"ಬಿಜೆಪಿಯ ಕುತಂತ್ರಕ್ಕೆ ಸುಪ್ರೀಂ ಕೋರ್ಟ್‌ ಕಪಾಳಮೋಕ್ಷ ಮಾಡಿದೆ"

ವಿಪಕ್ಷಗಳನ್ನು ಒಂದಿಲ್ಲೊಂದು ರೀತಿಯಲ್ಲಿ ದಮನಿಸಿ, ತನಗೆ ಅನುಕೂಲವಾಗುವ ರೀತಿಯಲ್ಲಿ ವ್ಯವಸ್ಥೆಯನ್ನು ರೂಪಿಸಿಕೊಳ್ಳುವ ಬಿಜೆಪಿಯ ಕುತಂತ್ರಕ್ಕೆ ಸುಪ್ರೀಂ ಕೋರ್ಟ್‌ ಕಪಾಳಮೋಕ್ಷ ಮಾಡಿದೆ ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

Written by - Prashobh Devanahalli | Edited by - Manjunath N | Last Updated : Feb 15, 2024, 11:23 PM IST
  • ಸುಪ್ರೀಂ ಕೋರ್ಟ್‌ ಸಹ ತನ್ನ ಇಂದಿನ ತೀರ್ಪಿನಲ್ಲಿ ಇಂತಹ ಸಾಧ್ಯತೆಯನ್ನು ಅಲ್ಲಗಳೆಯಲಾಗದು ಎಂದಿದೆ.
  • ಇದು ಕೊಡುಕೊಳ್ಳುವಿಕೆಗೆ ಕಾರಣವಾಗಬಹುದಾದ ಹಿತಾಸಕ್ತಿಗಳನ್ನು ಕಾಯುವ ಸಾಧ್ಯತೆಯ ಆತಂಕದತ್ತ ಬೆರಳು ಮಾಡಿದೆ.
  • ಇದೇ ವೇಳೆ, ಯೋಜನೆಯು ಮಾಹಿತಿ ಹಕ್ಕು ಹಾಗೂ ಮತದಾರರ ಹಕ್ಕಿನ ಉಲ್ಲಂಘನೆ ಎನ್ನುವುದನ್ನು ಸ್ಪಷ್ಟಗೊಳಿಸಿದೆ.
 "ಬಿಜೆಪಿಯ ಕುತಂತ್ರಕ್ಕೆ ಸುಪ್ರೀಂ ಕೋರ್ಟ್‌ ಕಪಾಳಮೋಕ್ಷ ಮಾಡಿದೆ" title=

ಬೆಂಗಳೂರು: ವಿಪಕ್ಷಗಳನ್ನು ಒಂದಿಲ್ಲೊಂದು ರೀತಿಯಲ್ಲಿ ದಮನಿಸಿ, ತನಗೆ ಅನುಕೂಲವಾಗುವ ರೀತಿಯಲ್ಲಿ ವ್ಯವಸ್ಥೆಯನ್ನು ರೂಪಿಸಿಕೊಳ್ಳುವ ಬಿಜೆಪಿಯ ಕುತಂತ್ರಕ್ಕೆ ಸುಪ್ರೀಂ ಕೋರ್ಟ್‌ ಕಪಾಳಮೋಕ್ಷ ಮಾಡಿದೆ ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ರಿಕಾ ಹೇಳಿಕೆ:

ಚುನಾವಣಾ ಬಾಂಡ್‌ಗಳು ಅಸಾಂವಿಧಾನಿಕ ಎಂದು ಐವರು ನ್ಯಾಯಮೂರ್ತಿಗಳ ಸುಪ್ರೀಂ ಕೋರ್ಟ್‌ ಪೀಠ ಇಂದು ನೀಡಿರುವ ತೀರ್ಪು ಪ್ರಜಾತಂತ್ರದಲ್ಲಿ ಪಾರದರ್ಶಕತೆಯನ್ನು ಮರುಸ್ಥಾಪಿಸುವ ನಿಟ್ಟಿನಿಂದ ಐತಿಹಾಸಿಕವಾಗಿದೆ. ಕ್ರೋನಿ ಬಂಡವಾಳಿಗರಿಂದ ಚುನಾವಣೆಗಾಗಿ ದೇಣಿಗೆ ಸಂಗ್ರಹಿಸುವ ದುರುದ್ದೇಶದಿಂದಲೇ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಜಾರಿಗೆ ತಂದಿದ್ದ ಈ ಚುನಾವಣಾ ಬಾಂಡ್ ಗಳು ಅಸಾಂವಿಧಾನಿಕವಾದುದು ಮಾತ್ರವಲ್ಲ ಇದರಿಂದ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಮಾಹಿತಿ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಅತ್ಯಂತ ಸ್ವಾಗತಾರ್ಹವಾದುದು. 

