ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಸುಮಲತಾ ಅಂಬರೀಶ್ ಇಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾದರು.
ಮಂಡ್ಯ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸುಮಲತಾ ಅವರಿಗೆ ಬಿಜೆಪಿ ಅಧಿಕೃತವಾಗಿ ಬೆಂಬಲ ಘೋಷಿಸಿರುವ ಹಿನ್ನೆಲೆಯಲ್ಲಿ, ಡಾಲರ್ಸ್ ಕಾಲೋನಿಯಲ್ಲಿರುವ ಯಡಿಯೂರಪ್ಪ ನಿವಾಸದಲ್ಲಿಂದು ಅವರನ್ನು ಭೇಟಿಯಾಗಿ ಸುಮಲತಾ ಅಂಬರೀಶ್ ಧನ್ಯವಾದ ಸಲ್ಲಿಸಿದರು.
ನಿನ್ನೆಯಷ್ಟೇ ಅಂಬರೀಶ್ ಅವರ ನಾಲ್ಕನೇ ತಿಂಗಳ ಪುಣ್ಯ ತಿಥಿ ಅಂಗವಾಗಿ ಕಂಠೀರವ ಸ್ಟುಡಿಯೋದಲ್ಲಿ ಅಂಬರೀಶ್ ಅವರ ಸಮಾಧಿಗೆ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ್ದ ಸುಮಲತಾ, ಬಿಜೆಪಿ ಬೆಂಬಲ ನೀಡುವ ಬಗ್ಗೆ ಅಧಿಕೃತ ಮಾಹಿತಿ ಇರಲಿಲ್ಲ. ಆದರೀಗ ಬಿಜೆಪಿ ಬಹಿರಂಗವಾಗಿ ಬೆಂಬಲ ಘೋಷಣೆ ಮಾಡಿರುವುದು ಮತ್ತಷ್ಟು ಬಲ ಬಂದಂತಾಗಿದೆ. ಜೊತೆಗೆ ಕಾಂಗ್ರೆಸ್ ನಾಯಕರ ಬೆಂಬಲವೂ ಇದೆ. ಸದ್ಯದಲ್ಲೇ ಬಿಜೆಪಿ ಮುಖಂಡರನ್ನು ಭೇಟಿ ಮಾಡಿ ಧನ್ಯವಾದ ತಿಳಿಸುತ್ತೇನೆ ಎಂದಿದ್ದರು.
ಜನಾಭಿಪ್ರಾಯಕ್ಕೆ ಮನ್ನಣೆ:
ಇದೇ ವೇಳೆ ಚುನಾವಣೆಯಲ್ಲಿ ಗೆದ್ದರೆ ಬಿಜೆಪಿ ಸೇರುತ್ತಿರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸುಮಲತಾ, ಜನರ ಅಭಿಲಾಷೆಯಂತೆ ಜನರಿಗಾಗಿ ನಾನು ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ. ಅಂತೆಯೇ ಯಾವ ಪಕ್ಷಕ್ಕೆ ಸೇರಬೇಕು ಎಂಬುದನ್ನೂ ಜನರ ಅಭಿಪ್ರಾಯ ಪಡೆದೇ ನಿರ್ಧರಿಸುತ್ತೇನೆ ಎಂದಿದ್ದಾರೆ.