ಬೆಂಗಳೂರು: ಕರ್ನಾಟಕ ರಾಜ್ಯದ ರೈತರ ಸಾಲಮನ್ನಾ ಕುರಿತು ಪ್ರಧಾನ ಮಂತ್ರಿ ನರೇಂದ್ರ ಮೋದಿ ನೀಡಿರುವ ಹೇಳಿಕೆ ರಾಜ್ಯದ ರೈತರೂ ಸೇರಿದಂತೆ ಇಡೀ ದೇಶದ ಜನರ ದಾರಿ ತಪ್ಪಿಸುವಂತಿದೆ. ಪ್ರಧಾನಿ ಮೋದಿ ಇಂತಹ ಹೇಳಿಕೆ ಅತ್ಯಂತ ದುರದೃಷ್ಟಕರ ಹಾಗೂ ದೇಶದ ದೌರ್ಭಾಗ್ಯ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸಿಎಂ ರಾಜ್ಯದ "ರೈತರ ಹಿತಾಸಕ್ತಿಯನ್ನು ಗಮನದಲ್ಲಿರಿಸಿಕೊಂಡು ಸರ್ಕಾರವು ಕರ್ನಾಟಕ ರಾಜ್ಯದಲ್ಲಿ ಸಾಲ ಮನ್ನಾ ಯೋಜನೆಯನ್ನು ಜಾರಿಗೆ ತಂದಿದೆ. ಇದು ರೈತರ ಬಗ್ಗೆ ಮೈತ್ರಿ ಸರ್ಕಾರ ಹೊಂದಿರುವ ಬದ್ಧತೆಯಾಗಿದೆ. ಸಾಲ ಮನ್ನಾ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಅಲ್ಪ ಸಮಯದಲ್ಲೇ ಗಣನೀಯ ಪ್ರಗತಿ ಸಾಧಿಸಲಾಗಿದೆ. ಅದಾಗ್ಯೂ ಪ್ರಧಾನಿಯವರು ವಾಸ್ತವದ ಅರಿವಿಲ್ಲದೆ, ಸಾಲ ಮನ್ನಾ ಯೋಜನೆಯ ಬಗ್ಗೆ ತಪ್ಪಾಗಿ ಅರ್ಥೈಸಿಕೊಂಡು ರಾಜ್ಯ ಸರ್ಕಾರ ರೈತರ ಮೇಲೆ ಮಾಡಿರುವ ‘ಕ್ರೂರ ವ್ಯಂಗ್ಯ’ ಎಂದು ಲೇವಡಿ ಮಾಡಿರುವುದಲ್ಲದೆ, ದೇಶದ ಜನತೆಯನ್ನು ತಪ್ಪುದಾರಿಗೆಳೆಯುತ್ತಿರುವುದು ಅತ್ಯಂತ ಬೇಸರದ ಸಂಗತಿ.
ಪ್ರಧಾನಿಯಾದವರು ಇಂತಹ ಮಿಥ್ಯಾರೋಪ ಮಾಡುವ ಮೊದಲು ಸಾಲ ಮನ್ನಾ ಯೋಜನೆ ಕುರಿತು ಈ ಕೆಳಕಂಡ ವಾಸ್ತವಾಂಶಗಳು ಹಾಗೂ ಪ್ರಗತಿ ವಿವರಗಳನ್ನು ಗಮನಿಸಬೇಕು" ಎಂದು ತಿಳಿಸಿದ್ದಾರೆ.
Hon’ble Prime Minister @narendramodi's remarks on Karnataka Farmers' Loan Waiver scheme is factually incorrect, insensitive and very unfortunate:CM HD Kumaraswamy.
“It is sad that the PM is misleading the people of the nation without obtaining the full facts about the scheme.” pic.twitter.com/Rpl0hCfaBB
— CM of Karnataka (@CMofKarnataka) December 30, 2018
1. ಸಾಲ ಮನ್ನಾ ಯೋಜನೆ ತೆರೆದ ಪುಸ್ತಕದಂತಿದೆ. ಮೊದಲ ಬಾರಿಗೆ ನಮ್ಮ ರಾಜ್ಯ ಸಾಲ ಮನ್ನಾ ಯೋಜನೆಯ ಮಾಹಿತಿಗಳು ಎಲ್ಲರಿಗೂ ಆನ್ಲೈನ್ನಲ್ಲಿ ಮುಕ್ತವಾಗಿ ಒದಗಿಸಲಾಗಿದೆ. ಯಾವ ರಾಜ್ಯದಲ್ಲೂ ಈವರೆಗೆ ಈ ವ್ಯವಸ್ಥೆ ರೂಪಿಸಿದ ನಿದರ್ಶನವಿಲ್ಲ.
2. ಕರ್ನಾಟಕ ಸರ್ಕಾರ ಸಾರ್ವಜನಿಕರ ಮತ್ತು ತೆರಿಗೆದಾರರ ಹಣ ಪೋಲಾಗದಂತೆ, ಅತಿ ಎಚ್ಚರಿಕೆಯಿಂದ ಈ ಯೋಜನೆಯನ್ನು ಜಾರಿಗೊಳಿಸಿ ಅರ್ಹ ರೈತರಿಗೇ ಹಣ ಸೇರುವಂತೆ ಮಾಡುತ್ತಿದೆ.
3. ಪ್ರತಿಯೊಬ್ಬ ಅರ್ಹ ರೈತನಿಗೆ ಈ ಯೋಜನೆಯ ಲಾಭ ದೊರೆಯುತ್ತದೆ ಎನ್ನುವುದಕ್ಕೆ ಖಾತ್ರಿ ಇದೆ.
