ಅಕ್ಕಿಯ ನೆಪದಲ್ಲಿ ಕೇಂದ್ರದಿಂದ ರಾಜಕೀಯ: ಸಚಿವ ಎಂ.ಬಿ.ಪಾಟೀಲ್ ಟೀಕೆ

ಬೇರೆ ರಾಜ್ಯಗಳಿಂದ ಅಕ್ಕಿ ಖರೀದಿಸಲು ಸರ್ಕಾರ ಯೋಚಿಸುತ್ತಿದೆ. ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಕೇಂದ್ರ ಸಚಿವ ಅಮಿತ್‌ ಶಾರೊಂದಿಗೆ ಈ ಸಂಬಂಧ ಮಾತುಕತೆ ನಡೆಸಿದ್ದಾರೆ. ಕೇಂದ್ರ ಸರ್ಕಾರದ ಬೇರೆ ಬೇರೆ ಸಂಸ್ಥೆಗಳನ್ನೂ ಈ ಸಂಬಂಧ ಸಂಪರ್ಕಿಸಲಾಗಿದೆ ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.

Written by - Prashobh Devanahalli | Edited by - Puttaraj K Alur | Last Updated : Jun 22, 2023, 04:02 PM IST
  • ರಾಜ್ಯದ ಬಡವರಿಗೆ ತಿಂಗಳಿಗೆ 10 ಕೆಜಿ ಅಕ್ಕಿಯನ್ನು ಉಚಿತವಾಗಿ ಕೊಡಲು ಸರ್ಕಾರ ಬದ್ಧವಾಗಿದೆ
  • ಅಕ್ಕಿ ವಿಚಾರದಲ್ಲಿ ಕೇಂದ್ರ ಸರ್ಕಾರ ರಾಜಕೀಯ ಮಾಡುತ್ತಿದ್ದು, ಬಡವರ ವಿರೋಧಿಯಂತೆ ವರ್ತಿಸುತ್ತಿದೆ
  • ಸ್ವಲ್ಪ ತಡವಾದರೂ ಅನ್ನಭಾಗ್ಯ ಯೋಜನೆ ಜಾರಿಗೆ ಬಂದೇ ಬರುತ್ತದೆ ಎಂದ ಸಚಿವ ಎಂ.ಬಿ.ಪಾಟೀಲ್
ಅಕ್ಕಿಯ ನೆಪದಲ್ಲಿ ಕೇಂದ್ರದಿಂದ ರಾಜಕೀಯ: ಸಚಿವ ಎಂ.ಬಿ.ಪಾಟೀಲ್ ಟೀಕೆ   title=
ಅಕ್ಕಿಯ ನೆಪದಲ್ಲಿ ಕೇಂದ್ರದಿಂದ ರಾಜಕೀಯ!

