ಇಂದು ಡಿಕೆಶಿ ಜಾಮೀನು ಅರ್ಜಿ ತೀರ್ಪು ಪ್ರಕಟ

ತಮ್ಮ ಜಾಮೀನು ಅರ್ಜಿಯನ್ನು ರದ್ದು ಪಡಿಸಿದ್ದ ಜಾರಿ ನಿರ್ದೇಶನಾಲಯದ ವಿಶೇಷ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಡಿ.ಕೆ. ಶಿವಕುಮಾರ್ ದೆಹಲಿ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದರು.

Written by - Yashaswini V | Last Updated : Oct 23, 2019, 07:16 AM IST
ಇಂದು ಡಿಕೆಶಿ ಜಾಮೀನು ಅರ್ಜಿ ತೀರ್ಪು ಪ್ರಕಟ title=
File image

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ನಡೆಸುತ್ತಿರುವ ತನಿಖೆ ಎದುರಿಸುತ್ತಿರುವ ಮತ್ತು ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಸಚಿವ ಡಿ.ಕೆ. ಶಿವಕುಮಾರ್​ ಅವರ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯ ಕುರಿತ ತೀರ್ಪು ಇಂದು ಮಧ್ಯಾಹ್ನ 2.30ಕ್ಕೆ ಹೊರಬೀಳಲಿದೆ.

ತಮ್ಮ ಜಾಮೀನು ಅರ್ಜಿಯನ್ನು ರದ್ದು ಪಡಿಸಿದ್ದ ಜಾರಿ ನಿರ್ದೇಶನಾಲಯದ ವಿಶೇಷ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಡಿ.ಕೆ. ಶಿವಕುಮಾರ್ ದೆಹಲಿ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದರು. ಡಿ.ಕೆ. ಶಿವಕುಮಾರ್​ ಪರ ಹಿರಿಯ ವಕೀಲ ಅಭಿಷೇಕ್​ ಮನು ಸಿಂಘ್ವಿ ಹಾಗೂ ಜಾರಿ ನಿರ್ದೇಶನಾಲಯ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ. ನಟರಾಜ್​ ವಾದ ಮಂಡಿಸಿದ್ದರು. ದೆಹಲಿ ಹೈಕೋರ್ಟ್ ನ್ಯಾಯಾಧೀಶ ಸುರೇಶ್ ಕುಮಾರ್ ಕೈಟಾ ಈ ಅರ್ಜಿ ವಿಚಾರಣೆ ನಡೆಸಿ ಅಕ್ಟೋಬರ್ 17ರಂದು ತೀರ್ಪುನ್ನು ಕಾಯ್ದಿರಿಸಿದ್ದರು. ಇಂದು ಅವರು ತೀರ್ಪನ್ನು ಪ್ರಕಟಿಸಲಿದ್ದಾರೆ.

ಇಂದು ಡಿ.ಕೆ. ಶಿವಕುಮಾರ್ ಅವರಿಗೆ ಜಾಮೀನು ಸಿಕ್ಕರೂ ತೀರ್ಪಿನ ಆದೇಶವನ್ನು ಸಂಜೆ 5 ಗಂಟೆಯೊಳಗೆ ಜೈಲು ಅಧಿಕಾರಿಗಳಿಗೆ ನೀಡಿ ಇಂದೇ ಜೈಲಿನಿಂದ ಹೊರಬರುವುದು ಸಾಧ್ಯವಿಲ್ಲ. ನಾಳೆ ತಾವಿರುವ ತಿಹಾರ್ ಜೈಲಿನಿಂದ ಹೊರಬರಬೇಕಾಗುತ್ತದೆ. ಒಂದೊಮ್ಮೆ ದೆಹಲಿ ಹೈಕೋರ್ಟ್ ಜಾಮೀನು ನೀಡಲು ನಿರಾಕರಿಸಿದರೆ ಡಿ‌.ಕೆ. ಶಿವಕುಮಾರ್ ದೆಹಲಿಯ ಹೈಕೋರ್ಟಿನ ವಿಭಾಗೀಯ ಪೀಠ ಅಥವಾ ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಬೇಕಾಗುತ್ತದೆ. ಅದು ಕೂಡ ಇವತ್ತು ಸಾಧ್ಯವಾಗದ ಸಂಗತಿ. ನಾಳೆ ಆ ಕೆಲಸ ಮಾಡಬೇಕಾಗುತ್ತದೆ.

ದೆಹಲಿಯ ಹೈಕೋರ್ಟ್ ವಿಭಾಗೀಯ ಪೀಠದಲ್ಲಾಗಲೀ ಅಥವಾ ಸರ್ವೋಚ್ಚ ನ್ಯಾಯಾಲಯದಲ್ಲಾಗಲಿ ನಾಳೆಯೇ ಅರ್ಜಿ ವಿಚಾರಣೆ ನಡೆದು ನಾಳೆಯೇ ತೀರ್ಪು ಹೊರಬೀಳುವುದಿಲ್ಲ. ಶುಕ್ರವಾರ ಈ ಹೊಸ ಅರ್ಜಿಯ ವಿಚಾರಣೆ ನಡೆಯುವುದಿಲ್ಲ. ಶನಿವಾರದಿಂದ ಅಕ್ಟೋಬರ್ 31ರವರೆಗೆ ಎರಡೂ ನ್ಯಾಯಾಲಯಗಳಿಗೆ ರಜೆ ಇದೆ.‌ ಹಾಗಾಗಿ ಡಿ.ಕೆ. ಶಿವಕುಮಾರ್​ ಮುಂದಿನ ತಿಂಗಳವರೆಗೂ ತಮ್ಮ ಜಾಮೀನು ಅರ್ಜಿ ವಿಚಾರಣೆಗಾಗಿಯೇ ಕಾಯಬೇಕಾಗುತ್ತದೆ.

Trending News