ಗರ್ಭಾವಸ್ಥೆ (Pregnancy) ಎಂಬುದು ಹೆಣ್ಣಿನ ಜೀವನದ ಪ್ರಮುಖ ಘಟ್ಟ. ಈ ಸಮಯದಲ್ಲಿ ಹೆಚ್ಚು ಕಾಳಜಿ ವಹಿಸುವ ಅಗತ್ಯತೆ ಇರುತ್ತದೆ. ಈ ಸಮಯದಲ್ಲಿ ತಮ್ಮ ಆರೋಗ್ಯದ (Health) ಜೊತೆಗೆ ಮಗುವಿನ (Child) ಆರೋಗ್ಯವನ್ನು ಸಹ ನೋಡಿಕೊಳ್ಳುವುದು ಮುಖ್ಯ. ಆರೋಗ್ಯಕರ ಆಹಾರ, ಒತ್ತಡ ರಹಿತ ಜೀವನ, ವ್ಯಾಯಾಮ ಇವೆಲ್ಲದರ ಬಗ್ಗೆ ಗಮನಹರಿಸಬೇಕು. ಇನ್ನು ಈ ಕುರಿತಾಗಿ ಒಂದಿಷ್ಟು ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಗರ್ಭಾವಸ್ಥೆಯಲ್ಲಿ ಆರೋಗ್ಯದಲ್ಲಿ ಏರುಪೇರಾಗುವುದು ಸಾಮಾನ್ಯ. ಉದಾಹರಣೆಗೆ ವಾಕರಿಕೆ, ವಾಂತಿ, ತಲೆನೋವು, ಕೈ ಕಾಲು ನೋವು ಹೀಗೆ ಅನೇಕ ಸಮಸ್ಯೆಗಳಿದ್ದರು ಅವುಗಳನ್ನು ತಡೆದುಕೊಳ್ಳುವುದು ಅನಿವಾರ್ಯ. ಇನ್ನು ಗರ್ಭಾವಸ್ಥೆಯಲ್ಲಿ ಅನಗತ್ಯವಾಗಿ ಔಷಧಿ ಸೇವನೆ ಮಾಡುವುದು ಗರ್ಭಿಣಿಯರ ಆರೋಗ್ಯದ ಮೇಲೆ ಜೊತೆಗೆ ಮಗುವಿನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಹಾಗಾಗಿ ಹೆಚ್ಚು ಕಾಳಜಿ ಅವಶ್ಯಕ.
ಇನ್ನು ಕೆಲ ಮಹಿಳೆಯರು ಗರ್ಭಾವಸ್ಥೆಯ ಸಂದರ್ಭದಲ್ಲಿ ವ್ಯಾಯಾಮ ಮಾಡಲು ಹೆದರುತ್ತಾರೆ. ಆದರೆ ಇದು ತಪ್ಪು. ಗರ್ಭಿಣಿಯರು ಸ್ವಲ್ಪ ಸಮಯವಾದರೂ ವ್ಯಾಯಾಮ ಮಾಡುವುದರಿಂದ ಮಗುವಿನ ಆರೋಗ್ಯಕ್ಕೆ ಹಾಗೂ ಸುಲಭ ಹೆರಿಗೆಗೆ ಸಹಾಯ ಮಾಡುತ್ತದೆ.
ಗರ್ಭಾವಸ್ಥೆಯಲ್ಲಿ ವ್ಯಾಯಾಮ ಮಾಡುವುದರಿಂದ ಗರ್ಭಾವಸ್ಥೆಯ ಮಧುಮೇಹ ಬರುವ ಅಪಾಯ ಕಡಿಮೆಯಾಗುತ್ತದೆ. ಅಲ್ಲದೇ ನಿದ್ರೆಯ ಸಮಸ್ಯೆಯನ್ನು ಸಹ ಹೋಗಲಾಡಿಸುತ್ತದೆ. ನಿಯಮಿತ ವ್ಯಾಯಾಮ ಮಾಡಿದರೆ ಹೆರಿಗೆಯ ನಂತರ ನಿಮ್ಮ ದೇಹವು ಸುಲಭವಾಗಿ ಮೊದಲಿನಂತೆ ಆಗುತ್ತದೆ ಎಂದು ತಜ್ಞರು ಹೇಳುತ್ತಾರೆ.
ಆದರೆ ಮುಖ್ಯವಾಗಿ ಇಲ್ಲಿ ಗಮನಿಸಬೇಕಾದ ವಿಷಯವೆಂದರೆ ವ್ಯಾಯಾಮ ಮಾಡುವ ಮೊದಲು ವೈದ್ಯರ ಸಲಹೆ ಪಡೆಯುವುದು. ಕೆಲ ಮಹಿಳೆಯರಿಗೆ ಆರೋಗ್ಯ ಸಮಸ್ಯೆಗಳು ಇರುತ್ತದೆ. ಈ ಸಂದರ್ಭದಲ್ಲಿ ವ್ಯಾಯಮ ಮಾಡುವುದು ಮಗುವಿಗೆ ಅಪಾಯ ಉಂಟು ಮಾಡಬಹುದು. ಹೀಗಾಗಿ ವೈದ್ಯರ ಬಳಿ ಪರೀಕ್ಷೆ ಮಾಡಿಸಿ ಬಳಿಕ ವ್ಯಾಯಾಮಗಳನ್ನು ಆರಂಭಿಸಬಹುದು. ಗರ್ಭಾವಸ್ಥೆಯಲ್ಲಿ ಲಘು ವ್ಯಾಯಾಮ ಮಾಡುವುದು ಉತ್ತಮ.