ಏಪ್ರಿಲ್ ತಿಂಗಳೊಳಗೆ "ರಾಜ್ಯ ಸರ್ಕಾರದ ಭವಿಷ್ಯ"... ಪ್ರಧಾನಿ ಮೋದಿ ಮಾಡಲಿದ್ದಾರೆ ನಿರ್ಧಾರ..!

ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಗೆ ಇನ್ನೊಂದೇ ವರ್ಷ ಬಾಕಿ ಉಳಿದಿದ್ದು, ಈ ಸಂದರ್ಭದಲ್ಲಿ ಭ್ರಷ್ಟಾಚಾರ ಆರೋಪ ಎದುರಿಸಲು ಕಷ್ಟವಾಗಲಿದೆ.  

Written by - Prashobh Devanahalli | Last Updated : Apr 24, 2022, 02:35 PM IST
  • ರಾಜ್ಯ ಸರ್ಕಾರದ ಭವಿಷ್ಯ ಕುರಿತು ಪ್ರಧಾನಿ ಮೋದಿ ನಿರ್ಧಾರ
  • ಸಂಪುಟ ವಿಸ್ತರಣೆ-ಪುನರ್ ರಚನೆ ಬಗ್ಗೆ ತೀರ್ಮಾನ
  • ಬಿಜೆಪಿ ಪಾಳಯದಲ್ಲಿ ಗುಸು ಗುಸು ಚರ್ಚೆ
ಏಪ್ರಿಲ್ ತಿಂಗಳೊಳಗೆ "ರಾಜ್ಯ ಸರ್ಕಾರದ ಭವಿಷ್ಯ"... ಪ್ರಧಾನಿ ಮೋದಿ ಮಾಡಲಿದ್ದಾರೆ  ನಿರ್ಧಾರ..! title=
Basavaraja Bommai

ಬೆಂಗಳೂರು: ಏಪ್ರಿಲ್ ತಿಂಗಳೊಳಗೆ ಅಥವಾ ಮೇ ಮೊದಲ ವಾರದಲ್ಲಿ ರಾಜ್ಯ ಸರ್ಕಾರದ ಭವಿಷ್ಯದ ಕುರಿತು ಪ್ರಧಾನಿ ಮೋದಿ ನಿರ್ಧಾರ ಮಾಡಲಿದ್ದಾರೆ. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಕೆ ಹಾಗೂ ಸಂಪುಟ ವಿಸ್ತರಣೆ-ಪುನರ್ ರಚನೆ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಬಿಜೆಪಿ ಪಾಳಯದಲ್ಲಿ ಗುಸು ಗುಸು ಚರ್ಚೆ ಹೆಚ್ಚಾಗಿದೆ.

ಇದನ್ನು ಓದಿ: ಶೀಘ್ರವೇ ಕೊರೊನಾ ಮಾರ್ಗಸೂಚಿ ಬಿಡುಗಡೆ ಮಾಡಲಿರುವ ರಾಜ್ಯ ಸರ್ಕಾರ

40% ಕಮಿಷನ್ ಆರೋಪ- ಸಂತೋಷ್ ಆತ್ಮಹತ್ಯೆ: ಕಮಲ ನಾಯಕರ ಕಣ್ಣು ಕೆಂಪು!
ರಾಜ್ಯ ಸರ್ಕಾರ ಅಭಿವೃದ್ಧಿ ಯೋಜನೆಗಳ ಟೆಂಡರ್ ನೀಡುವಲ್ಲಿ 40% ಕಮಿಷನ್ ಪಡೆದು ಭ್ರಷ್ಟಾಚಾರ ನಡೆಸುತ್ತಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ಪೂರಕವಾಗಿ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಇದೀಗ ರಾಜ್ಯ ಸರ್ಕಾರಕ್ಕೆ ಭಾರೀ ಉರುಳಾಗಿ ಪರಿಣಮಿಸಿದೆ. ಈ ಪ್ರಕರಣದಿಂದ ರಾಜ್ಯ ಸರ್ಕಾರ ಬಿಜೆಪಿ ರಾಷ್ಟ್ರೀಯ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ.

ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಗೆ ಇನ್ನೊಂದೇ ವರ್ಷ ಬಾಕಿ ಉಳಿದಿದ್ದು, ಈ ಸಂದರ್ಭದಲ್ಲಿ ಭ್ರಷ್ಟಾಚಾರ ಆರೋಪ ಎದುರಿಸಲು ಕಷ್ಟವಾಗಲಿದೆ. ಅನೇಕ ಗುತ್ತಿಗೆದಾರರು ಪ್ರಧಾನಿಗೆ ಪತ್ರ ಬರೆಯುವ ಮೂಲಕ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ 40% ಕಮಿಷನ್ ಪಡೆದು ಭ್ರಷ್ಟಾಚಾರ ನಡೆಸುತ್ತಿದೆ ಎಂದು ಹೇಳುತ್ತಿದ್ದಾರೆ. 

