ಆಸ್ತಿ ಲೂಟಿಗೆ ಮುಂದಾದ ಕಾಂಗ್ರೆಸ್: ನರೇಂದ್ರ ಮೋದಿ

Narendra Modi Campaign : ಕಾಂಗ್ರೆಸ್ ಪಕ್ಷವು ಕುಟುಂಬವಾದದಲ್ಲಿ ದೇಶಹಿತವನ್ನು ಮರೆತಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಟೀಕಿಸಿದ್ದಾರೆ.

Written by - Prashobh Devanahalli | Last Updated : Apr 28, 2024, 01:20 PM IST
  • ಬೆಳಗಾವಿಯಲ್ಲಿ ಪ್ರಧಾನಿ ಮೋದಿ ಸಮಾವೇಶ
  • ಕಾಂಗ್ರೆಸ್ ಪಕ್ಷವು ಕುಟುಂಬವಾದದಲ್ಲಿ ದೇಶಹಿತವನ್ನು ಮರೆತಿದೆ
  • ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಟೀಕೆ
ಆಸ್ತಿ ಲೂಟಿಗೆ ಮುಂದಾದ ಕಾಂಗ್ರೆಸ್: ನರೇಂದ್ರ ಮೋದಿ title=

ಬೆಳಗಾವಿ : ಇಂದು ಬೆಳಿಗ್ಗೆ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಕೋವಿಡ್ ಅವಧಿಯಲ್ಲಿ ಲಸಿಕೆಯನ್ನು ಬಿಜೆಪಿ ಲಸಿಕೆ ಎಂದು ಕಾಂಗ್ರೆಸ್ಸಿಗರು ಟೀಕಿಸಿ ವಿರೋಧಿಸಿದ್ದರು. ಜನರನ್ನು ಗೊಂದಲದಲ್ಲಿ ಸಿಲುಕಿಸಿದ ಅವರು, ಇವಿಎಂ ವಿಚಾರದಲ್ಲಿ ಕೂಡ ಸುಳ್ಳು ಹೇಳಿ ಗೊಂದಲ ಮೂಡಿಸಿದ್ದರು. ಸುಪ್ರೀಂ ಕೋರ್ಟ್ ಕೆಲದಿನಗಳ ಹಿಂದೆ ಇವಿಎಂ ವಿಷಯದಲ್ಲಿ ಸ್ಪಷ್ಟ ಆದೇಶ ನೀಡಿದೆ ಎಂದು ವಿವರಿಸಿದರು.

ಬಿಜೆಪಿ- ಎನ್‍ಡಿಎ ಸರಕಾರವು ಕಳೆದ 10 ವರ್ಷಗಳಲ್ಲಿ ಭಾರತೀಯ ನ್ಯಾಯಸಂಹಿತಾ ಮೂಲಕ ಆಂಗ್ಲರ ಮುಷ್ಟಿಯಿಂದ ಜನರನ್ನು ಹೊರತಂದಿದೆ. ಗುಲಾಮಿ ಪದ್ಧತಿಯಿಂದ ಭಾರತೀಯರನ್ನು ಹೊರಕ್ಕೆ ತರಲಾಗಿದೆ ಎಂದು ವಿವರಿಸಿದರು. ಜನರಿಗೆ ನ್ಯಾಯ ನೀಡಲು ಪೂರಕ ಕಾನೂನು ಇದು. ಅತ್ಯಾಚಾರಿಗಳಿಗೆ ಕಠಿಣ ಕಾನೂನು ಇದೆ. ಶೀಘ್ರವೇ ಇದು ಜಾರಿಯಾಗಲಿದೆ ಎಂದರು.