ವಿಜಯಪುರ: ರಾಜ್ಯದ ಬಡವರಿಗೆ ತಿಂಗಳಿಗೆ 10 ಕೆಜಿ ಅಕ್ಕಿಯನ್ನು ಉಚಿತವಾಗಿ ಕೊಡಲು ಸರ್ಕಾರ ಬದ್ಧವಾಗಿದೆ. ಆದರೆ ಈ ವಿಚಾರದಲ್ಲಿ ಕೇಂದ್ರ ಸರ್ಕಾರವು ರಾಜಕೀಯ ಮಾಡುತ್ತಿದ್ದು, ಬಡವರ ವಿರೋಧಿಯಂತೆ ವರ್ತಿಸುತ್ತಿದೆ. ಹೀಗಾಗಿ ಸ್ವಲ್ಪ ತಡವಾದರೂ ಅನ್ನಭಾಗ್ಯ ಯೋಜನೆ ಜಾರಿಗೆ ಬಂದೇ ಬರುತ್ತದೆ ಎಂದು ಭಾರೀ ಕೈಗಾರಿಕೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಅಕ್ಕಿ ಖರೀದಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಮೊದಲಿನಿಂದಲೂ ಕೇಂದ್ರ ಸರ್ಕಾರದೊಂದಿಗೆ ವ್ಯವಹರಿಸುತ್ತಲೇ ಇದೆ. ಮೊದಲು ಕೇಂದ್ರ ಸರ್ಕಾರ ಕೂಡ ತನ್ನಲ್ಲಿ 7.5 ಲಕ್ಷ ಟನ್‌ ಅಕ್ಕಿ ದಾಸ್ತಾನಿದ್ದು, ರಾಜ್ಯಕ್ಕೆ ಅಗತ್ಯವಿರುವಷ್ಟು ಅಕ್ಕಿ ಕೊಡುವುದಾಗಿ ಹೇಳಿತ್ತು. ಆದರೆ ಈಗ ಅದು ತದ್ವಿರುದ್ಧ ಧೋರಣೆ ತಾಳಿದೆ. ನಾವೇನೂ ಅವರನ್ನು ಉಚಿತವಾಗಿ ಅಕ್ಕಿ ಕೊಡಿ ಎಂದು ಕೇಳಿರಲಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬೇರೆ ರಾಜ್ಯಗಳಿಂದ ಅಕ್ಕಿ ಖರೀದಿಸಲು ಸರ್ಕಾರ ಯೋಚಿಸುತ್ತಿದೆ. ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಕೇಂದ್ರ ಸಚಿವ ಅಮಿತ್‌ ಶಾರೊಂದಿಗೆ ಈ ಸಂಬಂಧ ಮಾತುಕತೆ ನಡೆಸಿದ್ದಾರೆ. ಕೇಂದ್ರ ಸರ್ಕಾರದ ಬೇರೆ ಬೇರೆ ಸಂಸ್ಥೆಗಳನ್ನೂ ಈ ಸಂಬಂಧ ಸಂಪರ್ಕಿಸಲಾಗಿದೆ. ಈ ಎಲ್ಲಾ ಕಾರಣಗಳಿಂದ ಅನ್ನಭಾಗ್ಯ ಯೋಜನೆಯ ಜಾರಿ ಸ್ವಲ್ಪ ವಿಳಂಬವಾಗುತ್ತಿದೆ. ಆದರೆ ಅದು ಜಾರಿಗೆ ಬರುವುದರಲ್ಲಿ ಯಾವುದೇ ಅನುಮಾನವೂ ಇಲ್ಲ. ಜನರಿಗೆ ಕೊಟ್ಟ ಮಾತಿನಂತೆ ನಮ್ಮ ಸರ್ಕಾರ ನಡೆದುಕೊಳ್ಳಲಿದೆ ಎಂದು ಅವರು ತಿಳಿಸಿದರು.

ಇದನ್ನೂ ಓದಿ: ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಮಾಹಿತಿ 

ಜುಲೈ ತಿಂಗಳಲ್ಲಿ ದೆಹಲಿಗೆ

ಭಾರೀ ಮತ್ತು ಮಧ್ಯಮ ಕೈಗಾರಿಕೆ ಇಲಾಖೆಯ ಬೆಳವಣಿಗೆಗೆ ಸಂಬಂಧಿಸಿದಂತೆ ಸದ್ಯಕ್ಕೆ ಸಮಗ್ರ ನೀಲನಕ್ಷೆ ಸಿದ್ಧಪಡಿಸಲಾಗುತ್ತಿದೆ. ಇದು ಈ ತಿಂಗಳಲ್ಲಿ ಅಂತಿಮ ರೂಪ ಪಡೆಯಲಿದೆ. ಬಳಿಕ ಜುಲೈ ತಿಂಗಳಲ್ಲಿ ದೆಹಲಿಗೆ ತೆರಳಿ ಕೇಂದ್ರ ಕೈಗಾರಿಕಾ ಸಚಿವರ ಜೊತೆ ಕೂಲಂಕಷವಾಗಿ ಚರ್ಚಿಸಲಾಗುವುದು ಎಂದು ಎಂ.ಬಿ.ಪಾಟೀಲ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ರಾಜ್ಯದಲ್ಲಿ ಕೈಗಾರಿಕಾ ಕ್ಷೇತ್ರವನ್ನು ಹೇಗೆ ಮುಂದಕ್ಕೆ ಕೊಂಡೊಯ್ಯಬೇಕು ಎನ್ನುವ ಬಗ್ಗೆ ಸ್ಪಷ್ಟ ಕಲ್ಪನೆ ಸರ್ಕಾರಕ್ಕಿದೆ. ಹಾಗೆಯೇ ಕೇಂದ್ರದಿಂದ ನಮಗೆ ದೊರೆಯಬಹುದಾದ ಸಹಾಯ ಮತ್ತು ನಮ್ಮಲ್ಲಿ ಯಾವ್ಯಾವ ಉದ್ದಿಮೆಗಳಿಗೆ ಹೇರಳ ಅವಕಾಶಗಳಿವೆ ಎನ್ನುವುದನ್ನೆಲ್ಲ ಚರ್ಚಿಸಲಾಗುವುದು. ಇದರಿಂದ ರಾಜ್ಯದ ಎಲ್ಲೆಡೆಗಳಲ್ಲೂ ಉದ್ದಿಮೆಗಳು ಬರಲು ಸಹಾಯವಾಗಲಿದೆ ಎಂದು ಇದೇವೇಳೆ ಅವರು ತಿಳಿಸಿದರು.

