ಬೆಂಗಳೂರು: ದೇವಸ್ಥಾನಗಳಲ್ಲಿ ಇನ್ಮುಂದೆ ಅನ್ನದಾಸೋಹ, ನೈವೇದ್ಯ, ಪ್ರಸಾದ ವಿತರಣೆಗೆ ಅನುಮತಿ ಕಡ್ಡಾಯಗೊಳಿಸಿ ಧಾರ್ಮಿಕ ದತ್ತಿ ಇಲಾಖೆ(ಮುಜರಾಯಿ ಇಲಾಖೆ) ಖಡಕ್ ಆದೇಶ ಹೊರಡಿಸಿದೆ.
ಚಾಮರಾಜನಗರ ಜಿಲ್ಲೆಯ ಸುಳ್ವಾಡಿ ಗ್ರಾಮದ ಮಾರಮ್ಮ ದೇವಾಲಯದಲ್ಲಿ ಪ್ರಸಾದದಲ್ಲಿ ವಿಷ ಬೆರೆಸಿದ್ದ ಕಾರಣ 14 ಮಂದಿ ಸಾವನ್ನಪ್ಪಿ, 90ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬೆನ್ನಲ್ಲೇ ಧಾರ್ಮಿಕ ದತ್ತಿ ಇಲಾಖೆ ಈ ಖಡಕ್ ಆದೇಶ ನೀಡಿದೆ.
ಅಧಿಕಾರಿಗಳಿಂದ ಅನುಮತಿ ಪಡೆಯದೇ ಪ್ರಸಾದ ವಿತರಣೆ, ಅನ್ನದಾಸೋಹ ಮಾಡುವಂತಿಲ್ಲ. ಪ್ರಸಾದ ತಯಾರಿಸುವ ಸ್ಥಳದಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಬೇಕು, ಅನಧಿಕೃತವಾಗ ಇತರರು ಅಡುಗೆ ಕೋಣೆ ಪ್ರವೇಶಿಸುವಂತಿಲ್ಲ, ಪ್ರಸಾದ ವಿತರಣೆಗೂ ಮುನ್ನ ಪ್ರಸಾದವನ್ನು ಆರೋಗ್ಯ ಇಲಾಖೆಯ ಸುರಕ್ಷತಾ ತಂಡದಿಂದ ಪರೀಕ್ಷೆಗೆ ಒಳಪಡಿಸಿ ಪ್ರಸಾದವು ಯೋಗ್ಯವಾಗಿರುವ ಬಗ್ಗೆ ದೃಢೀಕರಣ ಪಡೆದುಕೊಳ್ಳಬೇಕು. ಅವರ ಅನುಮತಿ ಬಳಿಕವೇ ಭಕ್ತಾದಿಗಳಿಗೆ ಪ್ರಸಾದ ವಿತರಿಸಬೇಕು ಎಂದು ಧಾರ್ಮಿಕ ದತ್ತಿ ಇಲಾಖೆ ಸೂಚನೆ ನೀಡಿದೆ.
ಕರ್ನಾಟಕ ರಾಜ್ಯದ ಧಾರ್ಮಿಕ ದತ್ತಿ ಇಲಾಖೆಗೆ ಒಳಪಡುವ ಎಲ್ಲಾ ದೇವಾಲಯಗಳಿಗೂ ಅನ್ವಯಿಸಲಿದ್ದು, ಈ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಇಲ್ಲವಾದಲ್ಲಿ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಇಲಾಖೆ ಎಚ್ಚರಿಕೆ ನೀಡಿದೆ. ಅಷ್ಟೇ ಅಲ್ಲದೆ, ಸುಳ್ವಾಡಿ ಮಾರಮ್ಮನ ದೇವಾಲಯವನ್ನು ತನ ಸುಪರ್ದಿಗೆ ತೆಗೆದುಕೊಳ್ಳಲು ಸರ್ಕಾರ ಚಿಂತನೆಯನ್ನೂ ನಡೆಸಿದೆ.