ಕರ್ನಾಟಕದ ಕಾಂಗ್ರೆಸ್ ಸರಕಾರದ ಆಡಳಿತದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ಚಿಕ್ಕೋಡಿಯಲ್ಲಿ ಜೈನ ಮುನಿ ಹತ್ಯೆ, ಬೆಳಗಾವಿಯಲ್ಲಿ ನಡೆದ ಮಹಿಳೆ ಮೇಲಿನ ದೌರ್ಜನ್ಯವನ್ನು ಪ್ರಸ್ತಾಪಿಸಿದ ಅವರು, ಹುಬ್ಬಳ್ಳಿಯಲ್ಲಿ ಕಾಲೇಜಿನ ವಿದ್ಯಾರ್ಥಿನಿ ಹತ್ಯೆಯಿಂದ ದೇಶದಲ್ಲೇ ಆತಂಕ ಮೂಡಿದೆ. ಕಾಂಗ್ರೆಸ್ ಸರಕಾರವು ತುಷ್ಟೀಕರಣದ ಕಡೆ ಗಮನ ಕೊಡುತ್ತಿದೆ. ನೇಹಾರ ಕುರಿತು ಕಾಂಗ್ರೆಸ್ಸಿಗರಿಗೆ ಕಳಕಳಿ ಇಲ್ಲ ಎಂದು ಟೀಕಿಸಿದರು. ಬೆಂಗಳೂರಿನಲ್ಲಿ ಬಾಂಬ್ ಸ್ಫೋಟ ಸಂಭವಿಸಿದೆ ಎಂದರು.

ಇದನ್ನೂ ಓದಿ: ಸಂಸದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣ : ಕೂಡಲೇ ಬಂಧನಕ್ಕೆ ಆಗ್ರಹ

ಕಾಂಗ್ರೆಸ್ ಪಕ್ಷವು ಆಡಳಿತ ನಡೆಸಲು ಸಾಧ್ಯವಾಗದಿದ್ದರೆ ರಾಜೀನಾಮೆ ಕೊಡಲಿ ಎಂದು ಆಗ್ರಹಿಸಿದರು. ಪಿಎಫ್‍ಐ ಜೊತೆ ಹೊಂದಾಣಿಕೆ ಮಾಡಿಕೊಂಡ ಪಕ್ಷ ಕಾಂಗ್ರೆಸ್ ಎಂದು ಆಕ್ಷೇಪಿಸಿದರು. ಬಿಜೆಪಿ ಸರಕಾರವು ಪಿಎಫ್‍ಐ ನಿಷೇಧಿಸಿದ ಪಕ್ಷ ಎಂದು ತಿಳಿಸಿದರು.

ಸ್ವಾತಂತ್ರ್ಯ ಚಳವಳಿಯನ್ನು ಮತಬ್ಯಾಂಕಿಗಾಗಿ ತುಷ್ಟೀಕರಣದ ಚರಿತ್ರೆಯಾಗಿ ಮಾಡಿದ ಪಕ್ಷ ಕಾಂಗ್ರೆಸ್. ಭಾರತದ ಮಹಾರಾಜರು ಅತ್ಯಾಚಾರಿಗಳು; ಬಡವರ ಜಮೀನನ್ನು ಕಿತ್ತುಕೊಂಡವರೆಂದು ಚರಿತ್ರೆ ಬರೆಸಿದ್ದರು. ಶಿವಾಜಿ ಮಹಾರಾಜ, ಕಿತ್ತೂರು ರಾಣಿ ಚನ್ನಮ್ಮರ ಅವಮಾನ ಮಾಡಿದ ಪಕ್ಷ ಕಾಂಗ್ರೆಸ್ ಎಂದು ಟೀಕಿಸಿದರು. ನಿಜವಾಗಿ ನವಾಬರು, ನಿಜಾಮರು, ಸುಲ್ತಾನರು ಅತ್ಯಾಚಾರ ಮಾಡಿದವರು ಎಂದು ವಿವರಿಸಿದರು.

ಕಾಂಗ್ರೆಸ್ಸಿಗೆ ಔರಂಗಜೇಬನ ಅತ್ಯಾಚಾರ, ಮಂದಿರಗಳ ಧ್ವಂಸ ಮಾಡಿದ್ದು ನೆನಪಿಗೆ ಬರುವುದಿಲ್ಲ. ದೇಗುಲಗಳನ್ನು ಅವಮಾನ ಮಾಡುವವರ ಜೊತೆ ಕಾಂಗ್ರೆಸ್ ಪಕ್ಷ ಹೊಂದಾಣಿಕೆ ಮಾಡಿಕೊಂಡಿದೆ ಎಂದು ಆಕ್ಷೇಪಿಸಿದರು. ಭಾರತದ ವಿಭಜನೆಯಲ್ಲಿ ದೊಡ್ಡ ಪಾತ್ರ ವಹಿಸಿದವರನ್ನು ಕಾಂಗ್ರೆಸ್ ಪಕ್ಷ ಬೆಂಬಲಿಸುತ್ತದೆ ಎಂದು ತಿಳಿಸಿದರು. ಕಾಂಗ್ರೆಸ್ಸಿನ ತುಷ್ಟೀಕರಣ ನೀತಿ ಅವರ ಪ್ರಣಾಳಿಕೆಯಲ್ಲೂ ವಿವರವಾಗಿ ಹೊರಬಂದಿದೆ ಎಂದರು.