4. ಎಲ್ಲಾ ಮಧ್ಯವರ್ತಿಗಳು, ವಿಶೇಷವಾಗಿ ಸಹಕಾರಿ ವಲಯದ ಮಧ್ಯವರ್ತಿಗಳ ಹಾವಳಿಯನ್ನು ಸಂಪೂರ್ಣವಾಗಿ ತಡೆಗಟ್ಟಲಾಗಿದೆ.
5. ರಾಜ್ಯದಲ್ಲಿ ಜಾರಿಗೆ ತಂದಿರುವ ಈ ವಿನೂತನ ಮಾದರಿಯನ್ನು ಅಳವಡಿಸಿಕೊಳ್ಳುವ ಬಗ್ಗೆ ಇತರ ರಾಜ್ಯಗಳೂ ಮುಂದೆ ಬಂದಿವೆ. ಆಧಾರ್ ಮತ್ತು ಭೂ ದಾಖಲಾತಿಗಳ ಡಿಜಿಟಲ್ ದೃಢೀಕರಣ ಮತ್ತು ಪಡಿತರ ಚೀಟಿ ಇವುಗಳಿಂದ ಕೂಡಿರುವ ಮನ್ನಾ ಪ್ರಕ್ರಿಯೆ ವ್ಯವಸ್ಥೆಯು ಅತ್ಯಂತ ಸುರಕ್ಷಿತ ಮತ್ತು ದುರುಪಯೋಗಕ್ಕೆ ಅಸ್ಪದ ನೀಡುವುದಿಲ್ಲ. ಅರ್ಹರ ರೈತರ ಖಾತೆಗೆ ಹಣ ಜಮೆಗೊಳ್ಳುತ್ತದೆ.
6. ಈವರೆಗೆ ಸುಮಾರು 60 ಸಾವಿರ ರೈತರ 350 ಕೋಟಿ ರೂ. ಸಾಲ ಮನ್ನಾದ ಮೊತ್ತವನ್ನು ನೇರವಾಗಿ ಅವರುಗಳ ಖಾತೆಗೆ ವಿದ್ಯುನ್ಮಾನ (ಇಲೆಕ್ಟ್ರಾನಿಕ್) ಮಾದರಿಯಲ್ಲಿ ಮಾಡಲಾಗಿದೆ.
7. ಪ್ರತಿ ವಾರ ಸಾಲ ಮನ್ನಾದ ಮೊತ್ತವನ್ನು ರೈತರ ಖಾತೆಗೆ ನೇರವಾಗಿ ವಿದ್ಯುನ್ಮಾನ ಮಾದರಿಯಲ್ಲಿ ತುಂಬಲಾಗುತ್ತಿದೆ.
8. ಮುಂದಿನ ವಾರದಲ್ಲಿ ಇನ್ನೂ 1 ಲಕ್ಷ ರೈತರಿಗೆ 400 ಕೋಟಿ ರೂ.ಗಳನ್ನು ಅವರ ಖಾತೆಗೆ ಜಮೆ ಮಾಡುವ ಉದ್ದೇಶ ಹೊಂದಲಾಗಿದೆ.
9. ವಾಣಿಜ್ಯ ಬ್ಯಾಂಕುಗಳಲ್ಲಿ ಬೆಳೆ ಸಾಲ ಪಡೆದ ಸುಮಾರು 21 ಲಕ್ಷ ರೈತರಲ್ಲಿ ಕೇವಲ 10 ದಿನಗಳಲ್ಲಿ 8.5 ಲಕ್ಷ ರೈತರು ತಮ್ಮ ಆಧಾರ್, ರೇಷನ್ ಕಾರ್ಡ್ ಹಾಗೂ ಪಹಣಿಯ ಮಾಹಿತಿಗಳನ್ನು ಒದಗಿಸಿದ್ದಾರೆ.
10. ಈ ಪ್ರಕ್ರಿಯೆ 2019ರ ಜನವರಿಯೊಳಗೆ ಪೂರ್ಣಗೊಳ್ಳಲಿದೆ. ಈ ಅವಧಿಯೊಳಗೆ ಎಲ್ಲಾ ಅರ್ಹ ರೈತರನ್ನು ನೊಂದಾಯಿಸಲಾಗುವುದು.
11. ಈ ಯೋಜನೆಯ ಪಾರದರ್ಶಕ ಹಾಗೂ ಯಶಸ್ವಿ ಅನುಷ್ಠಾನಕ್ಕಾಗಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಅತ್ಯಂತ ಬದ್ಧತೆಯಿಂದ ಹಗಲಿರುಳು ಶ್ರಮಿಸುತ್ತಿದ್ದಾರೆ.
12. ಈ ವರೆಗಿನ ಸಾಲಮನ್ನಾ ವಿವರ ಇದರೊಂದಿಗೆ ಲಗತ್ತಿಸಿದೆ.
ವಾಸ್ತವ ಹೀಗಿದ್ದರೂ ಪ್ರಧಾನಿ ಹುದ್ದೆಯಲ್ಲಿರುವವರು ಜವಾಬ್ದಾರಿ ಮರೆತು ಇಂತಹ ಹೇಳಿಕೆ ನೀಡಿದ್ದು ದೇಶದ ದೌರ್ಭಾಗ್ಯ ಎಂದು ಸಿಎಂ ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.