ಬೆಂಗಳೂರು : ವರದಕ್ಷಿಣೆ ಕಿರುಕುಳಕ್ಕೆ ಸಿಲಿಕಾನ್ ಸಿಟಿಯಲ್ಲಿ ಗೃಹಿಣಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿನ ಹೆಚ್.ಎಸ್.ಆರ್ ಲೇಔಟ್ನಲ್ಲಿ ಶುಕ್ರವಾರ ಸಂಜೆ ನಡೆದಿದೆ.
ಮೈಸೂರು ಮಹಾನಗರಪಾಲಿಕೆ ಸದಸ್ಯ ನಾಗಭೂಷಣ್ ಅವರ ಪುತ್ರಿ ವನಿತಾ ಆತ್ಮಹತ್ಯೆ ಮಾಡಿಕೊಂಡ ನವ ವಿವಾಹಿತೆ. ಕಳೆದ 7 ತಿಂಗಳ ಹಿಂದೆಯಷ್ಟೇ ತಮಿಳುನಾಡು ಮೂಲದ ವಸಂತ್ ಎಂಬುವರಿಗೆ ಈಕೆಯನ್ನು ಮದುವೆ ಮಾಡಿಕೊಡಲಾಗಿ ಬೆಂಗಳೂರಿನ ಹೆಚ್ ಎಸ್ ಆರ್ ಲೇಔಟ್‌ನಲ್ಲಿ ವಾಸವಿದ್ದರು.
ನಿನ್ನೆ ಸಂಜೆ 6 ಗಂಟೆ ಸುಮಾರಿಗೆ ವನಿತಾ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದು, ನಾಲ್ಕು ಪುಟಗಳ ಡೆತ್ನೋಟ್ ಕೂಡಾ ಬರೆದಿದ್ದಾರೆ. ಡೆತ್ನೋಟ್ನಲ್ಲಿ ಅತ್ತೆ ಗಾಯತ್ರಿ ಅವರು ತಂದೆ ಮನೆಯಿಂದ ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದರು ಎಂದು ಉಲ್ಲೇಖಿಸಿದ್ದಾರೆ.
ಇನ್ನು, ನಿನ್ನೆ 8 ಗಂಟೆ ಸುಮಾರಿಗೆ ಗಂಡ ಮನೆಗೆ ಬಂದಾಗ ವಿಷಯ ಗೊತ್ತಾಗಿದೆ. ನಂತರ ಅವರು ಹೆಚ್.ಎಸ್.ಆರ್ ಲೇಔಟ್ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಮೃತ ದೇಹವನ್ನು ಸೆಂಟ್ ಜಾನ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ.
ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.