ಕಾಂಗ್ರೆಸ್ ಅಧಿಕಾರ ಎಂದರೆ ಅಭಿವೃದ್ಧಿಹೀನ ಸ್ಥಿತಿ ಎಂದು ಜನರು ಅರ್ಥ ಮಾಡಿಕೊಂಡಿದ್ದಾರೆ. ಹಿಂದೆ ವಿದೇಶಿ ಹೂಡಿಕೆ ಕರ್ನಾಟಕದಲ್ಲಿ ಗರಿಷ್ಠ ಮಟ್ಟದಲ್ಲಿತ್ತು. ಕಾಂಗ್ರೆಸ್ ಅಧಿಕಾರದಲ್ಲಿ ಅಭಿವೃದ್ಧಿಶೂನ್ಯ ಸ್ಥಿತಿ ಇದೆ ಎಂದು ವಿವರಿಸಿದರು. ಕಾಂಗ್ರೆಸ್ ಎಂದರೆ ದಿವಾಳಿ ಪರಿಸ್ಥಿತಿ ಎಂದು ಜನರಿಗೆ ಅರ್ಥವಾಗಿದೆ ಎಂದು ತಿಳಿಸಿದರು.

ಬಿಜೆಪಿ- ಎನ್‍ಡಿಎ ಸರಕಾರವು ಸ್ವಸಹಾಯ ಗುಂಪು, ಕೃಷಿ ಉತ್ಪಾದನಾ ಸಂಘಗಳಿಗೆ ಬೆಂಬಲ ನೀಡಿದೆ. 10 ವರ್ಷಗಳಲ್ಲಿ 10 ಕೋಟಿ ಮಹಿಳೆಯರು ಸ್ವಸಹಾಯ ಗುಂಪುಗಳ ಪ್ರಯೋಜನ ಪಡೆದಿದ್ದಾರೆ. ಇಂಧನದಲ್ಲಿ ಇಥೆನಾಲ್ ಸೇರ್ಪಡೆಯಿಂದ ಕೃಷಿಕರಿಗೆ ಪ್ರಯೋಜನವಾಗಿದೆ. ಆದರೆ, ಕಾಂಗ್ರೆಸ್ ಪಕ್ಷವು ರೈತದ್ರೋಹಿಯಾಗಿದೆ. ಇಲ್ಲಿ ಬಿಜೆಪಿ ಸರಕಾರ ಇದ್ದಾಗ ರೈತರ ಖಾತೆಗೆ 10 ಸಾವಿರ ಸಿಗುತ್ತಿತ್ತು. 4 ಸಾವಿರವನ್ನು ಕಾಂಗ್ರೆಸ್ ಸರಕಾರ ಕಡಿತಗೊಳಿಸಿದೆ ಎಂದು ತಿಳಿಸಿದರು. ಆದರೆ, ರೈತರಿಗೆ 6 ಸಾವಿರ ಮುಂದುವರೆಯಲಿದೆ ಎಂದು ಭರವಸೆ ನೀಡಿದರು.

