ಬೆಂಗಳೂರು: ರಾಜ್ಯಾಡಳಿತದ ಕೇಂದ್ರ ಸ್ಥಾನವಾದ ವಿಧಾನಸೌಧದ ಪಶ್ಚಿಮ ದ್ವಾರದ ಬಳಿ ಶುಕ್ರವಾರ ಸಂಜೆ ಪೊಲೀಸರು 14 ಲಕ್ಷ ರೂ. ಜಪ್ತಿ ಮಾಡಿದ್ದಾರೆ.
ವಿಧಾನಸೌಧದ ಪಶ್ಚಿಮ ದ್ವಾರದಲ್ಲಿ ಕಪ್ಪು ಬಣ್ಣದ ಬ್ಯಾಗಿನಲ್ಲಿ ಹಣ ತೆಗೆದುಕೊಂಡು ಹೋಗುತ್ತಿದ್ದ ವ್ಯಕ್ತಿಯನ್ನು ಕಂಡು ಅನುಮಾನಗೊಂಡ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಆಗ ಆತನ ಬಳಿ 14 ಲಕ್ಷ ರೂ. ಇರುವುದು ಪತ್ತೆಯಾಗಿದೆ. ಕೂಡಲೇ ಹಣವನ್ನು ಜಪ್ತಿ ಮಾಡಿ, ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಯನ್ನು ಮೋಹನ್ ಎಂದು ಗುರುತಿಸಲಾಗಿದ್ದು, ಆತ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಪುಟ್ಟರಂಗಶೆಟ್ಟಿ ಅವರ ಆಪ್ತ ಎಂದು ಹೇಳಲಾಗುತ್ತಿದೆ. ಆದರೆ ಆತನ ಬಳಿ ಇದ್ದ ಹಣಕ್ಕೆ ಯಾವುದೇ ದಾಖಲೆ ದೊರೆತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಮತ್ತೊಂದೆಡೆ, ಘಟನೆ ಬಗ್ಗೆ ಸಚಿವ ಪುಟ್ಟರಂಗಶೆಟ್ಟಿ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಮೋಹನ್ ಯಾರೆಂಬುದೇ ನನಗೆ ತಿಳಿದಿಲ್ಲ, ನಾನು ಆತನನ್ನು ನೋಡಿಯೇ ಇಲ್ಲ, ಆತ ನನ್ನ ಆಪ್ತನೂ ಅಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ ಪೊಲೀಸರು ವಿಚಾರಣೆ ತೀವ್ರಗೊಳಿಸಿದ್ದಾರೆ.