ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ನಮ್ಮ ಸರ್ಕಾರದ ಆದ್ಯತೆ!

ಕರ್ನಾಟಕವನ್ನು ಜಾಗತಿಕ ಮಟ್ಟದಲ್ಲಿ ಮೊದಲ ಸ್ಥಾನಕ್ಕೆ ತರಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ಅದರಲ್ಲೂ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಸರ್ಕಾರ ಸಾಕಷ್ಟು ಸಾಧನೆ ಮಾಡಿದ್ದು, ಈಗಾಗಲೇ ಕರ್ನಾಟಕ ಅನ್ವೇಷಣಾ ಪ್ರಾಧಿಕಾರ ರಚಿಸಲಾಗಿದೆ- ಡಿಸಿಎಂ  ಡಾ.ಸಿ.ಎನ್.ಅಶ್ವತ್ಥನಾರಾಯಣ

Last Updated : Dec 18, 2019, 08:11 AM IST
ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ನಮ್ಮ ಸರ್ಕಾರದ ಆದ್ಯತೆ! title=

ಬೆಂಗಳೂರು: ತಂತ್ರಜ್ಞಾನದಲ್ಲಿ ಕನ್ನಡ ಬಳಕೆಗೆ ಕ್ರಮ ಕೈಗೊಳ್ಳುವುದರ ಮೂಲಕ ಭಾಷೆಯ ಬೆಳವಣಿಗೆಗೆ ಪೂರಕ ಕಾರ್ಯಕ್ರಮ ರೂಪಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ(Dr CN Ashwathnarayana) ಹೇಳಿದ್ದಾರೆ.

ಮಾಹಿತಿ ತಂತ್ರಜ್ಞಾನ(Information Technology) ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ ವತಿಯಿಂದ ಮಂಗಳವಾರ ಜ್ಞಾನಜ್ಯೋತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ನವೋದ್ಯಮ, ಉದ್ಯಮಗಳ ಜತೆ ಸಂವಾದ ಮತ್ತು ಎಕ್ಸ್ ಪೊ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಸಿಎಂ ಅಶ್ವತ್ಥನಾರಾಯಣ, "ತಂತ್ರಜ್ಞಾನದಲ್ಲಿ ಕನ್ನಡ ಬಳಕೆ ಮತ್ತು ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ(Employment) ಕಲ್ಪಿಸುವುದು ನಮ್ಮ ಸರ್ಕಾರದ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ಪರಿಣಾಮಕಾರಿ ಕ್ರಮಗಳ ಮೂಲಕ ಪ್ರತಿಭೆಗೆ ತಕ್ಕಂತೆ ಕನ್ನಡಿಗರಿಗೆ ತಂತ್ರಜ್ಞಾನ ಕ್ಷೇತ್ರ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಉದ್ಯೋಗ ಕಲ್ಪಿಸುವ ಬಗ್ಗೆ ಗಮನಹರಿಸಲಾಗುವುದು," ಎಂದರು.

"ನಮ್ಮ ಸರ್ಕಾರ 100 ದಿನಗಳನ್ನು ಯಶಸ್ವಿಯಾಗಿ ಪೂರೈಸಿ ಮುಂದಡಿ ಇಡುತ್ತಿದ್ದು, ಕರ್ನಾಟಕವನ್ನು ಜಾಗತಿಕ ಮಟ್ಟದಲ್ಲಿ ಮೊದಲ ಸ್ಥಾನಕ್ಕೆ ತರಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ಅದರಲ್ಲೂ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಸರ್ಕಾರ ಸಾಕಷ್ಟು ಸಾಧನೆ ಮಾಡಿದ್ದು, ಈಗಾಗಲೇ ಕರ್ನಾಟಕ ಅನ್ವೇಷಣಾ ಪ್ರಾಧಿಕಾರ ರಚಿಸಲಾಗಿದೆ. ಹೊಸ ಆವಿಷ್ಕಾರಗಳಿಗೆ ಪ್ರೋತ್ಸಾಹ ನೀಡಲು ವಿಶೇಷ ಕಾನೂನು ಜಾರಿಗೆ ತರುವ ಮೂಲಕ ವಿಶ್ವದಲ್ಲೇ ಈ ರೀತಿಯ ಕಾನೂನು ರೂಪಿಸಿದ ಮೊದಲ ರಾಜ್ಯ ಎಂಬ ಕೀರ್ತಿಗೆ ನಮ್ಮ ಸರ್ಕಾರ ಪಾತ್ರವಾಗಿದೆ," ಎಂದು ಇಲಾಖೆಯ ಸಾಧನೆಗಳನ್ನು ವಿವರಿಸಿದರು.

ನವೋದ್ಯಮಕ್ಕೆ ಸಹಕಾರ:
ನವೋದ್ಯಮಕ್ಕೆ ಅಗತ್ಯ ಸಹಕಾರ ನೀಡುತ್ತಿರುವ ಸರ್ಕಾರ, ಯುವ ಉದ್ಯಮಿಗಳಿಗೆ ಅಗತ್ಯ ವೇದಿಕೆ ರೂಪಿಸುತ್ತಿದೆ. ನವವೋದ್ಯಮ ಅಭಿವೃದ್ಧಿಗೆ ಉದ್ಯಮಿಗಳ ಸಹಕಾರದ ಅಗತ್ಯವಿದ್ದು, ಇದಕ್ಕೆ ಪೂರಕವಾಗಿ ನವೋದ್ಯಮ ಅಭಿವೃದ್ಧಿಗೆ ವಿಷನ್ ಗ್ರೂಪ್ ಆರಂಭಿಸಲಾಗಿದೆ. ಈ ವಿಷನ್ ಗ್ರೂಪ್ ಸಲಹೆ ಆಧರಿಸಿ ನವೋದ್ಯಮ ಅಭಿವೃದ್ಧಿಗೆ ಮತ್ತಷ್ಟು ಕಾರ್ಯಕ್ರಮಗಳನ್ನು ರೂಪಿಸಲಾಗುವುದು," ಎಂದು ತಿಳಿಸಿದರು. 