ಇದನ್ನೂ ಓದಿ: ಜನರನ್ನು ಹಸಿವಿನಿಂದ ಬಳಲಲು ಬಿಡಲಿಲ್ಲ ಕೇಂದ್ರ ಸರ್ಕಾರ: ಪ್ರಹ್ಲಾದ ಜೋಶಿ 

ಕಾಂಗ್ರೆಸ್ಸಿಗರು ನಿಮ್ಮ ಬ್ಯಾಂಕಿನ ಹಣ, ಆಸ್ತಿ, ಮಹಿಳೆಯರ ಬಳಿ ಇರುವ ಒಡವೆ ಸೇರಿ ಮಂಗಲಸೂತ್ರದ ಎಕ್ಸ್‍ರೇ ಮಾಡಲಿದ್ದಾರೆ. ಮುಂದೆ ನಿಮ್ಮ ಸಂಪತ್ತಿನ ಲೂಟಿ ಮಾಡಲಿದ್ದಾರೆ. ಅದನ್ನು ತಮ್ಮ ಮತಬ್ಯಾಂಕಿಗೆ ಕೊಡಲಿದ್ದಾರೆ ಎಂದು ವಿವರಿಸಿದರು. ಮೋದಿ ಬದುಕಿರುವವರೆಗೆ ಕಾಂಗ್ರೆಸ್ಸಿಗರ ಈ ಕನಸು ನನಸಾಗದು. ಅವರ ಆಟ ನಡೆಯುವುದಿಲ್ಲ ಎಂದು ಎಚ್ಚರಿಸಿದರು.

ಪಿತ್ರಾರ್ಜಿತ ಆಸ್ತಿಗೆ ಸಂಬಂಧಿಸಿ ಹೊಸ ನೀತಿ ತರಲು ಕಾಂಗ್ರೆಸ್ ಮುಂದಾಗಿದೆ. ಮಕ್ಕಳಿಗಾಗಿ ಶೇಖರಿಸಿಟ್ಟ ಹಣ, ಆಸ್ತಿಯನ್ನು ನೀವು ಅವರಿಗೆ ಕೊಡಲು ಸಾಧ್ಯವಾಗದು. ಅದನ್ನು ಮಕ್ಕಳಿಗೆ ಕೊಡಲು ಶೇ 55ರಷ್ಟು ತೆರಿಗೆ ಪಾವತಿಸಲು ಕಾಂಗ್ರೆಸ್ ಕೇಳಲಿದೆ. ಅದನ್ನು ಮತಬ್ಯಾಂಕಿಗೆ ಹಂಚಲು ನಿಮ್ಮ ಸಂಪತ್ತಿನ ಡಕಾಯಿತಿ ಮಾಡಲು ಮುಂದಾಗಿದ್ದಾರೆ ಎಂದು ಟೀಕಿಸಿದರು. ಇದನ್ನು ಹಿಂದಿನ ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದಾರೆ ಎಂದು ತಿಳಿಸಿದರು.

ಇಂಥ ಚಿಂತನೆಗಳನ್ನು ಹೊಂದಿದ ಕಾಂಗ್ರೆಸ್ಸಿಗರಿಗೆ ಪಾಠ ಕಲಿಸಿ ಎಂದು ತಿಳಿಸಿದರು. ಸೇನೆಯಲ್ಲಿ ಯುವತಿಯರಿಗೆ ಅವಕಾಶ ಕೊಡಲಾಗುತ್ತಿದೆ. ಸಿಆರ್‍ಪಿಎಫ್‍ನಲ್ಲೂ ಮಹಿಳೆಯರ ಪ್ರಾತಿನಿಧ್ಯ ಹೆಚ್ಚಾಗಿದೆ. ಜನರ ಕನಸೇ ಬಿಜೆಪಿ ಸಂಕಲ್ಪ ಎಂದು ಅವರು ನುಡಿದರು. ದೇಶಕ್ಕಾಗಿ ಸದಾ 24-7 ಗಂಟೆಕಾಲ ದುಡಿದು 2047ರ ವಿಕಸಿತ ಭಾರತದ ಸಂಕಲ್ಪವನ್ನು ಈಡೇರಿಸುತ್ತೇವೆ ಎಂದರು.

ಕರ್ನಾಟಕದ ಜನರ ಆಶೀರ್ವಾದ ಕೇಳಲು ಬಂದಿದ್ದೇನೆ. ಜಗದೀಶ್ ಶೆಟ್ಟರ್, ಅಣ್ಣಾಸಾಹೇಬ ಜೊಲ್ಲೆ ಅವರನ್ನು ಗರಿಷ್ಠ ಮತದಿಂದ ಚುನಾಯಿಸಿ ಎಂದು ಹೇಳಿದರು. ಕಮಲದ ಚಿಹ್ನೆಗೆ ನೀಡಿದ ಮತವು ಮೋದಿಯವರಿಗೆ ಹೋಗಲಿದೆ. ಮೋದಿಯವರನ್ನು ಸಶಕ್ತಗೊಳಿಸಲು ಬಿಜೆಪಿಗೆ ಮತದಾನ ಮಾಡಿ ಎಂದು ವಿನಂತಿಸಿದರು. ಪ್ರತಿ ಬೂತ್‍ನಲ್ಲಿ ಬಿಜೆಪಿ ಗೆಲ್ಲುವಂತೆ ನೋಡಿಕೊಳ್ಳಿ ಎಂದು ತಿಳಿಸಿದರು.

