ಚಿಕ್ಕಮಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ 3ನೇ ಹಂತದ ರಾಜ್ಯ ಪ್ರವಾಸದಲ್ಲಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಇಂದು ಶೃಂಗೇರಿಗೆ ತೆರಳಿ ಶ್ರೀ ಶಾರದಾಂಬೆಯ ದರ್ಶನ ಪಡೆದರು.
ಇಂದು ಬೆಳಿಗ್ಗೆ ಮಂಗಳೂರಿನಲ್ಲಿ ಕರಾವಳಿ ಜಿಲ್ಲೆಗಳ ಕಾಂಗ್ರೆಸ್ ಮುಖಂಡರ ಸಭೆ ನಡೆಸಿದ ರಾಹುಲ್ ಗಾಂಧಿ ಹೆಲಿಕಾಪ್ಟರ್ ಮೂಲಕ ಚಿಕ್ಕಮಗಳೂರಿಗೆ ಆಗಮಿಸಿ ಶೃಂಗೇರಿ ಶ್ರೀ ಶಾರದಾ ಪೀಠಕ್ಕೆ ತೆರಳಿ ಶಾರದಾಂಬೆ ದರ್ಶನ ಪಡೆದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಮತ್ತು ಇತರ ಮುಖಂಡರು ರಾಹುಲ್ ಗಾಂಧಿಗೆ ಸಾಥ್ ನೀಡಿದರು.
ಪಂಚೆ, ಶಲ್ಯದಲ್ಲಿ ರಾಹುಲ್ ಗಾಂಧಿ
ಯಾವಾಗಲೂ ಜುಬ್ಬದಲ್ಲೇ ಕಾಣಿಸಿಕೊಳ್ಳುತ್ತಿದ್ದ ರಾಹುಲ್ ಈ ಬಾರಿ ಪಂಚೆ, ಶಲ್ಯ ಧರಿಸಿ ದೇವಸ್ಥಾನಕ್ಕೆ ಭೇಟಿ ನೀಡಿದ್ದು ವಿಶೇಷವಾಗಿತ್ತು. ಇವರೊಂದಿಗೆ ಜಿ.ಪರಮೇಶ್ವರ್, ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಸಾಂಪ್ರದಾಯಿಕ ಉಡುಪಿನಲ್ಲಿ ದೇವಿಯ ದರ್ಶನ ಪಡೆದರು. ನಂತರ ರಾಹುಲ್, ಮಠಕ್ಕೆ ತೆರಳಿ ಭಾರತಿ ತೀರ್ಥ ಶ್ರೀಗಳಿಂದ ಆರ್ಶೀವಾದ ಪಡೆದರು.
Congress President Rahul Gandhi offered his respects at the Sharadamba Temple, Sringeri Mutt, Chikmagalur. #JanaAashirwadaYatre #RGInKarnataka pic.twitter.com/69dDKc7B72
— Congress (@INCIndia) March 21, 2018
ಸಿದ್ದರಾಮಯ್ಯ ಮೊದಲ ಭೇಟಿ
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆದ ಬಳಿಕ ನಾಲ್ಕು ವರ್ಷಗಳ ನಂತರ ಇದೇ ಮೊದಲ ಬಾರಿಗೆ ಶ್ರಿಂಗೇರಿ ಮಠಕ್ಕೆ ಭೇಟಿ ನೀಡಿದ್ದಾರೆ ಎನ್ನಲಾಗಿದೆ. ಈ ಹಿಂದೆ 2 ಬಾರಿ ಕೊಪ್ಪ, ಎನ್.ಆರ್.ಪುರಕ್ಕೆ ಆಗಮಿಸಿದ್ದರೂ ಕೂಡ ಶೃಂಗೇರಿ ಮಠಕ್ಕೆ ಭೇಟಿ ನೀಡಿರಲಿಲ್ಲ. ಈ ಸಂಬಂಧ ಸಿದ್ದರಾಮಯ್ಯ ಅವರು ಸ್ಥಳಿಯರ ಆಕ್ರೋಶಕ್ಕೂ ಗುರಿಯಾಗಿದ್ದರು. ಆದರೆ ಈ ಬಾರಿ ರಾಹುಲ್ ಗಾಂಧಿಯೊಂದಿಗೆ ಮಠಕ್ಕೆ ಬೇಟಿ ನೀಡಿ, ದೇವಿಯ ಆಶೀರ್ವಾದ ಪಡೆದಿದ್ದಾರೆ.