ಮಂಡ್ಯ: ಇಂದು ನಡೆದಿರುವ ಐಟಿ ದಾಳಿಯ ಬಗ್ಗೆ ಮೊದಲೇ ತಿಳಿದಿತ್ತು, ನನ್ನ ಬಳಿ ಇರುವ ದಾಖಲೆಗಳೆಲ್ಲವೂ ಸರಿಯಾಗಿದ್ದು, ನಾನು ಯಾವುದೇ ರೀತಿ ಆತಂಕ ಪಡುವ ಅಗತ್ಯವಿಲ್ಲ ಎಂದು ಸಣ್ಣ ನೀರಾವರಿ ಸಚಿವ, ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್. ಪುಟ್ಟರಾಜು ಹೇಳಿದ್ದಾರೆ.
ಇದೊಂದು ನಿರೀಕ್ಷಿತ ಹಾಗೂ ರಾಜಕೀಯ ಪ್ರೇರಿತ ದಾಳಿ. ಚಿನಕುರಳಿಯಲ್ಲಿರುವ ನಮ್ಮ ಮನೆಯಲ್ಲಿ ನಾಲ್ವರು ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಇದಲ್ಲದೆ ಮೈಸೂರಿನಲ್ಲಿರುವ ನನ್ನ ಅಣ್ಣನ ಮಕ್ಕಳ ಮನೆಯಲ್ಲೂ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಸ್ಥಳೀಯ ಪೊಲೀಸರಿಗೆ ಯಾವುದೇ ಮಾಹಿತಿ ನೀಡದೆ ಕೇಂದ್ರ ಮೀಸಲು ಪಡೆ (ಸಿಆರ್ ಪಿಎಫ್) ಸಿಬ್ಬಂದಿಗಳ ನೆರವಿನಿಂದ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕಾಂಗ್ರೆಸ್, ಜೆಡಿಎಸ್ ನಾಯಕರನ್ನು ಟಾರ್ಗೆಟ್ ಮಾಡಿ ಈ ದಾಳಿ ನಡೆಯುತ್ತಿದೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ ಮಾಡಲು ಎಲ್ಲರಿಗೂ ಹಕ್ಕಿದೆ. ಮುಂದೆ ಏನು ಮಾಡಬೇಕು ಎಂಬುದನ್ನು ಸಭೆ ಕರೆದು ನಿರ್ಧರಿಸುತ್ತೇವೆ. ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ದುರುಪಯೋಗ ಪಡಿಸಿಕೊಳ್ಳುತ್ತಿದೆ. ಇದರ ವಿರುದ್ಧ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಸಚಿವ ಪುಟ್ಟರಾಜು ತಿಳಿಸಿದರು.