ಪರಿಹಾರ ತಪ್ಪಿಸಲು ಬಿಜೆಪಿ ಸರ್ಕಾರದಿಂದ ಸಾವಿನ ಸುಳ್ಳು ಹೇಳಿ ಮೋಸ: ಸಿದ್ದರಾಮಯ್ಯ

ಕೋವಿಡ್ ಕಾಯಿಲೆಯಿಂದ ಸತ್ತವರ ಸಂಖ್ಯೆಯನ್ನು ಬಚ್ಚಿಟ್ಟಿರುವ ಕೇಂದ್ರ ಬಿಜೆಪಿ ಸರ್ಕಾರದ ಸುಳ್ಳುಗಳ ಸರಮಾಲೆಯನ್ನು ವಿಶ್ವ ಆರೋಗ್ಯ ಸಂಸ್ಥೆ ಬಯಲುಗೊಳಿಸಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

Written by - Zee Kannada News Desk | Last Updated : May 7, 2022, 08:25 PM IST
  • ಕೋವಿಡ್‍ನಿಂದ ಸಾವಿಗೀಡಾದ ಲಕ್ಷಾಂತರ ಮಂದಿಯ ಕುಟುಂಬಕ್ಕೆ ಪರಿಹಾರವೇ ಸಿಕ್ಕಿಲ್ಲ
  • ಕೇಂದ್ರ ಬಿಜೆಪಿ ಸರ್ಕಾರದ ಸುಳ್ಳುಗಳ ಸರಮಾಲೆಯನ್ನು ವಿಶ್ವ ಆರೋಗ್ಯ ಸಂಸ್ಥೆ ಬಯಲುಗೊಳಿಸಿದೆ
  • ಕೋವಿಡ್ ಸಾವಿನ ಮರು ಎಣಿಕೆ ಮಾಡಿದರೆ ಮಾತ್ರ ನ್ಯಾಯ ಸಿಗಲು ಸಾಧ್ಯವೆಂದ ಸಿದ್ದರಾಮಯ್ಯ
ಪರಿಹಾರ ತಪ್ಪಿಸಲು ಬಿಜೆಪಿ ಸರ್ಕಾರದಿಂದ ಸಾವಿನ ಸುಳ್ಳು ಹೇಳಿ ಮೋಸ: ಸಿದ್ದರಾಮಯ್ಯ   title=
ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

ಬೆಂಗಳೂರು: ಕೋವಿಡ್ ಕಾಯಿಲೆಯಿಂದ ಸಾವನ್ನಪ್ಪಿದವರಿಗೆ ಪರಿಹಾರ ಕೊಡುವುದನ್ನು ತಪ್ಪಿಸಲು ಕೇಂದ್ರ ಬಿಜೆಪಿ ಸರ್ಕಾರ ಸಾವಿನ ಸುಳ್ಳು ಲೆಕ್ಕ ಹೇಳಿ ಮೋಸ ಮಾಡಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಈ ಬಗ್ಗೆ ಶನಿವಾರ ಸರಣಿ ಟ್ವೀಟ್ ಮಾಡಿರುವ ಅವರು, ‘ಕೋವಿಡ್‍ನಿಂದ ಸಾವಿಗೀಡಾದ ಲಕ್ಷಾಂತರ ಮಂದಿಯ ಕುಟುಂಬಕ್ಕೆ ಪರಿಹಾರವೇ ಸಿಕ್ಕಿಲ್ಲ. ಕೋವಿಡ್ ಸಾವಿನ ಮರು ಎಣಿಕೆ ಮಾಡಿದರೆ ಮಾತ್ರ ನ್ಯಾಯ ಸಿಗಲು ಸಾಧ್ಯ’ವೆಂದು ಹೇಳಿದ್ದಾರೆ.

ಕೋವಿಡ್ ಕಾಯಿಲೆಯಿಂದ ಸತ್ತವರ ಸಂಖ್ಯೆಯನ್ನು ಬಚ್ಚಿಟ್ಟಿರುವ ಕೇಂದ್ರ ಬಿಜೆಪಿ ಸರ್ಕಾರದ ಸುಳ್ಳುಗಳ ಸರಮಾಲೆಯನ್ನು ವಿಶ್ವ ಆರೋಗ್ಯ ಸಂಸ್ಥೆ ಬಯಲುಗೊಳಿಸಿದೆ. ಕೋವಿಡ್ ಸಾವಿನ ಸಂಖ್ಯೆ ಕೇಂದ್ರ ಸರ್ಕಾರದ ಪ್ರಕಾರ 4.81 ಲಕ್ಷ ಮತ್ತು ಡಬ್ಲ್ಯುಎಚ್ಒ ಪ್ರಕಾರ 47.40 ಲಕ್ಷ ಆಗಿದೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: BMTC Driver : ದಯಾಮರಣ ಕೋರಿ ರಾಷ್ಟ್ರಪತಿ, ಪ್ರಧಾನಿಗೆ ಪತ್ರ ಬರೆದ BMTC ಡ್ರೈವರ್!