ಕರ್ನಾಟಕದ ಎಲ್ಲ ಮತದಾರರಿಗೆ ಅಭಿನಂದನೆ ಸಲ್ಲಿಸಿದರು. ಕರ್ನಾಟಕದ ಎಲ್ಲೆಡೆ ಮತ್ತೊಮ್ಮೆ ಮೋದಿ ಎಂಬ ಧ್ವನಿಯೇ ಕೇಳುತ್ತಿದೆ ಎಂದರು. ನಾವೆಲ್ಲರೂ ಛತ್ರಪತಿ ಶಿವಾಜಿಯನ್ನು ಗೌರವಿಸುವವರು. ಭಗವಾನ್ ಬಸವೇಶ್ವರರನ್ನು ಗೌರವಿಸುವವರು. ಬಸವೇಶ್ವರರು ಪ್ರಜಾಪ್ರಭುತ್ವದ ಮಹತ್ವವನ್ನು ತಿಳಿಸಿಕೊಟ್ಟವರು. ಭಾರತವನ್ನು ಶಕ್ತಿಶಾಲಿ ಮಾಡುವುದನ್ನು ನೀವೆಲ್ಲರೂ ಹೆಮ್ಮೆಯಿಂದ ನಿರೀಕ್ಷಿಸುತ್ತೀರಿ ಎಂದು ಆಶಿಸಿದರು. ಭಾರತದ 25 ಕೋಟಿ ಜನರು ಬಿಪಿಎಲ್ ರೇಖೆಯಿಂದ ಮೇಲೆ ಬಂದಿದ್ದಾರೆ. ಇದರಿಂದ ಹಿಂದೂಸ್ತಾನಿಗಳ ಆತ್ಮವಿಶ್ವಾಸ ಹೆಚ್ಚಾಗಿದೆ. ಬಡವರ ಕಲ್ಯಾಣ, ಒಳಿತಿಗಾಗಿ ಮತ್ತೊಮ್ಮೆ ಮೋದಿ ಸರಕಾರ ಬರಬೇಕಿದೆ ಎಂದರು.

ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಅವರು ಮಾತನಾಡಿ, ರಾಜ್ಯ ಸರಕಾರವು ಸಂಪೂರ್ಣ ದಿವಾಳಿಯಾಗಿದೆ ಎಂದು ಟೀಕಿಸಿದರು. ಜಗದೀಶ್ ಶೆಟ್ಟರ್, ಅಣ್ಣಾಸಾಬೇಬ್ ಜೊಲ್ಲೆ ಅವರನ್ನು ಒಂದು ಲಕ್ಷಕ್ಕೂ ಹೆಚ್ಚು ಅಂತರದಲ್ಲಿ ಗೆಲ್ಲಿಸುತ್ತೇವೆ. ರಾಜ್ಯದ ಎಲ್ಲ 28 ಸ್ಥಾನಗಳನ್ನು ಗೆಲ್ಲಿಸಿಕೊಡುತ್ತೇವೆ ಎಂದು ವಿಶ್ವಾಸದಿಂದ ಹೇಳಿದರು. ಅಭ್ಯರ್ಥಿಗಳಾದ ಜಗದೀಶ್ ಶೆಟ್ಟರ್ (ಬೆಳಗಾವಿ), ಅಣ್ಣಾಸಾಬೇಬ್ ಜೊಲ್ಲೆ (ಚಿಕ್ಕೋಡಿ), ಸಂಸದರಾದ ಮಂಗಳಾ ಅಂಗಡಿ, ಪ್ರಮುಖರಾದ ಡಾ.ಪ್ರಭಾಕರ ಕೋರೆ, ಈರಣ್ಣ ಕಡಾಡಿ, ಮಾಜಿ ಸಚಿವರು, ಶಾಸಕರು, ಪಕ್ಷದ ರಾಜ್ಯ- ಜಿಲ್ಲಾ ಪದಾಧಿಕಾರಿಗಳು, ಪಕ್ಷದ ಮುಖಂಡರು ವೇದಿಕೆಯಲ್ಲಿದ್ದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News