ಪ್ರಮಾಣವಚನ ಸ್ವೀಕಾರದ ಅನುಭವ ಹಂಚಿಕೊಂಡ ಮಂಡ್ಯ ಸಂಸದೆ ಸುಮಲತಾ ಅಂಬರೀಶ್

ಇಪ್ಪತ್ತು ವರ್ಷಗಳ ಹಿಂದೆ ಅಂಬರೀಶ್ ಸಂಸದರಾದಾಗ ಸಂಸತ್ತಿಗೆ ಬಂದಿದ್ದೆ. ಗ್ಯಾಲರಿಯಲ್ಲಿ ಕೂತು ಅಂಬರೀಶ್ ಪ್ರಮಾಣ ವಚನ ಸ್ವೀಕರಿಸುವುದನ್ನು ನೋಡಿದ್ದೆ. ನಾನು ಕೂಡ ಹೀಗೆ ಒಂದು ದಿನ ಪ್ರಮಾಣ ವಚನ ಸ್ವೀಕರಿಸುತ್ತೇನೆ ಅಂತಾ ಕನಸಿನಲ್ಲೂ ಅಂದುಕೊಂಡಿರಲಿಲ್ಲ.

Last Updated : Jun 18, 2019, 08:14 AM IST
ಪ್ರಮಾಣವಚನ ಸ್ವೀಕಾರದ ಅನುಭವ ಹಂಚಿಕೊಂಡ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ title=
Pic Courtesy: Twitter

ನವದೆಹಲಿ: ನಾನು ಸಂಸದೆಯಾಗಿ ಪ್ರಮಾಣವಚನ ಸ್ವೀಕರಿಸಿದೆ ಎನ್ನುವುದನ್ನು ನನ್ನಿಂದಲೇ ನಂಬಲು ಸಾಧ್ಯವಾಗುತ್ತಿಲ್ಲ. ಈಗಲೂ ಇದು ಕನಸಾಗಿರಬಹುದು ಎನಿಸುತ್ತಿದೆ ಎಂದರು ಮಂಡ್ಯ ಲೋಕಸಭೆಯ ಪಕ್ಷೇತರ ಸಂಸದೆ ಸುಮಲತಾ.

ಸೋಮವಾರ ಸಂಸದರಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಇದೊಂಥರಾ ಮೊದಲ ಬಾರಿ ಶಾಲೆಗೆ ಹೋದ ಅನುಭವದಂತಿತ್ತು. ಎಲ್ಲವೂ ಹೊಸತು ಎನಿಸುತ್ತಿದೆ. ಇಪ್ಪತ್ತು ವರ್ಷಗಳ ಹಿಂದೆ ಅಂಬರೀಶ್ ಸಂಸದರಾದಾಗ ಸಂಸತ್ತಿಗೆ ಬಂದಿದ್ದೆ. ಗ್ಯಾಲರಿಯಲ್ಲಿ ಕೂತು ಅಂಬರೀಶ್ ಪ್ರಮಾಣ ವಚನ ಸ್ವೀಕರಿಸುವುದನ್ನು ನೋಡಿದ್ದೆ. ನಾನು ಕೂಡ ಹೀಗೆ ಒಂದು ದಿನ ಪ್ರಮಾಣ ವಚನ ಸ್ವೀಕರಿಸುತ್ತೇನೆ ಅಂತಾ ಕನಸಿನಲ್ಲೂ ಅಂದುಕೊಂಡಿರಲಿಲ್ಲ. ಈಗಲೂ ಇದು ಕನಸು ಅಂತಾನೇ ಭಾಸವಾಗುತ್ತಿದೆ' ಎಂದು ತಮಗಾದ ಅನುಭವವನ್ನು ಹಂಚಿಕೊಂಡರು.

ಮೊದಲ ಬಾರಿ ಶಾಲೆಗೆ ಹೋದಂತಾಗಿದೆ ಎಂದ ಅವರು ಅದೇ ರೀತಿ ಮೊದಲ ಬಾರಿ ಸಂಸದೆಯಾಗಿರುವುದರಿಂದ‌ ಬಹಳಷ್ಟು ಕಲಿಯುವುದಿದೆ. ಸಂಸತ್ ಕಲಾಪಗಳ ಪ್ರಕ್ರಿಯೆಯನ್ನು ಕಲಿತು ನನ್ನ ಕೆಲಸವನ್ನು ಮಾಡುತ್ತೇನೆ ಎಂದು ಸಾಕ್ಷಾತ್ ವಿದ್ಯಾರ್ಥಿಯಂತೆ ಹೇಳಿಕೊಂಡರು. ಆದರೆ ಕಾವೇರಿ ವಿಚಾರ ಬಂದಾಗ, ಅದು 'ನ್ಯಾಯಾಲಯದಲ್ಲಿದೆ ನಾನು ಅದರ ಬಗ್ಗೆ ಮಾತನಾಡುವುದಿಲ್ಲ' ಎಂದರು. ಈ ವಿವಾದ ಸಂಸದರಿಂದ ಬಗೆಹರಿಯುವಂಥದ್ದಲ್ಲ, ರಾಜ್ಯ ಸರ್ಕಾರ ಕಾನೂನು ಹೋರಾಟದ ಮೂಲಕ ಮಾಡಬೇಕಿದೆ ಎಂಬುದನ್ನೂ ಹೇಳಿದರು.

ನಾನು ಎಲ್ಲಾ ವಿಚಾರದಲ್ಲೂ ಮಂಡ್ಯದ ಪರವಾಗಿ ಕೆಲಸ ಮಾಡುತ್ತೇನೆ. ಮೊದಲು ಕುಡಿಯುವ ನೀರಿಗೆ ಆದ್ಯತೆ ಕೊಡಬೇಕಿದೆ. ಕೆರೆಗಳ ಹೂಳು ಎತ್ತುವುದು ಮತ್ತು ರಸ್ತೆಗೆ ಆದ್ಯತೆ ನೀಡಬೇಕಿದೆ. ಕಬ್ಬಿಗೆ ಬೆಂಬಲ ಬೆಲೆ ಕೊಡಿಸಬೇಕಾಗಿದೆ. ಇವುಗಳ ಬಗ್ಗೆ ಈಗಾಗಲೇ ರಾಜ್ಯದಿಂದ ಕೇಂದ್ರದಲ್ಲಿ ಸಚಿವರಾಗಿರುವ ಡಿ.ವಿ. ಸದಾನಂದಗೌಡರ ಜೊತೆ ಚರ್ಚಿಸಿದ್ದೇನೆ. ಕೇಂದ್ರ ಸರ್ಕಾರದ ಮೂಲಕ ಸಮಸ್ಯೆಗಳನ್ನು ಬಗೆಹರಿಸುವ ಪ್ರಯತ್ನ ಮಾಡುತ್ತೇನೆ ಎಂದ ಅವರು ಮಂಡ್ಯದಲ್ಲಿ ಜನರು ಶಾಸಕರಿಗೂ ಮತ ನೀಡಿದ್ದಾರೆ.‌ ಶಾಸಕರ ವ್ಯಾಪ್ತಿಯಲ್ಲಿ ಅವರು ಕೆಲಸ ಮಾಡಬೇಕು ಎಂದು ಹೇಳಿದರು.

Trending News