್ಕಾಗಿ ನಮ್ಮನಟ-ನಟಿಯರು ತಮ್ಮ ಮಾರುಕಟ್ಟೆ ಬಿದ್ದ ಮೇಲೆ ಸಮಾಜಸೇವೆಗೆ ಇಳಿಯುತ್ತಾರೆ, ಆಗಲೂ ಅವರ ಗುರಿ ಹಳ್ಳಿಗಳಲ್ಲಿರುವ ಬಡವರ ಮನೆಗಳಲ್ಲ, ಅದು ವಿಧಾನಸೌಧ ಇಲ್ಲವೆ ಸಂಸತ್ ಭವನ. #metoo ಅಭಿಯಾನದಲ್ಲಿ ತೊಡಗಿರುವ ಎಷ್ಟು ನಟ-ನಟಿಯರು ಶಬರಿ ಮಲೆ ದೇವಸ್ಥಾನ ಪ್ರವೇಶಕ್ಕೆ ಸಂಬಂಧಿಸಿದಂತೆ ಹೆಣ್ಣಿಗಾಗುತ್ತಿರುವ ಅನ್ಯಾಯ, ಅವಮಾನದ ಬಗ್ಗೆ ದನಿ ಎತ್ತಿದ್ದಾರೆ?
ಇಷ್ಟೆಲ್ಲ ಪೀಠಿಕೆಗೆ ಕಾರಣ #metoo ಅಭಿಯಾನ. ನಮ್ಮ ಹಲವಾರು ಚಳುವಳಿ, ಹೋರಾಟಗಳಿಗೆ ಚಲನಚಿತ್ರ ನಟ-ನಟಿಯರು ಜತೆ ನೀಡಿದ್ದಾರೆ. ಆದರೆ ಗೋಕಾಕ್ ಚಳುವಳಿಯ ನೇತೃತ್ವ ವಹಿಸಿದ್ದ ರಾಜ್ ಕುಮಾರ್ ಅವರನ್ನು ಹೊರತುಪಡಿಸಿದರೆ ಬೇರೆ ಯಾವ ಚಳುವಳಿ ಕೂಡಾ ನಟ-ನಟಿಯರ ನೇತೃತ್ವದಲ್ಲಿ ನಡೆದಿಲ್ಲ. ಸಾಮಾಜಿಕ, ರಾಜಕೀಯ ಹೋರಾಟಗಳಿಗೆ ಚಲನಚಿತ್ರ ನಟ-ನಟಿಯರು ಬೆಂಬಲಿಸಲಿ, ಆದರೆ ಅವರನ್ನೇ ಕೇಂದ್ರದಲ್ಲಿಟ್ಟುಕೊಂಡು, ಅವರನ್ನೆ ಶೋಷಿತರ ಪ್ರತಿನಿಧಿಗಳೆಂದು ಬಿಂಬಿಸಿಕೊಂಡು ಇಲ್ಲವೇ ಅವರದ್ದೇ ನಾಯಕತ್ವದಲ್ಲಿ ನಡೆಯುವ ಯಾವುದೇ ಸಾಮಾಜಿಕ,ರಾಜಕೀಯ ಇಲ್ಲವೆ ನೈತಿಕ ಹೋರಾಟ-ಚಳುವಳಿಗಳು ಬಹಳ ದಿನ ಬಾಳಲಾರದು. #metoo ಅಭಿಯಾನವೂ ಅಷ್ಟೆ".