ಈ ಪ್ರಕರಣವನ್ನು ಕಾಂಗ್ರೆಸ್ ಅಸ್ತ್ರವನ್ನಾಗಿ ಬಳಸಿ, ಬಿಜೆಪಿ ವಿರುದ್ಧ ಅಪಪ್ರಚಾರ ಮಾಡುವ ಮೂಲಕ ಕಾಂಗ್ರೆಸ್ ಅಡ್ವಾಂಟೇಜ್‌ ಪಡೆಯುತ್ತಿದೆ. ಜನರಲ್ಲಿ ಬಿಜೆಪಿ ವಿರುದ್ಧ ಭಾವನೆ ಮೂಡುವ ಕೆಲಸವನ್ನು ವಿಪಕ್ಷಗಳು ಮಾಡುತ್ತಿವೆ ಎಂದು ಹೈಕಮಾಂಡ್ ರಾಜ್ಯ ಬಿಜೆಪಿಗೆ ಸಂದೇಶ ನೀಡಿದೆ. ಇದರ ಜೊತೆಗೆ ಈ ಪ್ರಕರಣಕ್ಕೆ ಫುಲ್ ಸ್ಟಾಪ್ ಇಡಲು ಖಡಕ್ ಸೂಚನೆಯನ್ನು ನೀಡಿದೆ.

ಸಿಎಂ ಡೆಲ್ಲಿ ಪ್ರವಾಸ-ಪ್ರಧಾನಿ ಭೇಟಿ ಸಾಧ್ಯತೆ;  ಹೊತ್ತು ಬರುತ್ತಾರಾ ಸಂದೇಶ..!?
ಬೂದಿ ಮುಚ್ಚಿರುವ ಕೆಂಡದಂತೆ ಇರುವ ಸಂಪುಟ ಪುನರ್‌ ರಚನೆ ಅಥವಾ ವಿಸ್ತರಣೆ ವಿಚಾರದ ಬಗ್ಗೆ ಯಾವುದೇ ನಾಯಕರು ಬಹಿರಂಗ ಹೇಳಿಕೆಗಳನ್ನು ನೀಡಬಾರದು ಎಂದು ಇತ್ತೀಚೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯ ಭೇಟಿ ಸಂದರ್ಭದಲ್ಲಿ ಸೂಚಿಸಿದ್ದರು. 

ಏಪ್ರಿಲ್ 30ಕ್ಕೆ ನವದೆಹಲಿಯಲ್ಲಿ ನಡೆಯಲಿರುವ ಮುಖ್ಯಮಂತ್ರಿಗಳ, ಹೈಕೋರ್ಟ್ ನ್ಯಾಯಾಧೀಶರ ಸಂವಾದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಪಾಲ್ಗೊಳ್ಳಲಿದ್ದಾರೆ. ಈ ಕಾರ್ಯಕ್ರಮಕ್ಕೂ ಮುನ್ನ ಅಥವಾ ನಂತರ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. 

ಇದನ್ನು ಓದಿ: ಆಪರೇಷನ್ ಕಮಲದ ಸುಳಿವು! "ಚುನಾವಣೆವರೆಗೆ ಕಾದು ನೋಡಿ, ಹಲವರು ನಮ್ಮ ಪಕ್ಷಕ್ಕೆ ಬರುತ್ತಾರೆ"

ಈ ಭೇಟಿ ಸಂದರ್ಭದಲ್ಲಿ ರಾಜ್ಯ ರಾಜಕಾರಣ, ಚುನಾವಣಾ ತಯಾರಿ ಬಗ್ಗೆ ಪ್ರಧಾನಿ ಮೋದಿ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿವರಣೆ ನೀಡಲಿದ್ದಾರೆ. ಇದರ ಜೊತೆಗೆ ಮುಖ್ಯಮಂತ್ರಿಯ ಕಾರ್ಯವೈಖರಿ ಕೂಡ ಚರ್ಚೆಗೆ ಬರಲಿದೆ. ಮುಂದೂಡುತ್ತಾ ಬಂದಿರುವ ಸಂಪುಟ ಸರ್ಜರಿ ವಿಚಾರದ ಬಗ್ಗೆ ಇದೇ ಸಂದರ್ಭದಲ್ಲಿ ಉಭಯ ನಾಯಕರು ಸಮಾಲೋಚನೆ ನಡೆಸಲಿದ್ದಾರೆ. ನಾಯಕತ್ವ ಬದಲಾವಣೆ ಹಾಗೂ ಸಂಪುಟ ಸರ್ಜರಿ ವಿಚಾರದಲ್ಲಿ ಯಾವುದೇ ಬದಲಾವಣೆ ಆಗಬೇಕಾದರೆ ಈ ಭೇಟಿಯಲ್ಲಿ ಮಾತ್ರ ಆಗಲಿದೆ. ಒಟ್ಟಾರೆ ಈ ಭೇಟಿಯ ನಂತರ ಪ್ರಧಾನಿ ಮೋದಿ ಹಾಗೂ ಕಮಲ ನಾಯಕರು ರಾಜ್ಯ ರಾಜಕಾರಣದ ಭವಿಷ್ಯದ ಬಗ್ಗೆ ಯಾವ ಸೂಚನೆ ನೀಡುತ್ತಾರೆ ಎಂದು ಕಾದು ನೋಡಬೇಕಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News