ಚುನಾವಣಾ ವ್ಯವಸ್ಥೆಯ ಸುಧಾರಣೆಯಲ್ಲಿ ಇದೊಂದು ದಿಟ್ಟ ಕ್ರಮವಾಗಿದೆ.ಕೇಂದ್ರದ ಬಿಜೆಪಿ ಸರ್ಕಾರ 2019ರ  ಲೋಕಸಭಾ ಚುನಾವಣೆಯ ಪೂರ್ವದಲ್ಲಿ  ಜಾರಿಗೆ ತಂದಿದ್ದ ಈ ಚುನಾವಣಾ ಬಾಂಡ್ ಗಳು ಲಂಚದ ಮತ್ತೊಂದು ರೂಪವಾಗಿತ್ತು. ವಿತ್ತೀಯ ಕಾಯಿದೆಯ ಸ್ವರೂಪದಲ್ಲಿ ಚುನಾವಣಾ ಬಾಂಡ್‌ಗಳನ್ನು ತಂದಿದ್ದು ಹಾಗೂ ಇದಕ್ಕಾಗಿ ಸುಮಾರು ಐದು ಕಾಯಿದೆಗಳನ್ನು ತಿದ್ದುಪಡಿ ಮಾಡಲಾಗಿತ್ತು. ಇದೀಗ ಇದೆಲ್ಲವೂ ರದ್ದುಗೊಂಡಿದೆ. ಚುನಾವಣಾ ಬಾಂಡ್‌ಗಳನ್ನು ಜಾರಿಗೆ ತಂದಿದ್ದರ ಹಿಂದೆ ದುರುದ್ದೇಶವಿರುವುದನ್ನು ಕಾಂಗ್ರೆಸ್‌ ಪಕ್ಷ ಆರಂಭದಿಂದಲೂ ಸ್ಪಷ್ಟವಾಗಿ ಹೇಳಿತ್ತು. ಇದೀಗ ಸುಪ್ರೀಂಕೋರ್ಟ್ ಈ ವಿರೋಧಕ್ಕೆ ಮಾನ್ಯತೆ ನೀಡಿದೆ.

ಇದು ಬಂಡವಾಳಶಾಹಿ ಶಕ್ತಿಗಳು ಹಾಗೂ ಆಡಳಿತಾರೂಢ ಸರ್ಕಾರದ ನಡುವಿನ ಕೊಡುಕೊಳ್ಳುವಿಕೆಗೆ ಕಾರಣವಾಗುತ್ತದೆ. ಚುನಾವಣಾ ಬಾಂಡ್‌ ಯೋಜನೆಯಡಿ ರಾಜಕೀಯ ಪಕ್ಷಗಳಿಗೆ ಅನಾಮಧೇಯವಾಗಿ ಯಾವುದೇ ಮಿತಿ ಇಲ್ಲದೆ ದೇಣಿಗೆ ನೀಡಬಹುದಾಗಿದ್ದರಿಂದ ಬಂಡವಾಳಶಾಹಿ ಶಕ್ತಿಗಳು ಹಾಗೂ ಆಡಳಿತಾರೂಢ ಸರ್ಕಾರದ ನಡುವೆ ಕೊಡುಕೊಳ್ಳುವಿಕೆಯ ಸಂಬಂಧವೇರ್ಪಡುತ್ತದೆ ಎನ್ನುವ ಆತಂಕವನ್ನು ನಮ್ಮ ಪಕ್ಷ ಹಾಗೂ ಪ್ರಜ್ಞಾವಂತ ನಾಗರಿಕರು, ವಿವಿಧ ಸಂಘಟನೆಗಳು ಎತ್ತಿದ್ದವು.

ಸುಪ್ರೀಂ ಕೋರ್ಟ್‌ ಸಹ ತನ್ನ ಇಂದಿನ ತೀರ್ಪಿನಲ್ಲಿ ಇಂತಹ ಸಾಧ್ಯತೆಯನ್ನು ಅಲ್ಲಗಳೆಯಲಾಗದು ಎಂದಿದೆ. ಇದು ಕೊಡುಕೊಳ್ಳುವಿಕೆಗೆ ಕಾರಣವಾಗಬಹುದಾದ ಹಿತಾಸಕ್ತಿಗಳನ್ನು ಕಾಯುವ ಸಾಧ್ಯತೆಯ ಆತಂಕದತ್ತ ಬೆರಳು ಮಾಡಿದೆ. ಇದೇ ವೇಳೆ, ಯೋಜನೆಯು ಮಾಹಿತಿ ಹಕ್ಕು ಹಾಗೂ ಮತದಾರರ ಹಕ್ಕಿನ ಉಲ್ಲಂಘನೆ ಎನ್ನುವುದನ್ನು ಸ್ಪಷ್ಟಗೊಳಿಸಿದೆ. ಸುಪ್ರೀಂ ಕೋರ್ಟ್‌ ತೀರ್ಪು ಕೇಂದ್ರ ಸರ್ಕಾರದ ಕರಾಳ ಸಂಚಿಗೆ ಹಿಡಿದ ಕನ್ನಡಿಯಾಗಿದ್ದು ಕೇಂದ್ರದ ಗುಪ್ತ ಕಾರ್ಯಸೂಚಿಯ ಮೇಲೆ ಮಾಡಿರುವ ಗದಾಪ್ರಹಾರವಾಗಿದೆ.

