ಬೆಂಗಳೂರು: ಸೋಮವಾರ ಮಧ್ಯರಾತ್ರಿಯಿಂದಲೇ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಪ್ರಯಾಣ ದರವನ್ನು ಶೇ. 18 ರಷ್ಟು ಏರಿಸಲು ಕೆಎಸ್ಆರ್ಟಿಸಿ ನಿರ್ಧರಿಸಿತ್ತು. ಆದರೆ ಮಹತ್ವದ ಬೆಳವಣಿಗೆಯಲ್ಲಿ ಕೆಎಸ್ಆರ್ಟಿಸಿ ಬಸ್ ಪ್ರಯಾಣ ದರ ಹೆಚ್ಚಳಕ್ಕೆ ಆನುಮೋದನೆ ಆದೇಶ ತಡೆ ಹಿಡಿಯಲು ಕುಮಾರಸ್ವಾಮಿ ಸಾರಿಗೆ ಸಂಸ್ಥೆಗೆ ಸೂಚನೆ ನೀಡಿದ್ದಾರೆ.
ಸರ್ಕಾರ ತೂಗುಯ್ಯಾಲೆಯಲ್ಲಿರುವ ಹಿನ್ನೆಲೆ, ಜಾಣ ಹೆಜ್ಜೆ ಇಟ್ಟಿರುವ ಸಿಎಂ ಕುಮಾರಸ್ವಾಮಿ, ಬಸ್ ದರ ಏರಿಕೆ ನಿರ್ಧಾರವನ್ನು ತಕ್ಷಣ ಹಿಂಪಡೆದಿದ್ದಾರೆ ಎನ್ನಲಾಗುತ್ತಿದೆ. ರೈತ ಸಾಲ ಮನ್ನವೇ ಸರ್ಕಾರದ ಬೊಕ್ಕಸಕ್ಕೆ ಭಾರವಾಗಿದೆ, ಏತನ್ಮಧ್ಯೆ, ಬಸ್ ದರ ಏರಿಕೆ ನಿರ್ಧಾರವನ್ನು ತಕ್ಷಣ ಹಿಂಪಡೆದಿರುವುದು, ಸರ್ಕಾರಕ್ಕೆ ಹೊರೆಯಾದರೂ ಸಿಎಂ ಜನಮೆಚ್ಚುಂತಹ ನಿರ್ಣಯ ತೆಗೆದುಕೊಳ್ಳುತ್ತಿದ್ದಾರೆ ಎಂಬ ಅನುಕಂಪ ಗಳಿಸಲು ಈ ನಿರ್ಧಾರಕ್ಕೆ ಬರಲಾಗಿದೆ ಎನ್ನಲಾಗುತ್ತಿದೆ.
ರೈತ ಸಾಲ ಮನ್ನವೇ ಸರ್ಕಾರದ ಬೊಕ್ಕಸಕ್ಕೆ ಭಾರವಾಗಿದೆ, ಆದಾಗ್ಯೂ ಪೆಟ್ರೋಲ್ ಡಿಸೆಲ್ ಸೆಸ್ ಇಳಿಸಿ ಆದೇಶ ಹೊರಡಿಸಲಾಗಿದೆ. ಬಸ್ ದರ ಏರಿಕೆ ಬಗ್ಗೆ ಹಿಂದೆಯೇ ಚಿಂತಿಸಿದ್ದು, 18% ದರ ಏರಿಸುವ ಬಗ್ಗೆಯೂ ಸಾರಿಗೆ ಸಚಿವರೇ ತಿಳಿಸಿದ್ದರು. ಈ ಬಗ್ಗೆ
ಅಧಿಕಾರಿಗಳ ಜೊತೆ ಕೂಡ ಸಚಿವರು ಚರ್ಚೆ ನಡೆಸಿದ್ದರು.