ತಂತ್ರಜ್ಞಾನಕ್ಕೆ ಒತ್ತು:
"ಉತ್ತಮ, ಪಾರದರ್ಶಕ ಆಡಳಿತ ಮತ್ತು ಆಡಳಿತ ಸುಧಾರಣೆಗೆ ತಂತ್ರಜ್ಞಾನದ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಆಡಳಿತದಲ್ಲಿ ತಂತ್ರಜ್ಞಾನವನ್ನು ಹೆಚ್ಚಿನ ಪ್ರಮಾಣದಲ್ಲಿ ಕೈಗೊಳ್ಳುವ ಕೆಲಸ ಆಗಬೇಕಿದ್ದು,. ಅದಕ್ಕೆ ತಕ್ಕಂತೆ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದು ಹೇಳಿದ ಉಪಮುಖ್ಯಮಂತ್ರಿಗಳು, ಅದಕ್ಕೆ ಪೂರಕವಾಗಿ ಮಾಹಿತಿ ತಂತ್ರಜ್ಞಾನ ನೀತಿಗಳನ್ನು ಶೀಘ್ರವೇ ಜಾರಿಗೊಳಿಸಲಾಗುವುದು. ಇದರ ಜತೆಗೆ ಡೀಪ್‌ಟೆಕ್ ನಂತಹ ಉದಯೋನ್ಮುಖ ವಲಯ ರೂಪಿಸುವ ಬಗ್ಗೆಯೂ ತೀರ್ಮಾನಿಸಲಾಗಿದ್ದು, ಇದರಿಂದ ಯುವ ಜನರಿಗೆ ಹೆಚ್ಚು ಅನುಕೂಲವಾಗಲಿದೆ," ಎಂದರು.

ಬೆಂಗಳೂರು ನಂ 1:
"ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ನವೋದ್ಯಮದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದ್ದು, ಪ್ರಾಡೆಕ್ಟ್ ಡೆವಲಪ್ಮೆಂಟ್ ನಲ್ಲಿ ರಾಜ್ಯ ಮುಂಚೂಣಿಯಲ್ಲಿದೆ. ಬೆಂಗಳೂರಿನಲ್ಲಿ ಗ್ಲೋಬಲ್ ಇನ್ ಹೌಸ್ ಡೆವಲಪ್ಮೆಂಟ್ ಆರಂಭಿಸಲಾಗುತ್ತಿದೆ. ವಿಶ್ವದ ಎಲ್ಲಾ ಕಂಪನಿಗಳ ಕಚೇರಿ ಬೆಂಗಳೂರಿನಲ್ಲಿ ಪ್ರಾರಂಭ ಮಾಡಿ ನಮ್ಮ ಉದ್ಯಮಗಳ ಅಭಿವೃದ್ಧಿಗೆ ಅನುಕೂಲವಾಗಲು ಕರ್ನಾಟಕ ತಂತ್ರಜ್ಞಾನ ಅಭಿವೃದ್ಧಿ ಮಂಡಳಿ ಆರಂಭಿಸಲಾಗಿದೆ," ಎಂದು ಹೇಳಿದರು.

ಶಿಕ್ಷಣಕ್ಕೆ ವಿಷನ್‌ ಗ್ರೂಪ್‌:
"ನಮ್ಮ ಶಿಕ್ಷಣ ಪದ್ಧತಿ ಇನ್ನೂ ಹಳೆಯ ಪದ್ಧತಿಯಲ್ಲೇ ಮುಂದುವರಿದಿದ್ದು, ಜಾಗತಿಕ ಬದಲಾವಣೆಗೆ ತಕ್ಕಂತೆ ಇದನ್ನು ಬದಲಾವಣೆ ಮಾಡುವ ಅಗತ್ಯವುದೆ. ಅದಕ್ಕಾಗಿಯೇ ವಿಷನ್ ಗ್ರೂಪ್ ರಚಿಸಲಾಗಿದೆ. ವಿಶ್ವವಿದ್ಯಾಲಯಗಳಲ್ಲಿ ಗುಣಮಟ್ಟದ ಕೋರ್ಸ್‌ಗಳನ್ನು ಆರಂಭಿಸಲು ತಾಂತ್ರಿಕ ವಿಶ್ವವಿದ್ಯಾಲಯಗಳು ಆದ್ಯತೆ ನೀಡಬೇಕಾಗಿದೆ. ಇದಕ್ಕೆ ಸರ್ಕಾರ ಎಲ್ಲಾ ರೀತಿಯ ಸಹಕಾರ ನೀಡಲಿದೆ," ಎಂದರು.
ಕಾರ್ಯಕ್ರಮದಲ್ಲಿ ಫ್ರಾನ್ಸ್ ದೇಶದ ಕಾನ್ಸುಲೇಟ್ ಜನರಲ್ ಮಾರ್ಜೋರಿ ವ್ಯಾನ್ ಬೆಲಿಜಮ್, ವಿಷನ್ ಗ್ರೂಪ್ ಅಧ್ಯಕ್ಷ ಪ್ರಶಾಂತ್ ಪ್ರಕಾಶ್, ವಿಟಿಯು ಕುಲಪತಿ ಕರಿಸಿದ್ದಪ್ಪ ಮತ್ತಿತರರು ಪಾಲ್ಗೊಂಡಿದ್ದರು.
 

Trending News