ಕೋಲ್ಕತ್ತಾ: ಅರೇ ಇದೆಂತೀರಾ? ಹೌದು, ನೀವು ಇನ್ನು ಮುಂದೆ Whatsapp ಮೂಲಕವು ಚುನಾವಣೆಗೆ ನಾಮಪತ್ರ ಸಲ್ಲಿಸಬಹುದು. ಈಗ ಇಂತಹದ ಆಶ್ಚರ್ಯದ ಸಂಗತಿಯೊಂದಕ್ಕೆ ಕೊಲ್ಕತ್ತಾ ಹೈಕೋರ್ಟ್ ತೀರ್ಪು ಸಾಕ್ಷಿಯಾಗಿದೆ.
ಮೇ 1, 3 ಮತ್ತು 5 ರಂದು ಮೂರು ಹಂತಗಳಲ್ಲಿ ನಡೆಯಲಿರುವ ಪಶ್ಚಿಮ ಬಂಗಾಳದ ಪಂಚಾಯತ್ ಚುನಾವಣೆಗೆ ಒಂಬತ್ತು ಅಭ್ಯರ್ಥಿಗಳು Whatsapp ಮೂಲಕ ಸಲ್ಲಿಸಿರುವ ನಾಮ ಪತ್ರಗಳನ್ನು ಚುನಾವಣಾ ಆಯೋಗವು ಸ್ವೀಕರಿಸಿದೆ. ಪಶ್ಚಿಮ ಬಂಗಾಳ ರಾಜ್ಯ ಚುನಾವಣಾ ಆಯೋಗದ ಕಾರ್ಯದರ್ಶಿ ನಿಲಂಜನ್ ಶಾಂಡಿಲ್ಯ ಅವರು Whatsapp ಮೂಲಕ ಸಲ್ಲಿಸಿದ ಎಲ್ಲಾ ನಾಮ ಪತ್ರಗಳನ್ನು ಚುನಾವಣಾ ಆಯೋಗವು ಸ್ವೀಕರಿಸಿದ ಬಗ್ಗೆ ಹೈಕೋರ್ಟ್ ಗೆ ತಿಳಿಸಿದ್ದಾರೆ.
ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ-ಮಾರ್ಕ್ಸ್ ವಾದಿ ಲೆನಿನಿಸ್ಟ್ ರೆಡ್ ಸ್ಟಾರ್ ನಾಯಕ ಶರ್ಮಿಶ್ಥ ಚೌಧರಿ ಅವರು ಸಲ್ಲಿಸಿದ ಅರ್ಜಿಯನ್ನು ಜಸ್ಟಿಸ್ ಸುಬ್ರತಾ ತಾಲೂಕ್ದಾರ್ ಅವರ ಏಕಸದಸ್ಯ ನ್ಯಾಯಪೀಠವು ವಿಚಾರಣೆ ನಡೆಸಿತ್ತು. ಈ ಅರ್ಜಿಯಲ್ಲಿ ಅವರು ಬಹುತೇಕ ಅಭ್ಯರ್ಥಿಗಳು ದಕ್ಷಿಣ 24 ಪರಗನದಲ್ಲಿ ಕಾನೂನು ಸುವ್ಯವಸ್ಥೆ ಕೊರತೆಯಿಂದ ಭಾಂಗರ ತಲುಪಲು ವಿಫಲವಾಗಿದ್ದರು, ಆದ್ದರಿಂದ ಅವರು Whatsapp ಮೂಲಕ ತಮ್ಮ ಅರ್ಜಿಯನ್ನು ಸಲ್ಲಿಸಿದ್ದರು ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ.ಇದನ್ನು ವಿಚಾರಣೆ ನಡೆಸಿದ ಕೋಲ್ಕತ್ತಾ ಹೈಕೋರ್ಟ್, Whatsapp ಮೂಲಕ ಸಲ್ಲಿಸಿರುವ ನಾಮಪತ್ರಗಳನ್ನು ಸ್ವೀಕರಿಸಲು ಆದೇಶ ನೀಡಿತ್ತು, ಅದರನ್ವಯ ಚುನಾವಣಾ ಆಯೋಗ ಎಲ್ಲ ಅರ್ಜಿಗಳನ್ನು ಸ್ವೀಕರಿಸಿದೆ.