ಈಗ ದಿಡೀರ್ ಬೆಳವಣಿಗೆಯಲ್ಲಿ ದೋಸ್ತಿ ಸರ್ಕಾರವೇ ಮುಂದುವರಿದರೆ ಮುಂದೆ ದರ ಪರಿಷ್ಕರಣೆ ಮಾಡುವ ಬಗ್ಗೆ ಚಿಂತನೆ ನಡೆಸಲಾಗಿದೆ ಎನ್ನಲಾಗುತ್ತಿದ್ದು, ಸದ್ಯ ಜನರ ಆಕ್ರೋಶಕ್ಕೆ ಗುರಿಯಾಗದಂತೆ ಎಚ್ಚರಿಕೆಯ ಹೆಜ್ಜೆ ಇಟ್ಟಿರುವ ಸಿಎಂ ರಾಜ್ಯದ ಜನರ ಅನುಕಂಪ ಗಳಿಸಲು ಮುಂದಾಗಿದ್ದಾರೆ. ಕೆಎಸ್ಆರ್ಟಿಸಿ ಬಸ್ ಪ್ರಯಾಣ ದರ ಏರಿಕೆಯನ್ನು ಕೂಡಲೇ ತಡೆಹಿಡಿಯುವಂತೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಿದ್ದಾರೆ.
ನಾಲ್ಕು ಸಾರಿಗೆ ನಿಗಮಗಳ ಪ್ರಸ್ತಾವ?
ಪ್ರತಿದಿನ ಇಂಧನ ದರ ಏರುತ್ತಿರುವ ಹಿನ್ನೆಲೆಯಲ್ಲಿ ಕಳೆದ ಮೂರು ತಿಂಗಳಲ್ಲಿ ನಿಗಮಗಳು 186 ಕೋಟಿ ರೂ. ನಷ್ಟ ಅನುಭವಿಸಿವೆ. ಹೀಗಾಗಿ ದರ ಏರಿಕೆ ಅನಿವಾರ್ಯ ವಾಗಿದೆ. ಕೆಎಸ್ಆರ್ಟಿಸಿ, ಬಿಎಂಟಿಸಿ, ವಾಯುವ್ಯ ಮತ್ತು ಈಶಾನ್ಯ ಸಾರಿಗೆಗಳು ಮೂರು ತಿಂಗಳ ಹಿಂದೆಯೇ ಶೇ. 18 ರಷ್ಟು ಪ್ರಯಾಣ ದರ ಹೆಚ್ಚಿಸುವಂತೆ ಪ್ರಸ್ತಾವ ಸಲ್ಲಿಸಿದ್ದವು. ಆದರೆ ಪ್ರಯಾಣಿಕರಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಈವರೆಗೂ ಪ್ರಸ್ತಾವವನ್ನು ತಡೆ ಹಿಡಿದಿದ್ದೆವು. ಆದರೆ ಈಗ ದರ ಏರಿಕೆ ಅನಿವಾರ್ಯವಾಗಿದೆ. ಆದರೆ ಜನರಿಗೆ ತೊಂದರೆಯಾಗದ ರೀತಿಯಲ್ಲಿ ಏರಿಕೆ ಮಾಡಲು ಚಿಂತಿಸುತ್ತಿದ್ದೇವೆ ಎಂದು ಸಾರಿಗೆ ಸಚಿವರು ತಿಳಿಸಿದ್ದರು.
2014ರ ಮೇ ತಿಂಗಳಲ್ಲಿ ದರ ಹೆಚ್ಚಳ ಮಾಡಲಾಗಿತ್ತು, ಬಳಿಕ 2015ರಲ್ಲಿ ಶೇ. 2 ರಷ್ಟು ದರ ಕಡಿಮೆ ಮಾಡಿದ್ದ ಸಾರಿಗೆ ನಿಗಮ. ಈಗ ತೈಲ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಸೋಮವಾರ(ಸೆ.17) ಮಧ್ಯರಾತ್ರಿಯಿಂದಲೇ ಟಿಕೇಟ್ ಮೇಲೆ ಶೇ. 18 ರಷ್ಟು ದರ ಹೆಚ್ಚಿಸಲು ನಿರ್ಧರಿಸಲಾಗಿತ್ತು.