ಇದನ್ನೂ ಓದಿ: ಅಧಿವೇಶನದೊಳಗಾಗಿ ಗ್ಯಾರಂಟಿ ಜಾರಿ ಮಾಡದಿದ್ದರೆ ಸದನದ ಒಳಗೆ ಹೊರಗೆ ಧರಣಿ-ಬಿಎಸ್ವೈ ಎಚ್ಚರಿಕೆ 

ವಿದ್ಯುತ್‌ ಬೆಲೆ ಏರಿಕೆ- ಸಿಎಂ ಜೊತೆ ಚರ್ಚೆ

ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗವು ಇತ್ತೀಚೆಗೆ ವಿದ್ಯುತ್‌ ಬೆಲೆ ಏರಿಸಿದ್ದು, ಇದರ ಬಗ್ಗೆ ಕೈಗಾರಿಕೋದ್ಯಮಿಗಳು ಕಳವಳ ಹೊರಹಾಕಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಇಂಧನ ಸಚಿವ ಕೆ.ಜೆ.ಜಾರ್ಜ್ ಅವರೊಂದಿಗೆ ಮಾತುಕತೆ ನಡೆಸಲಿದ್ದೇನೆ. ಆದ್ದರಿಂದ ಕೈಗಾರಿಕೋದ್ಯಮಿಗಳು ಯಾವುದೇ ಪ್ರತಿಕೂಲ ತೀರ್ಮಾನ ತೆಗೆದುಕೊಳ್ಳಬಾರದು ಎಂದು ಅವರು ಮನವಿ ಮಾಡಿಕೊಂಡರು.

ವಿದ್ಯುತ್‌ ದರ ಏರಿಕೆ ಸರ್ಕಾರದ ತೀರ್ಮಾನವಲ್ಲ. ಕೆಇಆರ್ಸಿ ಸ್ವಾಯತ್ತ ಸಂಸ್ಥೆಯಾಗಿದ್ದು, ಅದು ಕಾಲಕಾಲಕ್ಕೆ ಬೆಲೆ ಪರಿಷ್ಕರಣೆ ಮಾಡುತ್ತಲೇ ಇರುತ್ತದೆ. ಮುಂದೆಯೂ ಅದು ಇದನ್ನು ಮಾಡಲಿದೆ. ಈಗಿನ ಬೆಲೆ ಏರಿಕೆಯು ಕಾಂಗ್ರೆಸ್ ಸರ್ಕಾರ ಬರುವುದಕ್ಕೂ ಮೊದಲೇ ಆಗಿದ್ದ ತೀರ್ಮಾನವಾಗಿದೆ. ಇದನ್ನು ಉದ್ಯಮಿಗಳು ಅರ್ಥ ಮಾಡಿಕೊಳ್ಳಬೇಕೆಂದು ಸಚಿವ ಎಂಬಿಪಿ ತಿಳಿಸಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News