‘ಕೋವಿಡ್ ಸಾವಿನ ಸಂಖ್ಯೆ ಕೇವಲ 37,603 ಎಂದು ರಾಜ್ಯ ಬಿಜೆಪಿ ಸರ್ಕಾರ ಹೇಳಿತ್ತು. ಕೆಪಿಸಿಸಿ ಸಮೀಕ್ಷೆ ಪ್ರಕಾರ ಸಾವಿನ ಸಂಖ್ಯೆ 3.17 ಲಕ್ಷ ಆಗಿತ್ತು. ಅರವಿಂದ್ ಸುಬ್ರಹ್ಮಣ್ಯ ಮತ್ತು ಜೇಕಬ್ ಝಾ ಪ್ರಕಾರ ಸಾವಿನ ಸಂಖ್ಯೆ 4 ಲಕ್ಷ. ಕಳೆದ ವರ್ಷದ ಜೂನ್ ತಿಂಗಳಲ್ಲಿಯೇ ನಾನು ಇದನ್ನು ಹೇಳಿದ್ದೆ’ ಎಂದು ಟ್ವೀಟ್ ಮಾಡಿದ್ದಾರೆ.

‘ಕೊರೊನಾ ಕಾಯಿಲೆಯಿಂದ ರಾಜ್ಯದಲ್ಲಿ ಈವರೆಗೆ 5 ಲಕ್ಷಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿರುವ ಸಾಧ್ಯತೆ ಇದೆ. ಮರು ಸಮೀಕ್ಷೆ ಮೂಲಕ ಮೃತರ ಸಂಖ್ಯೆಯನ್ನು ಖಚಿತವಾಗಿ ತಿಳಿದುಕೊಂಡು ಮೃತರ ಕುಟುಂಬಕ್ಕೆ ಕನಿಷ್ಠ 4 ಲಕ್ಷ ರೂ. ಪರಿಹಾರ ಕೊಡಬೇಕೆಂದು ಆಗ್ರಹಿಸುತ್ತೇನೆ. ಜನತೆಗೆ ಉತ್ತರದಾಯಿಯಾಗಿ ಪಾರದರ್ಶಕವಾಗಿ ಕಾರ್ಯನಿರ್ವಹಿಸಬೇಕಾಗಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಅಧಿಕೃತವಾದ ಮಾಹಿತಿ ಮುಚ್ಚಿಟ್ಟು ದ್ರೋಹ ಎಸಗುತ್ತಿದೆ. ಸತ್ಯ ಸಂಗತಿ ಬಯಲಾದರೆ ತಮ್ಮ ಬಣ್ಣ ಬಯಲಾಗುತ್ತಿದೆ ಎಂಬ ಭಯದಿಂದ ಸುಳ್ಳುಗಳ ಮಾಲೆ ಹೆಣೆಯುತ್ತಿದೆ’ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಇದನ್ನೂ ಓದಿ: ಬಿಜೆಪಿಯ ‘ಪೇಮೆಂಟ್ ಸೀಟುಗಳು’ ಕೇವಲ ಸಿಎಂ ಕುರ್ಚಿಗಷ್ಟೇ ಸೀಮಿತವಲ್ಲ: ಸಿದ್ದರಾಮಯ್ಯ

‘ಕೋವಿಡ್ ಕಾಯಿಲೆಯನ್ನು ಔಷಧಿ ಮತ್ತು ಚಿಕಿತ್ಸೆಯ ಮೂಲಕ ಎದುರಿಸಬೇಕಾಗಿದ್ದ ಕೇಂದ್ರ ಬಿಜೆಪಿ ಸರ್ಕಾರ ಸುಳ್ಳು ಮತ್ತು ಮೋಸಗಳಿಂದ ಎದುರಿಸಲು ಹೊರಟಿದೆ. ಚಾಮರಾಜನಗರದಲ್ಲಿ ಆಕ್ಸಿಜನ್ ಸಿಗದೆ 39 ಜನ ಸತ್ತಿದ್ದರೂ ರಾಜ್ಯ ಬಿಜೆಪಿ ಸರ್ಕಾರ ಮಾತ್ರ ಸತ್ತವರು 3 ಜನ ಎಂದು ಹೇಳಿತ್ತು’ ಅಂತಾ ಕಿಡಿಕಾರಿದ್ದಾರೆ.

‘2020ರಲ್ಲಿ ಸಕಾಲದಲ್ಲಿ ಚಿಕಿತ್ಸೆ ಸಿಗದೆ ಒಟ್ಟು 36.5 ಲಕ್ಷ ಜನ ಸತ್ತಿರುವುದನ್ನು ಕೇಂದ್ರ ರಿಜಿಸ್ಟ್ರಾರ್ ಜನರಲ್ ಕಚೇರಿಯ ವರದಿ ಬಹಿರಂಗಪಡಿಸಿದೆ. ಆ ವರ್ಷ ಸಾವಿಗೀಡಾದ 81 ಲಕ್ಷ ಜನರಲ್ಲಿ ಶೇ.45ರಷ್ಟು ಜನರು ಚಿಕಿತ್ಸೆ ಸಿಗದೆ ಮೃತಪಟ್ಟಿರುವುದು ಕಳವಳಕಾರಿ ಬೆಳವಣಿಗೆ’ ಎಂದು ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News