ನವದೆಹಲಿ: ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಕಾಂಗ್ರೆಸ್ ಸಂಸದ ವಿ.ಎಸ್. ಉಗ್ರಪ್ಪ ಇದು ಜ್ಯಾತ್ಯಾತೀತ ಮತ್ತು ಕೋಮುವಾದಿ ಶಕ್ತಿಗಳ ನಡುವಿನ ಜಯ ಎಂದು ಹೇಳಿದರು.
ನವದೆಹಲಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ವಿ.ಎಸ್. ಉಗ್ರಪ್ಪ, ಪಕ್ಷವು ನನ್ನ ಮೇಲೆ ವಿಶ್ವಾಸವಿಟ್ಟು ನನಗೆ ಈ ಜವಾಬ್ದಾರಿ ನೀಡಿದೆ ಅದಕ್ಕಾಗಿ ನಾನು ಚಿರಋಣಿ. ಈ ಗೆಲುವು ಮೊದಲನೇಯದಾಗಿ ಮತದಾರ ಮತ್ತು ಸಿದ್ಧಾಂತದ ಜಯ.
ಚುನಾವಣೆಗೂ ಮೊದಲೇ ನಾವು ಇದನ್ನು ಸೆಮಿಫೈನಲ್ ಎಂದು ಹೇಳಿದ್ದೆವು. ಬಹುಶಃ ಮುಂಬರುವ ಲೋಕಸಭಾ ಚುನಾವಣೆಗೆ ಇದು ದಿಕ್ಸೂಚಿಯಾಗಲಿದೆ. 2019 ಲೋಕಸಭಾ ಚುನಾವಣೆಯಲ್ಲಿ ಜಿಎಸ್ಟಿ, ರಫೇಲ್, ರೂಪಾಯಿ ಮೌಲ್ಯ ಕುಸಿತ. ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಪ್ರಮುಖವಾಗಲಿದೆ ಎಂದರು.
ಮೊಳಕಾಲ್ಮೂರು ವಿಧಾನಸಭಾ ಚುನಾವಣೆಯಲ್ಲಿ ಶ್ರೀರಾಮುಲು ಗೆಲುವು ಸಾಧಿಸಿದ್ದ ಹಿನ್ನೆಲೆಯಲ್ಲಿ ಬಳ್ಳಾರಿ ಸಂಸದ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು.
ನಂತರ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ವಿ.ಎಸ್. ಉಗ್ರಪ್ಪ ಅವರನ್ನು ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಸಿತ್ತು. ಹಲವು ವರ್ಷಗಳಿಂದ ಬಳ್ಳಾರಿಯನ್ನು ಭದ್ರ ಕೋಟೆ ಮಾಡಿಕೊಂಡಿದ್ದ ಬಿಜೆಪಿಗೆ ಪ್ರತ್ಯುತ್ತರ ನೀಡಿರುವ ಕಾಂಗ್ರೆಸ್ ಎರಡು ಲಕ್ಷ ಮತಗಳ ಅಂತರದಿಂದ ಜಯಭೇರಿ ಬಾರಿಸಿತು. ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪ 5,54,139 ಮತ ಪಡೆದು ಗೆಲುವು ಸಾಧಿಸಿದ್ದರೆ, ಬಿಜೆಪಿಯ ಜೆ.ಶಾಂತಾ 3,39,313 ಮತ ಗಳಿಸಿ ಪರಾಜಯಗೊಂಡರು.
1951ರಿಂದ 2000ನೇ ಇಸವಿವರೆಗೆ ಬಳ್ಳಾರಿ ಕ್ಷೇತ್ರ ಕಾಂಗ್ರೆಸ್ ಪಕ್ಷದ ಭದ್ರ ಕೋಟೆಯಾಗಿತ್ತು. 2004ರಲ್ಲಿ ಬಿಜೆಪಿ ಅಭ್ಯರ್ಥಿ ಗಣಿಧಣಿ ಗಾಲಿ ಜನಾರ್ದನ ರೆಡ್ಡಿ ಗೆಲುವು ಸಾಧಿಸಿ ಕಾಂಗ್ರೆಸ್ ಕೋಟೆಗೆ ಲಗ್ಗೆ ಇಟ್ಟಿದ್ದರು. ತದನಂತರ 2009ರಲ್ಲಿ ರೆಡ್ಡಿ ಸಹೋದರಿ ಜೆ.ಶಾಂತಾ ಬಿಜೆಪಿ ಸಂಸದೆಯಾಗಿ ಆಯ್ಕೆಯಾಗಿದ್ದರು, 2014ರಲ್ಲಿ ರೆಡ್ಡಿ ಆಪ್ತ ಗೆಳೆಯ ಬಿ.ಶ್ರೀರಾಮುಲು ಬಿಜೆಪಿಯ ಸಂಸದರಾಗಿದ್ದರು.