ಈಗಾಗಲೇ ಚುನಾವಣಾ ಬಾಂಡ್ ಗಳನ್ನು ಖರೀದಿಸಿದವರ ಸಂಪೂರ್ಣ ವಿವರವನ್ನು ಹದಿನೈದು ದಿನಗಳೊಳಗೆ ಭಾರತೀಯ ಸ್ಟೇಟ್ ಬ್ಯಾಂಕ್ ಬಹಿರಂಗ ಪಡಿಸಬೇಕೆಂದು ಹೇಳಿದೆ. ಇದರಿಂದ ಬಿಜೆಪಿಯ ಕಪಾಟಿನ ಒಳಗಿರುವ ಹಲವಾರು ಅಸ್ಥಿಪಂಜರಗಳು ಹೊರಬೀಳಲಿವೆ. ಸುಪ್ರೀಂಕೋರ್ಟ್ ಸರಿಯಾಗಿ ಗುರುತಿಸಿರುವಂತೆ ಇದು ಕ್ರೋನಿ ಬಂಡವಾಳಿಗರು ಮತ್ತು ಬಿಜೆಪಿಯಂತ ರಾಜಕೀಯ ಪಕ್ಷಗಳ ನಡುವಿನ ಒಂದು ಅಪವಿತ್ರ ಮೈತ್ರಿ ಆಗಿತ್ತು. ತಾನು ಅಧಿಕಾರಕ್ಕೆ ಬಂದ ನಂತರ ನೆರವಾಗುವ ಭರವಸೆ ನೀಡಿಯೇ ಉದ್ಯಮಿಗಳಿಂದ ಚುನಾವಣಾ ಬಾಂಡ್ ಗಳ ಮೂಲಕ ಹಣ ಸಂಗ್ರಹಿಸಲಾಗುತ್ತಿತ್ತು. 

ಚುನಾವಣಾ ಬಾಂಡ್ ಮೂಲಕ ಬಂದ ದೇಣಿಗೆಯ ಶೇಕಡಾ 90ರಷ್ಟು ಭಾಗ ಭಾರತೀಯ ಜನತಾ ಪಕ್ಷಕ್ಕೆ ಸಂದಾಯವಾಗುತ್ತಿದ್ದ ಕಾರಣ ಇದು ಯಾರ ನೆರವಿಗಾಗಿ ತಂದ ಯೋಜನೆ ಎನ್ನುವುದು ಸ್ಪಷ್ಟವಾಗಿತ್ತು. ಸಾಂವಿಧಾನಿಕ ಸಂಸ್ಥೆಗಳು ತಮ್ಮ ಸ್ವಾಯತ್ತತೆಯನ್ನು ಕಳೆದುಕೊಳ್ಳುತ್ತಿದೆ ಎಂಬ ಆತಂಕದ ನಡುವೆಯೇ ಸುಪ್ರೀಂ ಕೋರ್ಟ್ ಇಂತಹದ್ದೊಂದು ತೀರ್ಪು ನೀಡಿರುವುದು ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೇಲೆ ಭರವಸೆ ಮೂಡಿಸಿದೆ.

ಕಪ್ಪು ಹಣ ನಿಯಂತ್ರಿಸಲು ಚುನಾವಣಾ ಬಾಂಡ್‌ ಯೋಜನೆಯಿಂದ ಸಾಧ್ಯ ಎನ್ನುವ ಕೇಂದ್ರ ಸರ್ಕಾರದ ವಾದವನ್ನು ಸುಪ್ರೀಂ ಕೋರ್ಟ್ ಸಾರಾಸಗಟಾಗಿ‌ ತಿರಸ್ಕರಿಸಿದ್ದು, ಕಪ್ಪು ಹಣ ನಿಯಂತ್ರಣಕ್ಕೆ ಅದಕ್ಕಿಂತ ಉತ್ತಮ ವಿಧಾನಗಳಿವೆ ಎಂದು ಹೇಳಿರುವುದು ಕೇಂದ್ರದ ಪೊಳ್ಳು ವಾದಗಳಿಗೆ ಮಾಡಿರುವ ತಕ್ಕ ಶಾಸ್ತಿಯಾಗಿದೆ. ಅಲ್ಲದೆ, ಇದು ಆರ್ಥಿಕ ಅಸಮಾನತೆಯಿಂದ ಅಸಮ ರಾಜಕೀಯ ಮೇಲಾಟಗಳಿಗೆ ಕಾರಣವಾಗುತ್ತದೆ ಎಂದು ನ್ಯಾಯಾಲಯವು ಹೇಳಿರುವುದು ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಎಂತಹ ಚುನಾವಣಾ ರಾಜಕಾರಣದ ವ್ಯವಸ್ಥೆಯನ್ನು ಸೃಷ್ಟಿಸಲು ಮುಂದಾಗಿತ್ತು ಎನ್ನುವುದನ್ನು ಸ್ಪಷ್ಟಪಡಿಸಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News